ತಮ್ಮ ವಿರುದ್ಧ ಸದನದಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪ ಕೇಳಿ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐಗೆ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡಿದ ಲೋಕಪಾಲ್ ಆದೇಶ ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯನ್ನು ಇಂದು (ಮಂಗಳವಾರ) ನ್ಯಾಯಮೂರ್ತಿಗಳಾದ ಅನಿಲ್ ಕ್ಷೇತ್ರರ್ಪಾಲ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರಿರುವ ವಿಭಾಗೀಯ ಪೀಠ ವಿಚಾರಣೆ ನಡೆಸಲಿದೆ.
ಲೋಕಪಾಲ್ ಕಾಯಿದೆಯ ಸೆಕ್ಷನ್ 20(7)(ಎ) ಮತ್ತು ಸೆಕ್ಷನ್ 23(1) ರ ಅಡಿಯಲ್ಲಿ ತನ್ನ ಅಧಿಕಾರ ಚಲಾಯಿಸಿದ್ದ ಲೋಕಪಾಲ್ ನವೆಂಬರ್ 12 ರಂದು ಸಿಬಿಐಗೆ ನಾಲ್ಕು ವಾರಗಳಲ್ಲಿ ಆರೋಪಪಟ್ಟಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತ್ತು. ಜೊತೆಗೆ ಆರೋಪಪಟ್ಟಿಯ ಪ್ರತಿಯನ್ನು ತನಗೆ ಸಲ್ಲಿಸುವಂತೆ ಆದೇಶಿಸಿತ್ತು.
ಉದ್ಯಮಿ ದರ್ಶನ್ ಹಿರಾನಂದಾನಿ ಪರವಾಗಿ ಸಂಸತ್‌ನಲ್ಲಿ ಪ್ರಶ್ನೆ ಕೇಳಲು ಮಹುವಾ ಅವರು ನಗದು ಹಾಗೂ ಉಡುಗೊರೆಗಳನ್ನು ಪಡೆದಿರುವುದಾಗಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪಿಸಿದ್ದರು. ಸೆಕ್ಷನ್ 20(3)(ಎ) ಅಡಿಯಲ್ಲಿ ಎಲ್ಲಾ ಅಂಶಗಳನ್ನು ತನಿಖೆ ಮಾಡಿ 6 ತಿಂಗಳೊಳಗೆ ವರದಿ ಸಲ್ಲಿಸುವಂತೆ ಲೋಕಪಾಲ್ ಈ ಹಿಂದೆ ಸಿಬಿಐಗೆ ನಿರ್ದೇಶಿಸಿತ್ತು.
ವಿವರವಾದ ಲಿಖಿತ ಮತ್ತು ಮೌಖಿಕ ವಾದ ಪರಿಗಣಿಸದೆಯೇ ಅನುಮತಿ ನೀಡಿರುವುದರಿಂದ ಲೋಕಪಾಲ್ ನೀಡಿರುವ ಆದೇಶ ಲೋಕಪಾಲ್ ಮತ್ತು ಲೋಕಾಯುಕ್ತ ಕಾಯಿದೆ- 2013ಕ್ಕೆ ವಿರುದ್ಧವಾಗಿದ್ದು ಸ್ವಾಭಾವಿಕ ನ್ಯಾಯ ತತ್ವದ ಉಲ್ಲಂಘನೆಯಾಗಿದೆ ಎಂದು ಮೊಯಿತ್ರಾ ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.
ಅನುಮತಿ ಆದೇಶದ ಜಾರಿಯನ್ನು ತಕ್ಷಣವೇ ತಡೆಹಿಡಿಯದಿದ್ದರೆ ಸಿಬಿಐ ಆರೋಪಪಟ್ಟಿ ಸಲ್ಲಿಸಲು ಮುಂದಾಗುತ್ತದೆ. ಇದರಿಂದ ತನಗೆ ಸರಿಪಡಿಸಲಾಗದಷ್ಟು ಹಾನಿ ಮತ್ತು ತನ್ನಬಗೆಗೆ ಪೂರ್ವಾಗ್ರಹ ಮೂಡುತ್ತದೆ. ಇದರಿಂದ ತಾನು ಸಲ್ಲಿಸುತ್ತಿರುವ ರಿಟ್ ಅರ್ಜಿ ಬಹುತೇಕ ಅರ್ಹತೆ ಕಳೆದುಕೊಳ್ಳುತ್ತದೆ. ಆದ್ದರಿಂದ ನ್ಯಾಯಾಲಯ ತುರ್ತಾಗಿ ಮಧ್ಯಪ್ರವೇಶಿಸಬೇಕು ಎಂದು ಅವರು ಕೋರಿದ್ದಾರೆ.
ಮೊಯಿತ್ರಾ ಅವರು ವಕೀಲ ಸಮುದ್ರ ಸಾರಂಗಿ ಅವರ ಮೂಲಕ ಅರ್ಜಿ ಸಲ್ಲಿಸಿದ್ದಾರೆ.