ಸುದ್ದಿಗಳು

ಮಳಲಿ ಮಸೀದಿ ವಿವಾದ: ಸೋಮವಾರಕ್ಕೆ ಪ್ರಕರಣ ಮುಂದೂಡಿದ ಮಂಗಳೂರು ನ್ಯಾಯಾಲಯ

ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ನಿಖಿತಾ ಅಕ್ಕಿ ಅವರು ಒಂದು ದಿನ ಸಮಯಾವಕಾಶ ನೀಡಿ ಪ್ರಕರಣವನ್ನು ಫೆಬ್ರವರಿ 19ಕ್ಕೆ (ಸೋಮವಾರ) ಮುಂದೂಡಿದರು.

Bar & Bench

ಮಂಗಳೂರು ಸಮೀಪ ಇರುವ ಮಳಲಿ ಮಸೀದಿಯನ್ನು ಉತ್ತರಪ್ರದೇಶದ ವಾರಾಣಸಿಯ ಜ್ಞಾನವಾಪಿ ಮಸೀದಿಯಂತೆಯೇ ಸಮೀಕ್ಷೆ ನಡೆಸುವಂತೆ ಕೋರಿ ಹಿಂದೂ ದಾವೆದಾರರು ಹೂಡಿದ್ದ ಅರ್ಜಿಯ ವಿಚಾರಣೆಯನ್ನು ಮಂಗಳೂರು ನ್ಯಾಯಾಲಯ ಸೋಮವಾರಕ್ಕೆ ಮುಂದೂಡಿದೆ.

ಮಳಲಿ ಮಸೀದಿ ಸಮೀಕ್ಷೆ ವಿಚಾರವಾಗಿ ಇಂದು ಕೂಡ ಆಕ್ಷೇಪ ವ್ಯಕ್ತಪಡಿಸಿದ ಮುಸ್ಲಿಂ ದಾವೆದಾರರ ಪರ ವಕೀಲ ಎಂ ಪಿ ಶೆಣೈ ಮಸೀದಿ ವಕ್ಫ್‌ ಆಸ್ತಿ ಎಂಬುದಕ್ಕೆ ಸಂಬಂಧಿಸಿದ ದಾವೆ ಕುರಿತ ಪ್ರಮಾಣಿತ ಆದೇಶ ಹೈಕೋರ್ಟ್‌ನಿಂದ ದೊರೆತ ಬಳಿಕವಷ್ಟೇ ವಾದ ಮುಂದುವರೆಸುವುದಾಗಿ ಮನವಿ ಮಾಡಿದರು.

ಇತ್ತ ಕೋರ್ಟ್‌ ಕಮಿಷನರ್‌ ನೇಮಕಕ್ಕೆ ಒತ್ತಾಯಿಸಿದ ಹಿಂದೂ ದಾವೆದಾರರ ಪರ ವಕೀಲ ಚಿದಾನಂದ ಎಂ ಕೆದಿಲಾಯ ಅವರು  ಮಳಲಿ ಮಸೀದಿ ಜಾಗ ವಕ್ಫ್‌ ಆಸ್ತಿ ಹೌದೆ ಅಥವಾ ಇಲ್ಲವೇ ಎಂದು ನಿರ್ಧರಿಸಲು ಮಂಗಳೂರು ನ್ಯಾಯಾಲಯಕ್ಕೆ ಹೈಕೋರ್ಟ್‌ ಈಗಾಗಲೇ ನಿರ್ದೇಶನ ನೀಡಿದೆ. ವಿಚಾರಣೆಗೇನೂ ತಡೆ ನೀಡಿಲ್ಲ. ಹೆಚ್ಚು ಕಾಯುತ್ತಾ ಕೂರುವುದರಲ್ಲಿ ಅರ್ಥವಿಲ್ಲ ಎಂದು ಗಮನ ಸೆಳೆದರು.

ವಾದಗಳನ್ನು ಆಲಿಸಿದ ಮೂರನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶೆ ನಿಖಿತಾ ಅಕ್ಕಿ ಅವರು  ಒಂದು ದಿನ ಸಮಯಾವಕಾಶ ನೀಡಿ ಪ್ರಕರಣವನ್ನು ಫೆಬ್ರವರಿ 19ಕ್ಕೆ (ಸೋಮವಾರ) ಮುಂದೂಡಿದರು.

ಈಚೆಗೆ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಪೂಜೆ ಸಲ್ಲಿಸಲು ಹಿಂದೂ ಅರ್ಚಕರಿಗೆ ಉತ್ತರ ಪ್ರದೇಶದ ವಾರಾಣಸಿಯ ಜಿಲ್ಲಾ ನ್ಯಾಯಾಲಯ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಮಳಲಿ ಮಸೀದಿ ವಿವಾದ ಕೂಡ ಮುನ್ನೆಲೆಗೆ ಬಂದಿತ್ತು. ಅಡ್ವೊಕೇಟ್‌ ಕಮಿಷನರ್‌ ನೇಮಕಕ್ಕೆ ಒತ್ತಾಯಿಸಿ ಅರ್ಜಿದಾರರಾದ ಧನಂಜಯ್‌ ಹಾಗೂ ಇನ್ನಿತರರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಫೆ. 8ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ, ಹೈಕೋರ್ಟ್‌ ಆದೇಶದ ಪ್ರಮಾಣಿತ ಪ್ರತಿಯ ನಿರೀಕ್ಷೆಯಲ್ಲಿ ಮುಸ್ಲಿಂ ದಾವೆದಾರರು ಇದ್ದ ಹಿನ್ನೆಲೆಯಲ್ಲಿ ಪ್ರಕರಣವನ್ನು ಇಂದಿಗೆ (ಫೆ 17) ಮುಂದೂಡಿತ್ತು.