ಸುದ್ದಿಗಳು

ಮಣಿಪುರ ಹಿಂಸಾಚಾರ ಉಲ್ಬಣಕ್ಕೆ ಅಥವಾ ಹೆಚ್ಚಿನ ಸಮಸ್ಯೆ ಸೃಷ್ಟಿಗೆ ವಿಚಾರಣಾ ಪ್ರಕ್ರಿಯೆ ಬಳಕೆಯಾಗಕೂಡದು: ಸುಪ್ರೀಂ

Bar & Bench

ಮಣಿಪುರ ಹಿಂಸಾಚಾರ ಹೆಚ್ಚಿಸಲು ಇಲ್ಲವೇ ಹೆಚ್ಚಿನ ಸಮಸ್ಯೆ ಸೃಷ್ಟಿಸಲು ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ಬಳಕೆಯಾಗಬಾರದು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಎಚ್ಚರಿಕೆ ನೀಡಿದೆ.

ಭದ್ರತೆ ಅಥವಾ ಕಾನೂನು ಸುವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ನ್ಯಾಯಾಲಯಕ್ಕೆ ಇರುವ ಮಿತಿಗಳನ್ನು ಗಮನದಲ್ಲಿಟ್ಟುಕೊಂಡು ಮಾನವೀಯ ನೆಲೆಯಲ್ಲಿ ಸಮಸ್ಯೆ ಬಗೆಹರಿಸಬೇಕು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರ ನೇತೃತ್ವದ ಪೀಠ ಬುದ್ಧಿಮಾತು ಹೇಳಿದೆ.

“ನಾವು ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವಂತಾದರೆ ಚುನಾಯಿತ ಸರ್ಕಾರ ಇರುವುದಾದರೂ ಏತಕ್ಕಾಗಿ?” ಎಂದು ಪ್ರಶ್ನಿಸಿದ ಸಿಜೆಐ ರಾಜ್ಯದ ಪರಿಸ್ಥಿತಿಗೆ ಮಾನವೀಯವಾಗಿ ಸ್ಪಂದಿಸುವಂತೆ ಸಲಹೆ ನೀಡಿದರು.

“ಹಿಂಸಾಚಾರ ಮತ್ತಿತರ ಸಮಸ್ಯೆಗಳು ಮತ್ತಷ್ಟು ಉಲ್ಬಣವಾಗುವುದಕ್ಕೆ ವೇದಿಕೆಯಾಗಿ ಈ ಪ್ರಕ್ರಿಯೆಗಳನ್ನು ಬಳಸಲು ನಾವು ಬಯಸುವುದಿಲ್ಲ. ಭದ್ರತೆ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಕ್ರಮ ಕೈಗೊಳ್ಳುವುದು ನಾವಲ್ಲ ಎಂಬ ಬಗ್ಗೆ ನಾವು ಜಾಗೃತರಾಗಿರಬೇಕಿದೆ. ಇದು ಮಾನವೀಯ ಸಂಗತಿಯಾಗಿದ್ದು ಆ ನೆಲೆಯಲ್ಲಿ ಅದನ್ನು ನೋಡಬೇಕಿದೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾವು ನಾಳೆ ಪ್ರಕರಣವನ್ನು ಆಲಿಸುತ್ತೇವೆ” ಎಂದು ಅವರು ತಿಳಿಸಿದರು.

ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಮಣಿಪುರದ ಪರಿಸ್ಥಿತಿ ನಿರಂತರವಾಗಿ ಬದಲಾಗುತ್ತಿದೆ ಎಂದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ರಾಜ್ಯವನ್ನು ಸಹಜ ಸ್ಥಿತಿಗೆ ತರಲು ಕೇಂದ್ರ ಸರ್ಕಾರ ನಡೆಸಿದ ಯತ್ನಗಳನ್ನು ವಿವರಿಸುವ ಸ್ಥಿತಿಗತಿ ವರದಿ ಸಲ್ಲಿಸಿದರು.

ಕುಕಿ ಸಮುದಾಯದ ಪರವಾಗಿ ಹಾಜರಾದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್, ರಾಜ್ಯದಲ್ಲಿ ಹಿಂಸಾಚಾರ ಗಂಭೀರ ರೀತಿಯಲ್ಲಿ ಹೆಚ್ಚಳವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕೇವಲ 10 ಸಾವು ಸಂಭವಿಸಿವೆ ಎಂದು ಎಸ್‌ ಜಿ ಮೆಹ್ತಾ ಅವರು ಈ ಹಿಂದೆ ನೀಡಿದ್ದ ಹೇಳಿಕೆಗೆ ವ್ಯತಿರಿಕ್ತವಾಗಿ ಸಾವಿಗೀಡಾದವರ ಸಂಖ್ಯೆ 110ಕ್ಕೆ ಏರಿಕೆಯಾಗಿದೆ ಎಂದು ಅವರು ಹೇಳಿದರು.  

ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಲು ಸಂದೇಹಗಳು ಕಾರಣವಾಗಬಾರದು ಎಂದು ಪ್ರತಿಕ್ರಿಯಿಸಿದ ಸಿಜೆಐ ಮುಂದಿನ ವಿಚಾರಣೆ ವೇಳೆಗೆ ನಿರ್ದಿಷ್ಟ ಸಲಹೆಗಳನ್ನು ನೀಡುವಂತೆ ಗೊನ್ಸಾಲ್ವೆಸ್‌ ಅವರಿಗೆ ತಿಳಿಸಿದರು.  

ದಾಳಿಕೋರರನ್ನು ಬಂಧಿಸಬೇಕೆಂಬುದೇ ತಮ್ಮ ಮೂಲ ಕಾಳಜಿ ಎಂದು ಗೊನ್ಸಾಲ್ವೆಸ್‌ ತಿಳಿಸಿದರು. ಆಗ ಮೆಹ್ತಾ ಅವರು ಈಗಿನ ಪರಿಸ್ಥಿತಿ ಮತ್ತು ಅದರ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಳ್ಳಬೇಕಾದ ಮಹತ್ವವನ್ನು ಒತ್ತಿ ಹೇಳಿದರು.