ಸುದ್ದಿಗಳು

[ಮರಾಠಾ ಮೀಸಲಾತಿ] ಮಹಾರಾಷ್ಟ್ರ ಸರ್ಕಾರದ ಎಸ್ಇಬಿಸಿ ಕಾಯಿದೆಗೆ ಕೇಂದ್ರದ ಬೆಂಬಲ

ಕಾಯಿದೆ ಸಾಂವಿಧಾನಿಕ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ.

Bar & Bench

ಮರಾಠಾ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯ ಏಳನೇ ದಿನವಾದ ಮಂಗಳವಾರ ಕೇಂದ್ರ ಸರ್ಕಾರದ ಎರಡನೇ ಹಿರಿಯ ಅತ್ಯುನ್ನತ ಕಾನೂನು ಅಧಿಕಾರಿ, ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಕೆಲ ಮಹತ್ವದ ವಾದಗಳನ್ನು ಮಂಡಿಸಿದರು.

ಸಾರ್ವಜನಿಕ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವ ಮಹಾರಾಷ್ಟ್ರ ರಾಜ್ಯ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ವರ್ಗಗಳ ಮೀಸಲಾತಿ (ಎಸ್‌ಇಬಿಸಿ) ಕಾಯಿದೆ ಸಾಂವಿಧಾನಿಕವಾಗಿದೆ ಎಂದು ಕೇಂದ್ರ ಅಭಿಪ್ರಾಯಪಟ್ಟಿರುವುದಾಗಿ ಅವರು ತಿಳಿಸಿದರು.

ಮರಾಠಾ ಮೀಸಲಾತಿ ಪ್ರಕರಣದಲ್ಲಿ ಚರ್ಚೆಗೆ ಮುಂದಾಗಿರುವ ಒಂದು ಪ್ರಶ್ನೆ ಎಂದರೆ 102 ನೇ ಸಾಂವಿಧಾನಿಕ ತಿದ್ದುಪಡಿಯ ಬಳಿಕ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಗುರುತಿಸಲು ಮತ್ತು ವಿಸ್ತರಿಸಲು ರಾಜ್ಯಗಳ ಅಧಿಕಾರವನ್ನು ಕಿತ್ತುಕೊಳ್ಳಲಾಗಿದೆಯೇ ಎಂಬುದು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಹಿಂದುಳಿದ ವರ್ಗಗಳಿಗೆ ಇನ್ನೂ ಪ್ರತ್ಯೇಕವಾಗಿ ರಾಜ್ಯಪಟ್ಟಿಗಳು ಇರಲಿವೆಯೇ ಅಥವಾ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಕೇವಲ ಕೇಂದ್ರ ಪಟ್ಟಿಯೊಂದೇ ಇರಲಿದೆಯೇ ಎಂಬ ಪ್ರಶ್ನೆ ಇದೆ.

ಇದು ರಾಜ್ಯ ಸಂಸ್ಥೆಗಳಿಗೆ ಮೀಸಲಾತಿಗೆ ಸಂಬಂಧಿಸಿರುವುದರಿಂದ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು (ಎಸ್‌ಇಬಿಸಿ) ಗುರುತಿಸುವ ಅಧಿಕಾರ ರಾಜ್ಯಗಳಿಗೆ ಇದೆ ಎಂಬುದಾಗಿ ಈ ಹಿಂದೆ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ತಮ್ಮ ನಿಲುವು ಸ್ಪಷ್ಟಪಡಿಸಿದ್ದರು.

ಸಂವಿಧಾದನ 102ನೇ ತಿದ್ದುಪಡಿ ಮೂಲಕ ಸೇರಿಸಲಾದ 342 ಎ ವಿಧಿ ಹೇಳುವಂತೆ ಎಸ್‌ಇಬಿಸಿ ಕಾಯಿದೆಯನ್ನು ರಾಷ್ಟ್ರಪತಿಗಳ ಅಧಿಸೂಚನೆಯಿಂದ ನಿರ್ದಿಷ್ಟಪಡಿಸಲಾಗಿದ್ದು ವಿವಿಧ ರಾಜ್ಯಗಳಲ್ಲಿರುವ ಕೇಂದ್ರ ಸರ್ಕಾರದ ಸಂಸ್ಥೆಗಳ ಕೇಂದ್ರ ಪಟ್ಟಿಯ ಮೀಸಲಾತಿಗಳಿಗೆ ಮಾತ್ರ ಅನ್ವಯವಾಗಲಿದೆ ಎಂದು ಎಜಿ ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ಮಂಡಿಸಿದ್ದರು.

ಎಜಿ ಅವರ ನಿಲುವಿನೊಂದಿಗೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಸಹಮತ ವ್ಯಕ್ತಪಡಿಸಿದ್ದು, "ನಾವು ಇದನ್ನು (ಆರ್ಟಿಕಲ್ 342 ಎ) ಕೇಂದ್ರ ಸರ್ಕಾರದ ಸೀಮಿತ ಪಾತ್ರವೆಂದು ಭಾವಿಸಿದ್ದೇವೆ. ಮಹಾರಾಷ್ಟ್ರದ ವಿಷಯದಲ್ಲಿ ರಾಜ್ಯ ಕಾಯಿದೆ ಸಾಂವಿಧಾನಿಕವಾಗಿದೆಯೋ ಇಲ್ಲವೋ - ನಮ್ಮ ದೃಷ್ಟಿಯಲ್ಲಿ ಅದು ಸಾಂವಿಧಾನಿಕವಾಗಿದೆ" ಎಂದು ಅವರು ಹೇಳಿದರು.

ಆದರೂ, 342 ಎ ವಿಧಿ ಅಡಿಯಲ್ಲಿ ಕೇಂದ್ರ ಪಟ್ಟಿಯನ್ನು ತಿಳಿಸದಿರುವ ಪರಿಣಾಮಗಳ ಕುರಿತು ಉತ್ತರಿಸುವಂತೆ ಮೆಹ್ತಾ ಅವರಿಗೆ ನ್ಯಾಯಾಲಯ ತಿಳಿಸಿತು. ಕಳೆದ ವಾರ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್‌ ನೀಡಲಾಗಿದೆ.

ಮಂಗಳವಾರ ನಡೆದ ವಿಚಾರಣೆಯಲ್ಲಿ, 102 ನೇ ತಿದ್ದುಪಡಿಯ ನಂತರ ರಾಜ್ಯಗಳು ತಮ್ಮದೇ ಆದ ಎಸ್ಇ‌ಬಿಸಿ ಪಟ್ಟಿಗಳನ್ನು ನೀಡುವ ಅಧಿಕಾರವನ್ನು ನಿರಾಕರಿಸುವುದಿಲ್ಲ ಎಂದು ನ್ಯಾಯಾಲಯ ನಿರ್ಧರಿಸಿದರೆ, ತಿದ್ದುಪಡಿಯನ್ನು ಪ್ರಶ್ನಿಸಿರುವುದನ್ನು ನ್ಯಾಯಾಲಯ ಪರಿಗಣಿಸಬೇಕಿಲ್ಲ ಎಂದು ಮೆಹ್ತಾ ಗಮನಸೆಳೆದರು. ಏಕೆಂದರೆ, ಎಸ್‌ಇಬಿಸಿಗಳಿಗೆ ಮೀಸಲಾತಿ ಗುರುತಿಸಲು ಮತ್ತು ವಿಸ್ತರಿಸಲು ರಾಜ್ಯದ ಅಧಿಕಾರವನ್ನು ಕಿತ್ತುಕೊಳ್ಳಲಾಗಿದೆ ಎಂಬ ಕಾರಣಕ್ಕೆ ರಿಟ್ ಅರ್ಜಿಯು ತಿದ್ದುಪಡಿಯನ್ನು ಪ್ರಶ್ನಿಸುತ್ತದೆ ಎಂದು ವಿಷದಪಡಿಸಿದರು.

ಪ್ರಕರಣದ ವಿಚಾರಣೆ ನಾಳೆ (ಬುಧವಾರ) ಮುಂದುವರೆಯಲಿದ್ದು ತಮಿಳುನಾಡು ಪರವಾಗಿ ವಾದ ಮಂಡನೆಯಾಗುವ ಸಾಧ್ಯತೆಗಳಿವೆ.