Allahabad High Court, Couple 
ಸುದ್ದಿಗಳು

ಮದುವೆಯು ಹೆಂಡತಿ ಮೇಲೆ ಮಾಲೀಕತ್ವ ನೀಡದು: ಪತ್ನಿಯೊಂದಿಗಿನ ಆಪ್ತ ವಿಡಿಯೋ ಹಂಚಿಕೊಂಡವನಿಗೆ ಅಲಾಹಾಬಾದ್ ಹೈಕೋರ್ಟ್ ತರಾಟೆ

ಹೆಂಡತಿ ಎಂಬಾಕೆ ತನ್ನ ಗಂಡನ ವಿಸ್ತರಣೆಯಾಗಿರದೆ ತನ್ನದೇ ಹಕ್ಕು, ಆಸೆ ಹಾಗೂ ಸ್ವಾತಂತ್ರ್ಯವನ್ನು ಹೊಂದಿರುವ ವ್ಯಕ್ತಿಯಾಗಿರುತ್ತಾಳೆ ಎಂದ ನ್ಯಾಯಾಲಯ.

Bar & Bench

ಪತ್ನಿಯೊಂದಿಗೆ ಆಪ್ತಕ್ಷಣಗಳ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ ಆರೋಪ ಹೊತ್ತ ವ್ಯಕ್ತಿಯ ವಿರುದ್ಧದ ಕ್ರಿಮಿನಲ್‌ ಮೊಕದ್ದಮೆ ರದ್ದತಿಗೆ ಅಲಾಹಾಬಾದ್ ಹೈಕೋರ್ಟ್ ಈಚೆಗೆ ನಿರಾಕರಿಸಿದೆ.

ಪತಿಯು ವೈವಾಹಿಕ ಸಂಬಂಧಗಳ ಪಾವಿತ್ರ್ಯವನ್ನು ಗಂಭೀರವಾಗಿ ಉಲ್ಲಂಘಿಸಿದ್ದು ಅಂತಹ ವಸ್ತುವಿಷಯವನ್ನು ಹಂಚಿಕೊಳ್ಳುವ ಕ್ರಿಯೆ ಪತಿ ಮತ್ತು ಪತ್ನಿಯ ನಡುವಿನ ಬಾಂಧವ್ಯವನ್ನು ವ್ಯಾಖ್ಯಾನಿಸುವ ಅಂತರ್ಗತ ಗೌಪ್ಯತೆಯ ಉಲ್ಲಂಘನೆಯಾಗಿದೆ ಎಂದು ನ್ಯಾಯಮೂರ್ತಿ ವಿನೋದ್ ದಿವಾಕರ್ ಹೇಳಿದರು.

ತನ್ನ ಹೆಂಡತಿ ತನ್ನ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸ ಹಾಗೂ ಆಸ್ಥೆಯನ್ನು ಅದರಲ್ಲಿಯೂ ತಮ್ಮ ನಡುವಿನ ಆಪ್ತ ಸಂಬಂಧವನ್ನು ಪತಿಯಾದವನು ಗೌರವಿಸಬೇಕು ಎಂದು ನ್ಯಾಯಾಲಯ ಹೇಳಿದೆ.

"ದಾಖಲೆಯನ್ನು ಪರಿಶೀಲಿಸಿದ ನಂತರ ಮತ್ತು ಕಕ್ಷಿದಾರರ ಪರ ವಕೀಲರ ವಾದವನ್ನು ಆಲಿಸಿದ ನಂತರ, ವಿವಾಹ ಎಂಬುದು ಪತಿಗೆ ತನ್ನ ಹೆಂಡತಿಯ ಮೇಲೆ ಮಾಲೀಕತ್ವ ಅಥವಾ ನಿಯಂತ್ರಣ  ನೀಡುವುದಿಲ್ಲ, ಅಥವಾ ಅದು ಅವಳ ಸ್ವಾಯತ್ತತೆ ಅಥವಾ ಗೌಪ್ಯತೆಯ ಹಕ್ಕನ್ನು ದುರ್ಬಲಗೊಳಿಸುವುದಿಲ್ಲ ಎಂದು ಮೇಲ್ನೋಟಕ್ಕೆ ಅವಲೋಕಿಸಲಾಗಿದೆ" ಎಂಬುದಾಗಿ ಏಕ ಸದಸ್ಯ ಪೀಠ ತಿಳಿಸಿತು.

ಈ ನಂಬಿಕೆಯ ಉಲ್ಲಂಘನೆ ವೈವಾಹಿಕ ಸಂಬಂಧದ ಅಡಿಪಾಯವನ್ನೇ ಹಾಳು ಮಾಡುತ್ತದೆ ಮತ್ತು ವೈವಾಹಿಕ ಬಂಧನದ ಕಾರಣಕ್ಕೆ ರಕ್ಷಿತವಾಗದು ಎಂದು ನ್ಯಾಯಾಲಯ ಹೇಳಿದೆ.

"ಹೆಂಡತಿ ತನ್ನ ಗಂಡನ ವಿಸ್ತರಣೆಯಲ್ಲ, ಬದಲಾಗಿ ತನ್ನದೇ ಆದ ಹಕ್ಕು, ಆಸೆ ಮತ್ತು ಸ್ವಾತಂತ್ರ್ಯವನ್ನು ಹೊಂದಿರುವ ವ್ಯಕ್ತಿ. ಅವಳ ದೈಹಿಕ ಸ್ವಾಯತ್ತತೆ ಮತ್ತು ಗೌಪ್ಯತೆಯನ್ನು ಗೌರವಿಸುವುದು ಕೇವಲ ಕಾನೂನು ಬಾಧ್ಯತೆಯಲ್ಲ ಬದಲಿಗೆ ನಿಜವಾದ ಸಮಾನ ಸಂಬಂಧವನ್ನು ಬೆಳೆಸುವಲ್ಲಿನ ಕಡ್ಡಾಯ ನೈತಿಕ ಅಂಶವಾಗಿದೆ" ಎಂದು ಅದು ಹೇಳಿದೆ.

ಆರೋಪಿ ದೂರುದಾರರ ಪತಿಯೇ ಆಗಿರುವುದರಿಂದ ಯಾವುದೇ ಆರೋಪ ಮಾಡುವಂತಿಲ್ಲ. ಪ್ರಕರಣದಲ್ಲಿ ರಾಜಿ ಮಾಡಿಕೊಳ್ಲಬಹುದು. ಆರೋಪಿಯೇ ವಿಡಿಯೋ ಪ್ರಸಾರ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಆರೋಪಿ ಪರ ವಕೀಲರು ವಾದಿಸಿದರು.

ಆದಾಗ್ಯೂ, ಆರೋಪಗಳು ಗಂಭೀರ ಎಂದು ಪ್ರಾಸಿಕ್ಯೂಷನ್ ತಿಳಿಸಿತು. ಆರೋಪಿಯು "ಗಂಡ ಮತ್ತು ಹೆಂಡತಿಯ ನಡುವೆ ನಡೆದ ಆತ್ಮೀಯತೆಯ ಅಶ್ಲೀಲ ವಿಡಿಯೋವನ್ನು ತನ್ನ ಮೊಬೈಲ್‌ನಿಂದ ರಹಸ್ಯವಾಗಿ ರೆಕಾರ್ಡ್ ಮಾಡಿದ್ದಾನೆ" ಎಂದಿತು. ಅದನ್ನೇ ಸಂಬಂಧಿಕರು, ಊರವರೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿತು.

ಆರೋಪಗಳನ್ನು ಪರಿಗಣಿಸಿದ ನ್ಯಾಯಾಲಯ  ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿತು. 

"ದಾಖಲೆಯಲ್ಲಿರುವ ಸಂಗತಿಗಳನ್ನು ಗಮನಿಸಿದರೆ, ಆರೋಪಿಯ ಮೇಲೆ ಸೇಡು ತೀರಿಸಿಕೊಳ್ಳುವ ಅಥವಾ ಖಾಸಗಿ ಮತ್ತು ವೈಯಕ್ತಿಕ ದ್ವೇಷದ ಕಾರಣದಿಂದಾಗಿ ಅವನನ್ನು ದ್ವೇಷಿಸುವ ದುರುದ್ದೇಶದಿಂದಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಲಾಗದು " ಎಂದು ನ್ಯಾಯಾಲಯ ನುಡಿಯಿತು.