ಫಾಲಿ ಎಸ್ ನಾರಿಮನ್ 
ಸುದ್ದಿಗಳು

ವಿಧಿ 370 ರದ್ದತಿ ಎತ್ತಿಹಿಡಿದ ಸುಪ್ರೀಂ ತೀರ್ಪಿನಲ್ಲಿ ಭಿನ್ನ ತೀರ್ಪು ಇಲ್ಲದೆ ಹೋದದ್ದು ವಿಷಾದಕರ: ಫಾಲಿ ನಾರಿಮನ್

ಅಭಿಪ್ರಾಯ ಭೇದ ಎಂಬುದು ಕೇವಲ ಸುರಕ್ಷತಾ ಮೌಲ್ಯವಾಗಿರದೆ ನ್ಯಾಯಾಲಯ ಆರೋಗ್ಯಕರವಾಗಿರುವುದರ ಬಗ್ಗೆ ಸಾರ್ವಜನಿಕರಿಗೆ ಸಂದೇಶ ಕಳಿಸುತ್ತದೆ ಎಂದಿದ್ದಾರೆ ಹಿರಿಯ ವಕೀಲ ನಾರಿಮನ್.‌

Bar & Bench

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ 370ನೇ ವಿಧಿ ರದ್ದತಿ ಎತ್ತಿಹಿಡಿದು ಸುಪ್ರೀಂ ಕೋರ್ಟ್‌ ಈಚೆಗೆ ನೀಡಿದ ತೀರ್ಪಿನಲ್ಲಿ ಭಿನ್ನ ತೀರ್ಪು ಇರಬೇಕಿತ್ತು ಎಂದು ಹಿರಿಯ ವಕೀಲ, ನ್ಯಾಯಿಕ ಲೋಕದ ದಂತಕತೆ ಫಾಲಿ ಎಸ್ ನಾರಿಮನ್ ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿಯ ಇಂಡಿಯಾ ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ನ್ಯಾ. ಸುನಂದಾ ಭಂಡಾರೆ ಸ್ಮಾರಕ 28ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

"ಕಾಶ್ಮೀರದ ವಿಚಾರವಾಗಿ ಈಚೆಗೆ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ನೀಡಿದ ತೀರ್ಪನ್ನು ಒಟ್ಟಾರೆಯಾಗಿ ಓದಿದಾಗ ಅದರಲ್ಲಿ ಯಾವುದೇ ಭಿನ್ನ ತೀರ್ಪು ಇಲ್ಲ ಎಂಬುದು ವಿಷಾದದ ಸಂಗತಿಯಾಗಿದೆ" ಎಂದು ನಾರಿಮನ್‌ ತಿಳಿಸಿದರು.

ಭಿನ್ನ ತೀರ್ಪಿನಿಂದ ಫಲಿತಾಂಶದಲ್ಲಿ ಹೆಚ್ಚೇನೂ ವ್ಯತ್ಯಾಸ ಉಂಟಾಗದಿದ್ದರೂ ಪ್ರಕರಣ ಒಳಗೊಂಡಿರುವ ಸಮಸ್ಯೆಗಳನ್ನು ಉತ್ತಮ ರೀತಿಯಲ್ಲಿ ಅರ್ಥ ಮಾಡಿಕೊಳ್ಳಲು ಭಿನ್ನ ತೀರ್ಪಿನಿಂದಾಗಿ ಸಾರ್ವಜನಿಕರಿಗೆ ಸಹಾಯವಾಗುತ್ತಿತ್ತು ಎಂದು ಅವರು ನುಡಿದರು.

ಭಾರತದ ಉತ್ತರದ-ತುದಿಯ ರಾಜ್ಯದ ಕುರಿತಾದ ಈ ವಿಶಿಷ್ಟವಾದ ದೀರ್ಘ ಮತ್ತು ಸ್ವಲ್ಪ ಸಂಕೀರ್ಣವಾದ ಪ್ರಕರಣದ ಬಾಹ್ಯರೇಖೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಭಿನ್ನ ತೀರ್ಪು ಎಂಬುದು ಹೆಚ್ಚು ತಿಳುವಳಿಕೆಯಿಲ್ಲದ ಸಾಮಾನ್ಯ ಜನರಿಗೆ ಸಹಾಯ ಮಾಡುತ್ತಿತ್ತು ಎಂದರು.

ಭಿನ್ನ ತೀರ್ಪುಗಳು ಕೇವಲ ಸುರಕ್ಷತಾ ಕವಾಟವಲ್ಲ ಬದಲಿಗೆ ನ್ಯಾಯಾಲಯ ಆರೋಗ್ಯಕರವಾಗಿರುವುದರ ಬಗ್ಗೆ ಸಾರ್ವಜನಿಕರಿಗೆ ಸಂದೇಶ ಕಳುಹಿಸುತ್ತವೆ ಎಂಬುದಾಗಿ ಅವರು ತಿಳಿಸಿದರು.

ಸಂವಿಧಾನದ 370ನೇ ವಿಧಿ ರದ್ದುಪಡಿಸುವುದನ್ನು ಎತ್ತಿಹಿಡಿದು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ವಿಚಲಿತಗೊಳಿಸುವಂತಿದೆ ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ಫಾಲಿ ನಾರಿಮನ್ ಕೂಡ ಬೇಸರ ವ್ಯಕ್ತಪಡಿಸಿದ್ದರು. ಹಿರಿಯ ನ್ಯಾಯವಾದಿ ಫಾಲಿ ನಾರಿಮನ್‌ ಅವರ ಪುತ್ರ ನ್ಯಾ. ರೋಹಿಂಟನ್‌.

ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರು 'ಭಾರತೀಯ ಮಹಿಳಾ ಸಬಲೀಕರಣದಲ್ಲಿ ನ್ಯಾಯಾಂಗದ ಪಾತ್ರ' ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಇದೇ ವೇಳೆ ಫಾಲಿ ನಾರಿಮನ್‌ ಅವರು ನ್ಯಾ. ನಾರತ್ನ ಅವರ ಸಾಮರ್ಥ್ಯವನ್ನು ಹಾಗೂ ಸುಪ್ರೀಂ ಕೋರ್ಟ್‌ನ ಉಳಿದ ನ್ಯಾಯಮೂರ್ತಿಗಳಿಗಿಂತ ಅವರು ಭಿನ್ನವಾಗಿರುವುದನ್ನು ಶ್ಲಾಘಿಸಿದರು.

"ನಾನು ಮೆಚ್ಚುವುದು ಅವರ ಕಾನೂನು ಜ್ಞಾನ ಮಾತ್ರವಲ್ಲ, ಪ್ರಮುಖ ಸಾಂವಿಧಾನಿಕ ಪ್ರಕರಣಗಳಲ್ಲಿ, ನ್ಯಾಯಪೀಠದ ಇತರ ಸಹೋದ್ಯೋಗಿಗಳು ವ್ಯಕ್ತಪಡಿಸಿದ ಅಭಿಪ್ರಾಯಗಳಿಗಿಂತ ಭಿನ್ನವಾದ ಅಭಿಪ್ರಾಯ ನೀಡಲು ಅವರು ಸಮರ್ಥರು, ಸಿದ್ಧರು ಎಂಬುದನ್ನು ಆಕೆ ತೋರಿಸಿದ್ದಾರೆ" ಎಂದು ಅವರು ಹೇಳಿದರು.

[ಕಾರ್ಯಕ್ರದ ದೃಶ್ಯಾವಳಿಗಳಿಗಾಗಿ ಕೆಳಗೆ ಕ್ಲಿಕ್ಕಿಸಿ]