Udupi Court complex 
ಸುದ್ದಿಗಳು

ಉಡುಪಿ ಜಿಲ್ಲೆಯಲ್ಲಿ ಮೆಗಾ ಲೋಕ ಅದಾಲತ್: ಒಂದೇ ದಿನ 2546 ಪ್ರಕರಣಗಳು ಇತ್ಯರ್ಥ

ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘಗಳು, ವಿವಿಧ ಇಲಾಖೆಗಳು ಮತ್ತಿತರರ ಸಂಪೂರ್ಣ ಸಹಕಾರದೊಂದಿಗೆ ಲೋಕ್ ಅದಾಲತ್ ಯಶಸ್ವಿಗೊಳಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.

Bar & Bench

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಡಿ. 19ರಂದು ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ನಡೆದ ಲೋಕ ಅದಾಲತ್‌ ವೇಳೆ ಒಂದೇ ದಿನ 2546 ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಗಿದೆ. ರೂ.8,29,28,098 ಮೊತ್ತದ ಪರಿಹಾರವನ್ನು ಈ ಸಂದರ್ಭದಲ್ಲಿ ಘೋಷಿಸಲಾಗಿದೆ.

34 ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, 74 ಚೆಕ್ಕು ಅಮಾನ್ಯ ಪ್ರಕರಣಗಳು, 9 ಬ್ಯಾಂಕ್ / ಹಣ ವಸೂಲಾತಿ ಪ್ರಕರಣಗಳು, 190 ಎಂ.ವಿ.ಸಿ ಪ್ರಕರಣಗಳು ಎಂ.ಎಂಆರ್.ಡಿ ಕಾಯಿದೆಯಡಿ 40 ಪ್ರಕರಣಗಳು, 127 ಸಿವಿಲ್ ಪ್ರಕರಣಗಳು, 1967 ಇತರೇ ಕ್ರಿಮಿನಲ್ ಪ್ರಕರಣಗಳು ಹಾಗೂ 105 ವ್ಯಾಜ್ಯ ಪೂರ್ವ ದಾವೆಗಳು ಇದರಲ್ಲಿ ಸೇರಿವೆ.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮತ್ತು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ ಎನ್‌ ಸುಬ್ರಮಣ್ಯ ಅವರು ನೀಡಿರುವ ಪ್ರಕಟಣೆಯಲ್ಲಿ ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಕೀಲರ ಸಂಘಗಳು, ವಿವಿಧ ಇಲಾಖೆಗಳು ಮತ್ತಿತರರ ಸಂಪೂರ್ಣ ಸಹಕಾರದೊಂದಿಗೆ ಲೋಕ್ ಅದಾಲತ್ ಯಶಸ್ವಿಗೊಳಿಸಲಾಯಿತು ಎಂದು ತಿಳಿಸಲಾಗಿದೆ.