Stray Dog 
ಸುದ್ದಿಗಳು

ಬೀದಿ ನಾಯಿ ಪ್ರಕರಣ: ವಿಚಾರಣೆ ಮುಂದುವರೆಸಲು ಸುಪ್ರೀಂ ಅನುಮತಿ ಕೋರಿದ್ದ ಆದೇಶ ಹಿಂಪಡೆದ ಮೇಘಾಲಯ ಹೈಕೋರ್ಟ್

ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಪ್ರಕರಣಗಳನ್ನು ಎಲ್ಲಾ ಹೈಕೋರ್ಟ್‌ಗಳಿಂದ ತನಗೆ ವರ್ಗಾಯಿಸುವಂತೆ ಆಗಸ್ಟ್ 22ರಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆದರೂ ಪ್ರಕರಣವನ್ನು ತಾನೇ ವಿಚಾರಣೆ ನಡೆಸಲು ಹೈಕೋರ್ಟ್ ಮುಂದಾಗಿತ್ತು.

Bar & Bench

ಬೀದಿ ನಾಯಿಗಳ ಸಮಸ್ಯೆಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಮುಂದುವರೆಸಲು ಅನುಮತಿ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸುವ ಸಂಬಂಧ ತನ್ನ ರಿಜಿಸ್ಟ್ರಾರ್‌ ಜನರಲ್‌ಗೆ ನಿರ್ದೇಶನ ನೀಡಿದ್ದ ಆದೇಶವನ್ನು ಮೇಘಾಲಯ ಹೈಕೋರ್ಟ್‌ ಹಿಂಪಡೆದಿದೆ [ಮೇಘಾಲಯ ಸರ್ಕಾರ ಮತ್ತು ಕೌಸ್ತುಭ್‌ ಪಾಲ್‌ ಹಾಗೂ ಇನ್ನಿತರರ ನಡುವಣ ಪ್ರಕರಣ].

ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಪ್ರಕರಣಗಳನ್ನು ಎಲ್ಲಾ  ಹೈಕೋರ್ಟ್‌ಗಳಿಂದ ತನಗೆ ವರ್ಗಾಯಿಸುವಂತೆ ಆಗಸ್ಟ್ 22ರಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಮೇಘಾಲಯ ಹೈಕೋರ್ಟ್ 2024ರಿಂದ ಬೀದಿ ನಾಯಿಗಳಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸುತ್ತಿತ್ತು.

ಮೇಘಾಲಯದಲ್ಲಿನ ʼದಾಳಿಕೋರ ನಾಯಿಗಳʼ ಸಮಸ್ಯೆ ವಿಭಿನ್ನವಾಗಿದ್ದು, ಅಪಾಯಕಾರಿ ಸ್ವರೂಪದ್ದಾಗಿರುವ ಕಾರಣಕ್ಕೆ ಪ್ರಕರಣವನ್ನು ತಾನೇ ಉಳಿಸಿಕೊಳ್ಳಲು ಆಗಸ್ಟ್ 30 ರಂದು ಮುಖ್ಯ ನ್ಯಾಯಮೂರ್ತಿ ಐ ಪಿ ಮುಖರ್ಜಿ (ಇದೀಗ ನಿವೃತ್ತರು) ಮತ್ತು ನ್ಯಾಯಮೂರ್ತಿ ಡಬ್ಲ್ಯೂ ಡಿಯೆಂಗ್ಡೋಹ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಪ್ರಕರಣ ಉಳಿಸಿಕೊಳ್ಳುವ ಒಲವನ್ನು ವ್ಯಕ್ತಪಡಿಸಿತು .

ಅಂತೆಯೇ ಪಿಐಎಲ್‌ ವಿಚಾರಣೆ ನಡೆಸುವ ಕುರಿತಂತೆ ಸುಪ್ರೀಂ ಕೋರ್ಟ್‌ಗೆ ಔಪಚಾರಿಕ ಅರ್ಜಿ ಸಲ್ಲಿಸಲು ಮತ್ತು ಅಲ್ಲಿಂದ ಸೂಕ್ತ ನಿರ್ದೇಶನ ಪಡೆಯಲು ಹೈಕೋರ್ಟ್ ತನ್ನ ರಿಜಿಸ್ಟ್ರಾರ್ ಜನರಲ್ ಅವರಿಗೆ ನಿರ್ದೇಶನ ನೀಡಿತ್ತು.

ಆದರೂ, ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ಸೆಪ್ಟೆಂಬರ್ 26 ರಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್ ಎಸ್ ತಂಗ್ಖೀವ್ ಮತ್ತು ನ್ಯಾಯಮೂರ್ತಿ ಡಬ್ಲ್ಯೂ ಡಿಯೆಂಗ್ದೋಹ್ ಅವರಿದ್ದ ವಿಭಾಗೀಯ ಪೀಠ ಆದೇಶ ವಾಪಸ್ ಪಡೆದುಕೊಂಡಿದೆ. ಅರ್ಜಿದಾರರು ಮತ್ತು ಶಿಲ್ಲಾಂಗ್ ಮಹಾನಗರ ಪಾಲಿಕೆಯನ್ನು ಪ್ರತಿನಿಧಿಸುವ ವಕೀಲರು ರಾಜ್ಯ ಸರ್ಕಾರದ ಮನವಿಗೆ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಹೀಗಾಗಿ, ಪಿಐಎಲ್‌ನ ದಾಖಲೆಗಳನ್ನು ಹೈಕೋರ್ಟ್ ರಿಜಿಸ್ಟ್ರಿಯಿಂದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಗೆ ಆದಷ್ಟು ಬೇಗ ರವಾನಿಸಬೇಕೆಂದು ನ್ಯಾಯಾಲಯ ನಿರ್ದೇಶಿಸಿತು.

ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಪ್ರಕರಣಗಳನ್ನು ಎಲ್ಲಾ  ಹೈಕೋರ್ಟ್‌ಗಳಿಂದ ತನಗೆ ವರ್ಗಾಯಿಸುವಂತೆ ಆಗಸ್ಟ್ 22ರಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್‌) ಎಲ್ಲಾ ಬೀದಿನಾಯಿಗಳನ್ನು ತೆರವುಗೊಳಿಸುವಂತೆ ಮತ್ತು ಅವುಗಳನ್ನು ಆಶ್ರಯ ಕೇಂದ್ರಗಳಿಂದ ಬಿಡುಗಡೆ ಮಾಡದಂತೆ ತಾನು ಆಗಸ್ಟ್‌ 11ರಂದು ನೀಡಿದ್ದ ಆದೇಶವನ್ನು ಮಾರ್ಪಡಿಸಿ ಲಸಿಕೆ ಪಡೆದ ನಾಯಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್‌ ಅವಕಾಶವಿತ್ತಿತ್ತು. ಈ ವೇಳೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರಕರಣದಲ್ಲಿ ಪಕ್ಷಕಾರರನ್ನಾಗಿ ಸೇರಿಸುವ ಮೂಲಕ ವಿಚಾರಣೆ ಪ್ರಕ್ರಿಯೆಯ ವ್ಯಾಪ್ತಿಯನ್ನು ನ್ಯಾಯಾಲಯ ವಿಸ್ತರಿಸಿತ್ತು.