
ಇಡೀ ದೆಹಲಿಯನ್ನು ಬೀದಿನಾಯಿಗಳಿಂದ ಮುಕ್ತಗೊಳಿಸುವಂತೆ ಸುಪ್ರೀಂ ಕೋರ್ಟ್ ಈಚೆಗೆ ನೀಡಿದ ಆದೇಶ ವಿವಾದಕ್ಕೆ ಆಸ್ಪದ ನೀಡಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಪ್ರಕರಣ ಪರಿಶೀಲಿಸುವುದಾಗಿ ಬುಧವಾರ ತಿಳಿಸಿದ್ದಾರೆ.
ದೆಹಲಿಯ ಎಲ್ಲಾ ಬೀದಿ ನಾಯಿಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಆಗಸ್ಟ್ 11 ರಂದು ನೀಡಿದ್ದ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಕೀಲರು ಸಿಜೆಐ ಮುಂದೆ ಪ್ರಕರಣ ಪ್ರಸ್ತಾಪಿಸಿದರು.
"ಇದು ಸಮುದಾಯ ಶ್ವಾನಗಳಿಗೆ ಸಂಬಂಧಿಸಿದ ವಿಚಾರ... ನ್ಯಾಯಮೂರ್ತಿ ಕರೋಲ್ ಅವರು ಭಾಗವಾಗಿದ್ದ ಪೀಠ ನಾಯಿಗಳನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲುವಂತಿಲ್ಲ ಎಂದು ಹಿಂದಿನ ತೀರ್ಪು ನೀಡಿತ್ತು. ಎಲ್ಲಾ ಜೀವಿಗಳ ಬಗ್ಗೆಯೂ ಸಹಾನುಭೂತಿ ಇರಬೇಕು ಎಂದು ಅದು ಹೇಳಿತ್ತು" ಎಂಬುದಾಗಿ ವಕೀಲರು ತಿಳಿಸಿದರು.
ನಿನ್ನೆ ನೀಡಿದ ತೀರ್ಪು ಮತ್ತು ಈ ಹಿಂದಿನ ತೀರ್ಪು ಇವೆರಡನ್ನೂ ಎರಡು ವಿಭಿನ್ನ ಸಮನ್ವಯ ಪೀಠಗಳು ನೀಡಿದ್ದು ಇವು ವಿರುದ್ಧವಾಗಿವೆ. ಹಾಗಾಗಿ, ಸಿಜೆಐ ಅವರು ಪ್ರಕರಣವನ್ನು ಪಟ್ಟಿ ಮಾಡಿ ಈ ವೈರುಧ್ಯವನ್ನು ಪರಿಹರಿಸಲು ವಿಸ್ತೃತ ಪೀಠಕ್ಕೆ ಪ್ರಕರಣವನ್ನು ಶಿಫಾರಸ್ಸು ಮಾಡಬೇಕೆ ಎನ್ನುವ ಬಗ್ಗೆ ನಿರ್ಧರಿಸಬೇಕು ಎನ್ನುವ ಇಂಗಿತವನ್ನು ವಿಚಾರ ಪ್ರಸ್ತಾಪಿಸಿದ ವಕೀಲೆ ನನಿತಾ ಶರ್ಮಾ ವ್ಯಕ್ತಪಡಿಸಿದರು.
ಈ ವೇಳೆ ಸಿಜೆಐ ಗವಾಯಿ ಅವರು,“ಆದರೆ ಮತ್ತೊಂದು ಪೀಠ ಈಗಾಗಲೇ ಆದೇಶ ನೀಡಿದೆ. ನಾನು ಈ ವಿಚಾರವನ್ನು ಗಮನಿಸುತ್ತೇನೆ," ಎಂದು ಹೇಳಿದರು.
ಬೀದಿ ನಾಯಿಗಳ ತೆರವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿಗೆ ಸಾರ್ವಜನಿಕ ವಲಯದಲ್ಲಿ ಅಪಸ್ವರ ಕೇಳಿಬಂದಿತ್ತು. ರಾಜಕಾರಣಿಗಳಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಖ್ಯಾತನಾಮರಾದ ಜಾನ್ ಅಬ್ರಾಹಂ, ಜಾಹ್ನವಿ ಕಪೂರ್, ವರುಣ್ ಧವನ್, ಸಿದ್ಧಾರ್ಥ್ ಆನಂದ್ ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿದ್ದರು.
ದೆಹಲಿಯ ಎಲ್ಲಾ ಪ್ರದೇಶಗಳನ್ನು ಬೀದಿನಾಯಿ ಮುಕ್ತಗೊಳಿಸಬೇಕು ಈ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ಹೇಳಿತ್ತು.
ರಾಷ್ಟ್ರ ರಾಜಧಾನಿ ಪ್ರದೇಶದ ಎಲ್ಲ ಸ್ಥಳಗಳಿಂದ ಬೀದಿ ನಾಯಿಗಳನ್ನು ತೆರವು ಮಾಡಬೇಕು. ಈ ಕಾರ್ಯಕ್ಕೆ ಅಡ್ಡಿಪಡಿಸುವ ಪ್ರಾಣಿ ದಯಾ ಹೋರಾಟಗಾರರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಲಾಗುವುದು. ದೆಹಲಿ ಸರ್ಕಾರ, ಎಂಸಿಡಿ, ಎನ್‌ಡಿಎಂಸಿಗಳು 8 ವಾರಗಳಲ್ಲಿ ಶ್ವಾನ ಆಶ್ರಯ ಕೇಂದ್ರಗಳನ್ನು ರಚಿಸಬೇಕು. ಈ ಕೇಂದ್ರಗಳನ್ನು ಸಿಸಿಟಿವಿ ಮೂಲಕ ಮೇಲ್ವಿಚಾರಣೆ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿತ್ತು.
ಈ ಕಾರ್ಯಕ್ಕೆ ಅಡ್ಡಿಪಡಿಸುವ ಪ್ರಾಣಿ ದಯಾ ಹೋರಾಟಗಾರರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಲಾಗುವುದು. ದೆಹಲಿ ಸರ್ಕಾರ, ಎಂಸಿಡಿ, ಎನ್‌ಡಿಎಂಸಿಗಳು 8 ವಾರಗಳಲ್ಲಿ ಶ್ವಾನ ಆಶ್ರಯ ಕೇಂದ್ರಗಳನ್ನು ರಚಿಸಬೇಕು. ಈ ಕೇಂದ್ರಗಳನ್ನು ಸಿಸಿಟಿವಿ ಮೂಲಕ ಮೇಲ್ವಿಚಾರಣೆ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶನಗಳನ್ನು ನೀಡಿತ್ತು.
ಬೀದಿ ನಾಯಿಗಳ ತೆರವಿಗೆ ಪ್ರಾಣಿಪ್ರಿಯ ಹೋರಾಟಗಾರರು ಅಡ್ಡಿಪಡಿಸುತ್ತಿದ್ದುದನ್ನು ಖಂಡಿಸಿದ್ದ ನ್ಯಾಯಾಲಯ ʼಇಷ್ಟೆಲ್ಲಾ ಪ್ರಾಣಿ ದಯಾ ಹೋರಾಟಗಾರರಿಗೆ ರೇಬಿಸ್ ರೋಗಕ್ಕೆ ಬಲಿಯಾದವರನ್ನು ಮರಳಿ ಕರೆತರಲು ಸಾಧ್ಯವಾಗುತ್ತದೆಯೇʼ ಎಂದು ಪ್ರಶ್ನಿಸಿತ್ತು.
ಈ ಸಂಬಂಧ ಒಂದು ಕಾರ್ಯಪಡೆ ರಚಿಸುವ ಅಗತ್ಯವಿದ್ದರೆ ಅದನ್ನು ಕೂಡಲೇ ಮಾಡಬೇಕು. ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಈ ಪ್ರಕ್ರಿಯೆಗೆ ಅಡ್ಡಿಪಡಿಸಿದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೀಠ ಎಚ್ಚರಿಕೆ ನೀಡಿತ್ತು.