Unlawful Activities (Prevention) Act with Bombay High Court 
ಸುದ್ದಿಗಳು

ಪಾತಕಿ ದಾವೂದ್ ಜೊತೆಗಿನ ಒಡನಾಟವನ್ನು ಯುಎಪಿಎ ಅಡಿ ಭಯೋತ್ಪಾದಕ ಗ್ಯಾಂಗ್‌ನ ಸದಸ್ಯತ್ವ ಎನ್ನಲಾಗದು: ಬಾಂಬೆ ಹೈಕೋರ್ಟ್

Bar & Bench

ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯಿದೆ ಅಡಿಯಲ್ಲಿ ಭಯೋತ್ಪಾದಕ ಎಂದು ಘೋಷಿತನಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆಗಿನ ಯಾವುದೇ ನಂಟು ಭಯೋತ್ಪಾದಕ ಗ್ಯಾಂಗ್ ಅಥವಾ ಉಗ್ರ ಸಂಘಟನೆಯ ಸದಸ್ಯತ್ವದ ವಿರುದ್ಧದ ಸೆಕ್ಷನ್‌ ವ್ಯಾಪ್ತಿಗೆ ಬರುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಪರ್ವೇಜ್‌ ಜುಬೈರ್‌ ವೈದ್‌ ಇನ್ನಿತರರು ಮತ್ತು ಸರ್ಕಾರ ನಡುವಣ ಪ್ರಕರಣ].

ದಾವೂದ್‌ನನ್ನು ವೈಯಕ್ತಿಕವಾಗಿ ಮತ್ರವೇ ಭಯೋತ್ಪಾದಕ ಎಂದು ಹೆಸರಿಸಿರುವುದರಿಂದ ಆತನ ನಂಟು ಹೊಂದಿರುವ ಡಿ ಗ್ಯಾಂಗ್‌/ ದಾವೂದ್‌ ಗ್ಯಾಂಗ್‌ನ ಸದಸ್ಯನಿಗೂ ಯುಎಪಿಎ ಸೆಕ್ಷನ್‌ 20ಅನ್ನು ಅನ್ವಯಿಸಲಾಗದು ಎಂದು ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ  ಮತ್ತು ಮಂಜುಷಾ ದೇಶಪಾಂಡೆ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ವ್ಯಕ್ತಿಯ ಚಟುವಟಿಕೆಗಳಿಗೆ ಮತ್ತು ಭಯೋತ್ಪಾದಕ ಗುಂಪು ಇಲ್ಲವೇ ಉಗ್ರ ಸಂಘಟನೆಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಯುಎಪಿಎ ಅಡಿ ಭಿನ್ನ ಸೆಕ್ಷನ್‌ಗಳಿವೆ ಎಂದು ಎಂದು ನ್ಯಾಯಾಲಯ ವಿವರಿಸಿದೆ.

ಯುಎಪಿಎ, ಮಾದಕ ವಸ್ತು ಮತ್ತು ಅಮಲು ಪದಾರ್ಥ ನಿಯಂತ್ರಣ ಕಾಯಿದೆ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳಾದ ಪರ್ವೇಜ್ ಜುಬೇರ್ ವೈದ್ ಮತ್ತು ಫೈಜ್ ಶಕೀಲ್ ಭಿವಂಡಿವಾಲಾ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ತೀರ್ಪು ನೀಡಿದೆ.

ಭಯೋತ್ಪಾದಕ ಸಂಘಟನೆಯ ಸದಸ್ಯರೆಂಬ ಆರೋಪವಲ್ಲದೆ ಪಿತೂರಿ ಮತ್ತು ಉಗ್ರ ಕೃತ್ಯಗಳಿಗೆ ನಿಧಿ ಸಂಗ್ರಹಿಸಿದ್ದಕ್ಕಾಗಿಯೂ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಭಿವಂಡಿವಾಲಾ ಮನೆಯ ಆವರಣದಲ್ಲಿ 600 ಗ್ರಾಂ ಗಾಂಜಾ ದೊರೆತಿದ್ದ ಹಿನ್ನೆಲೆಯಲ್ಲಿ ಎನ್‌ಡಿಪಿಎಸ್‌ ಕಾಯಿದೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು.

ಈ ಹಿನ್ನೆಲೆಯಲ್ಲಿ ಜಾಮೀನು ಕೋರಿ ಇಬ್ಬರೂ ನ್ಯಾಯಾಲಯದ ಮೊರೆ ಹೋಗಿದ್ದರು. ತಮಗೂ ತಮ್ಮ ವಿರುದ್ಧದ ಆರೋಪಗಳಿಗೂ ಸಂಬಂಧವಿಲ್ಲ ಎಂದು ಅವರ ಪರ ವಕೀಲರು ವಾದಿಸಿದ್ದರು. ಇದನ್ನು ಪ್ರಾಸಿಕ್ಯೂಷನ್‌ ವಿರೋಧಿಸಿತ್ತು.

ಸಾಕ್ಷ್ಯಗಳನ್ನು ಪರಿಶೀಲಿಸಿದ ನ್ಯಾಯಾಲಯ ವ್ಯಕ್ತಿಯ ಚಟುವಟಿಕೆಗಳಿಗೂ ಮತ್ತು ಭಯೋತ್ಪಾದಕ ಗುಂಪು ಇಲ್ಲವೇ ಉಗ್ರ ಸಂಘಟನೆಯ ಚಟುವಟಿಕೆಗಳಿಗೂ ಯುಎಪಿಎ ಅಡಿ ಭಿನ್ನ ಸೆಕ್ಷನ್‌ಗಳಿವೆ.  ]ಸಾಕ್ಷಿಗಳ ಹೇಳಿಕೆಗಳು ವೈದ್‌ ವಿರುದ್ಧ ಯುಎಪಿಎ ಸೆಕ್ಷನ್‌  20 ಅನ್ನು ಅನ್ವಯಿಸಲು ಸಾಕಾಗದು ಎಂದಿತು.

ಭಿವಿಂಡಾವಾಲಾಗೂ ಡಿ ಗ್ಯಾಂಗ್‌ಗೂ ಯಾವುದೇ ಸಂಬಂಧ ಇಲ್ಲ. ಅಲ್ಲದೆ ಆತನ ಬಳಿ ಇದ್ದ 600 ಗ್ರಾಂ ಗಾಂಜಾ ಸಣ್ಣ ಪ್ರಮಾಣದ್ದಾಗಿದ್ದು ವಾಣಿಜ್ಯ ಅಥವಾ ಮಧ್ಯಮ ಪ್ರಮಾಣದ್ದಾಗಿರಲಿಲ್ಲ ಎಂದ ನ್ಯಾಯಾಲಯ ಆರೋಪಿಗಳಿಗೆ ಜಾಮೀನು ನೀಡಿತು.