Nagpur Bench, Bombay High Court 
ಸುದ್ದಿಗಳು

'ಐ ಲವ್ ಯು' ಎಂದಷ್ಟೇ ಹೇಳಿದರೆ ಅದು ಲೈಂಗಿಕ ಕಿರುಕುಳ ಅಲ್ಲ: ಬಾಂಬೆ ಹೈಕೋರ್ಟ್

ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಪೋಕ್ಸೊ ಕಾಯಿದೆ ಮತ್ತು ಐಪಿಸಿ ಅಡಿಯಲ್ಲಿ ಬಂಧಿತನಾಗಿದ್ದ ವ್ಯಕ್ತಿಯ ಶಿಕ್ಷೆ ರದ್ದುಗೊಳಿಸಿದ ನ್ಯಾಯಾಲಯ ಈ ವಿಚಾರ ತಿಳಿಸಿದೆ.

Bar & Bench

ಲೈಂಗಿಕ ಉದ್ದೇಶವನ್ನು ಸ್ಪಷ್ಟವಾಗಿ ಬಿಂಬಿಸುವ ವರ್ತನೆ ತೋರದ ಹೊರತಾಗಿ ಮಹಿಳೆಗೆ 'ನಾ ನಿನ್ನ ಪ್ರೀತಿಸುವೆ' ಎಂದು ಹೇಳುವುದು ಲೈಂಗಿಕ ಕಿರುಕುಳ ಆಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ ನಾಗಪುರ ಪೀಠ ಈಚೆಗೆ ತೀರ್ಪು ನೀಡಿದೆ [ರವೀಂದ್ರ s/o ಲಕ್ಷ್ಮಣ್ ನರೇತೆ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಪೋಕ್ಸೊ ಕಾಯಿದೆ ಮತ್ತು ಐಪಿಸಿ ಅಡಿಯಲ್ಲಿ ಬಂಧಿತನಾಗಿದ್ದ ವ್ಯಕ್ತಿಯ ಶಿಕ್ಷೆ ರದ್ದುಗೊಳಿಸಿದ ನ್ಯಾಯಮೂರ್ತಿ ಊರ್ಮಿಳಾ ಜೋಶಿ-ಫಾಲ್ಕೆ ಈ ವಿಚಾರ ತಿಳಿಸಿದ್ದಾರೆ.

ಕಾಯಿದೆಯಲ್ಲಿ ಸೂಚಿಸಿರುವಂತೆ ನಾನು ನಿನ್ನನ್ನುಪ್ರೀತಿಸುತ್ತೇನೆ ಎಂದ ಪದ ಲೈಂಗಿಕ ಉದ್ದೇಶಕ್ಕೆ ಸಮನಲ್ಲ. ಉಚ್ಚರಿಸಿದ ಮಾತು ಲೈಂಗಿಕ ಉದ್ದೇಶ ಹೊಂದಿತ್ತು ಎಂದು ಪರಿಗಣಿಸಬೇಕಾದರೆ ಉದ್ದೇಶಕ್ಕೆ ಲೈಂಗಿಕ ಆಯಾಮವಿತ್ತು ಎಂಬುದನ್ನು ಸಾಬೀತುಪಡಿಸುವ ಕಾಯಿದೆಯಲ್ಲಿ ಹೇಳಿರುವಂತಹ ಯಾವುದಾದರೂ ಅಂಶ ಇರಬೇಕು ಎಂದು ಪೀಠ ವಿವರಿಸಿದೆ.  

ಮಹಾರಾಷ್ಟ್ರದ ನಾಗಪುರದ ಖಾಪಾ ಗ್ರಾಮದಲ್ಲಿ 11 ನೇ ತರಗತಿಯಲ್ಲಿ ಓದುತ್ತಿದ್ದ 17 ವರ್ಷದ ಬಾಲಕಿ ಶಾಲೆಯಿಂದ ತನ್ನ ಸೋದರಸಂಬಂಧಿಯೊಂದಿಗೆ ಮನೆಗೆ ಹಿಂತಿರುಗುತ್ತಿದ್ದಾಗ ಬಲ್ಯ ಎಂಬ ಆರೋಪಿ ಆಕೆಯನ್ನು ಅಡ್ಡಗಟ್ಟಿ ಅವಳ ಕೈ ಹಿಡಿದು ನಿನ್ನ ಹೆಸರು ಹೇಳು, ನಾ ನಿನ್ನ ಪ್ರೀತಿಸುವೆ ಎಂದು ಒತ್ತಾಯಿಸಿದ್ದ ಎಂಬುದಾಗಿ ಹುಡುಗಿಯ ತಂದೆ ಪೊಲೀಸರಿಗೆ ದೂರು ನೀಡಿದ್ದರು.

 ತನಿಖೆಯ ನಂತರ, ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 354 ಎ (1) (ಐ) (ದೈಹಿಕ ಸಂಪರ್ಕ ಮತ್ತು ಅನೈತಿಕ ಲೈಂಗಿಕ ಪ್ರಚೋದನೆಗಾಗಿ), ಸೆಕ್ಷನ್ 354 ಡಿ (1) (ಐ) (ಹಿಂಬಾಲಿಸುವುದು) ಮತ್ತು ಪೋಕ್ಸೊ ಕಾಯಿದೆಯ ಸೆಕ್ಷನ್ 8 (ಅಪ್ರಾಪ್ತ ವಯಸ್ಕನೊಂದಿಗೆ ದೈಹಿಕ ಸಂಪರ್ಕವನ್ನು ಒಳಗೊಂಡ ಲೈಂಗಿಕ ದೌರ್ಜನ್ಯ) ಅಡಿಯಲ್ಲಿ ಆರೋಪ ನಿಗದಿಪಡಿಸಲಾಗಿತ್ತು.

2017 ರಲ್ಲಿ, ನಾಗಪುರದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಬಲ್ಯ ತಪ್ಪಿತಸ್ಥ ಎಂದು ಘೋಷಿಸಿ, ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹5,000 ದಂಡ ವಿಧಿಸಿದ್ದರು.

ಆದರೆ ತನಗೆ ಲೈಂಗಿಕ ಉದ್ದೇಶವಿರಲಿಲ್ಲ, ಮತ್ತೆ ಮತ್ತೆಕಿರುಕುಳ ನೀಡಿಲ್ಲ ಹಾಗೂ ಪೋಕ್ಸೊ ಅಡಿಯಲ್ಲಿ ಲೈಂಗಿಕ ದೌರ್ಜನ್ಯ ಎನ್ನಲು ಅಗತ್ಯವಿರುವಂತೆ ತಾನು ಆಕೆಯ ಖಾಸಗಿ ಅಂಗಾಂಗಳನ್ನು ಸ್ಪರ್ಶಿಸಿಲ್ಲ ಎಂದು ತಿಳಿಸಿ ಬಲ್ಯ ಮೇಲ್ಮನವಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಹೈಕೋರ್ಟ್‌ ಸಂತ್ರಸ್ತೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದುವುದು ಆರೋಪಿಯ ನಿಜವಾದ ಉದ್ದೇಶವಾಗಿತ್ತು ಎಂಬುದನ್ನು ಸಾಬೀತುಪಡಿಸುವ ಒಂದೇ ಒಂದು ಸನ್ನಿವೇಶವೂ ಕಂಡುಬರುತ್ತಿಲ್ಲ. ಆರೋಪಿಯ ಕಣ್ಸನ್ನೆ ಹಾಗೂ ದೇಹಭಾಷೆಯಲ್ಲಿಯೂ ಲೈಂಗಿಕ ಉದ್ದೇಶದ ಅಭಿವ್ಯಕ್ತಿ ಇದ್ದ ಪುರಾವೆಗಳು ದಾಖಲೆಯಲ್ಲಿ ದೊರೆತಿಲ್ಲ. ಅಲ್ಲದೆ ಆತ ನಾ ನಿನ್ನ ಪ್ರೀತಿಸುವೆ ಎಂಬ ಪದವನ್ನು ಒಂದು ಬಾರಿ ಹೇಳಿದ್ದನ್ನು ಹೊರತುಪಡಿಸಿದರೆ ಪದೇ ಪದೇ ಹೇಳಿಲ್ಲ ಎಂದು ನ್ಯಾಯಾಲಯ ನುಡಿಯಿತು.

ಲೈಂಗಿಕ ಸಂಪರ್ಕದಲ್ಲಿ ತೊಡಗಿಸಿಕೊಳ್ಳುವ ಅಥವಾ ಮುಂದುವರಿಸುವ ಉದ್ದೇಶವನ್ನು ಸೂಚಿಸುವ ಇತರ ಸನ್ನಿವೇಶಗಳಿಂದ ಬೆಂಬಲಿತವಾಗಿಲ್ಲದಿದ್ದರೆ, 'ನಾ ನಿನ್ನ ಪ್ರೀತಿಸುತ್ತೇನೆ' ಎಂಬ ಪದಗುಚ್ಛವನ್ನು ಲೈಂಗಿಕ ಪ್ರೇರಿತ ಕ್ರಿಯೆ ಎಂದು ಸ್ವಯಂಚಾಲಿತವಾಗಿ ಅರ್ಥೈಸಲಾಗದು ಎಂದು ಅದು ಹೇಳಿತು.  ಅಂತೆಯೇ ಆರೋಪಿಯ ಶಿಕ್ಷೆಯನ್ನು ರದ್ದುಗೊಳಿಸಿದ ಅದು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿತು.