ನಿರ್ದಿಷ್ಟ ಮಹಿಳೆಯ ಘನತೆಗೆ ಧಕ್ಕೆ ಉಂಟು ಮಾಡುವ ಉದ್ದೇಶವನ್ನು ಸಾಂಧರ್ಬಿಕ ಚೌಕಟ್ಟು ಅಥವಾ ಶಬ್ದಗಳು ಸೂಚಿಸದ ಹೊರತು ಕೇವಲ "ಹೊಲಸು ಭಾಷೆ" ಬಳಸಲಾಗಿದೆ ಎಂದು ಹೇಳುವ ಮೂಲಕ ಮಹಿಳೆಯ ಘನತೆಗೆ ಧಕ್ಕೆ ತರುವುದಕ್ಕೆ ಶಿಕ್ಷೆ ವಿಧಿಸುವ ಐಪಿಸಿ ಸೆಕ್ಷನ್ 509ನ್ನು ಅನ್ವಯಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ಮಧುಶ್ರೀ ದತ್ತಾ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ].
ಹಿಂದೆ, ಮುಂದೆ ಅಥವಾ ಜೊತೆಗೆ ಬಳಸಿದ ನಿರ್ದಿಷ್ಟ ಪದಗಳು, ಸಾಂದರ್ಭಿಕ ವಿವರಗಳು ಅಥವಾ ಮಾಡಲಾದ ಯಾವುದೇ ಸನ್ನೆಗಳ ಉಲ್ಲೇಖಗಳು ಘನತೆಗೆ ಧಕ್ಕೆ ತರುವ ಕ್ರಿಮಿನಲ್ ಉದ್ದೇಶ ಹೇಳುವಂತಿರಬೇಕು ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಪಂಕಜ್ ಕುಮಾರ್ ಮಿಶ್ರಾ ಅವರಿದ್ದ ಪೀಠ ತಿಳಿಸಿದೆ.
"ಯಾವುದೇ ಸಂದರ್ಭೋಚಿತ ಚೌಕಟ್ಟು ಅಥವಾ ಅದರ ಜೊತೆಗಿನ ಪದಗಳಿಲ್ಲದೆ, 'ಹೊಲಸು ಭಾಷೆ' ಎಂಬ ಪದವನ್ನು ಪ್ರತ್ಯೇಕವಾಗಿ ಪರಿಶೀಲಿಸಿದಾಗ ದೂರುದಾರೆಯ ಘನತೆಗೆ ಧಕ್ಕೆ ತರುವ ಉದ್ದೇಶವನ್ನು ಸೂಚಿಸುವ ಪದ ಐಪಿಸಿಯ ಸೆಕ್ಷನ್ 509 ರ ವ್ಯಾಪ್ತಿಗೆ ಬರುವುದಿಲ್ಲ" ಎಂದು ನ್ಯಾಯಾಲಯ ಹೇಳಿದೆ.
ಮಹಿಳಾ ಉದ್ಯೋಗಿಯೊಬ್ಬರು ತನ್ನನ್ನು ಉದ್ಯೋಗದಾತರು ಉದ್ಯೋಗದಿಂದ ಬಲವಂತವಾಗಿ ವಜಾಗೊಳಿಸಿದ್ದಾರೆ ಎಂದು ಆರೋಪಿಸಿದ್ದ ಪ್ರಕರಣ ಇದಾಗಿದೆ. ಬೌದ್ಧಿಕ ಆಸ್ತಿಯುಳ್ಳ ತನ್ನ ಲ್ಯಾಪ್‌ಟಾಪ್‌ಅನ್ನು ಕಂಪೆನಿಯು ವಶಪಡಿಸಿಕೊಂಡು ಭದ್ರತಾ ಸಿಬ್ಬಂದಿ ಮೂಲಕ ತನ್ನನ್ನು ಕಚೇರಿ ಆವರಣದಿಂದ ಹೊರಹಾಕಿಸಿದ್ದರು ಎಂದು ಆಕೆ ಆರೋಪಿಸಿದ್ದರು.
ತನ್ನನ್ನು ವಜಾಗೊಳಿಸುವ ಸಂದರ್ಭದಲ್ಲಿ ಹಿರಿಯರಾದ ಇಬ್ಬರು ಆರೋಪಿಗಳು ಹೊಲಸು ಭಾಷೆ ಬಳಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಐಪಿಸಿಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 504 (ಶಾಂತಿ ಭಂಗದ ಉದ್ದೇಶದಿಂದ ಮಾಡುವ ಅವಮಾನ), 506 (ಕ್ರಿಮಿನಲ್ ಬೆದರಿಕೆ) ಮತ್ತು 509 (ಮಹಿಳೆಯರ ಘನತೆಗೆ ಧಕ್ಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.
ಎಫ್‌ಐಆರ್ ಮತ್ತು ಚಾರ್ಜ್‌ಶೀಟ್ ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದ ನಂತರ, ಆರೋಪಿಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.
ಮೇಲ್ಮನವಿದಾರರ ನಡವಳಿಕೆ ಮಹಿಳೆಯ ಘನತೆಗೆ ಅವಮಾನ ಉಂಟು ಮಾಡುವಂತಹ ತೀವ್ರವಾದ ಭಾವನಾತ್ಮಕ ಪ್ರತಿಕ್ರಿಯೆ ಉಂಟುಮಾಡಬಹುದು ಎನ್ನಲಾದ ತೀರ್ಮಾನಕ್ಕೆ ಸಮಂಜಸವಾಗಿ ಕಾರಣವಾಗುವ ಉದ್ದೇಶ ಕಾಣುತ್ತಿಲ್ಲ ಎಂದು ನ್ಯಾಯಾಲಯ ನುಡಿಯಿತು.
ಇದಲ್ಲದೆ, ಆರೋಪಿ ತನ್ನ ವಿರುದ್ಧ ಐಪಿಸಿಯ ಸೆಕ್ಷನ್ 509 ರ ಅಡಿಯಲ್ಲಿ ಅಪರಾಧವಾಗುವಂತಹ ಭಾಷೆಯನ್ನು ಬಳಸಿದ್ದಾರೆ ಎಂದು ಮಹಿಳೆ ನೀಡಿದ ದೂರು ಸೂಚಿಸುವುದಿಲ್ಲ ಎಂದು ನ್ಯಾಯಾಲಯ ತಿಳಿಸಿತು.
ಆರೋಪಿಗಳು ದೂರುದಾರರನ್ನು "ಹೊಲಸು ಭಾಷೆ" ಬಳಸಿ ನಿಂದಿಸಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಆರೋಪಿಸಿದ್ದರೂ, ಎಫ್‌ಐಆರ್‌ನಲ್ಲಿ ಈ ಆರೋಪ ಇಲ್ಲ ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೆ ಐಪಿಸಿಯ ಸೆಕ್ಷನ್ 323, 504, 506 ಮತ್ತು 509 ರಡಿ ಮಾಡಿದ ಆರೋಪಗಳಲ್ಲೂ ಹುರುಳಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತು. ಆರೋಪಿಗಳ ಪರ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ವಾದ ಮಂಡಿಸಿದ್ದರು.
ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ: