ಮಹಿಳೆಯ ದೇಹ ಆಕೆಯ ದೇಗುಲವಾಗಿದ್ದು ಆಕೆಯ ಘನತೆ ಮತ್ತು ಪಾವಿತ್ರ್ಯವನ್ನು ಪೂಜಿಸುವ ನಮ್ಮ ದೇಶದಲ್ಲಿ ಅದನ್ನು ಹಾಳುಗೆಡವುವುದಕ್ಕೆ ಯಾರಿಗೂ ಅನುಮತಿಸಲಾಗದು ಎಂದು ಮಧ್ಯಪ್ರದೇಶ ಹೈಕೋರ್ಟ್ ಶುಕ್ರವಾರ ಹೇಳಿದೆ [ರೋಹನ್ ನಾಯಕ್ ಮತ್ತಿತರರು ಹಾಗೂ ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ].
ಸಂತ್ರಸ್ತೆಯ ಅಶ್ಲೀಲ ಛಾಯಾಚಿತ್ರ ಮತ್ತು ವೀಡಿಯೊ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿ ಆಕೆಯೊಂದಿಗೆ ಬಲವಂತದ ದೈಹಿಕ ಸಂಬಂಧ ಬೆಳೆಸಿದ್ದ ಆಕೆಯ ಮಾಜಿ ಪ್ರಿಯಕರನ ವಿರುದ್ಧದ ಅತ್ಯಾಚಾರ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದ ನ್ಯಾಯಮೂರ್ತಿ ಪ್ರೇಮ್ ನಾರಾಯಣ್ ಸಿಂಗ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಿಳೆಯ ಘನತೆಗೆ ಧಕ್ಕೆ ತಂದು ನಂತರ ನಿರ್ದಿಷ್ಟ ಸಂದರ್ಭವೊಂದರಲ್ಲಿ ರಾಜಿ ಮಾಡಿಕೊಂಡ ಆಧಾರದಲ್ಲಿ ವಿನಾಯಿತಿ ನೀಡಲಾಗದು ಎಂದು ನ್ಯಾಯಾಲಯ ನುಡಿಯಿತು.
ಪ್ರತಿಯೊಬ್ಬ ವ್ಯಕ್ತಿಯ ತಾಯಿ, ಹೆಂಡತಿ, ಸಹೋದರಿ ಮತ್ತು ಮಗಳು ಇತ್ಯಾದಿ ಪಾತ್ರಗಳಲ್ಲಿ ಮಹಿಳೆ ಇದ್ದಾಳೆ. ಆಕೆ ತ್ಯಾಗಗಳಿಗೆ ವಿಶೇಷವಾಗಿ ಹೆಸರಾಗಿರುವುದರಿಂದ ಆಕೆಯ ದೇಹವನ್ನು ಮಂದಿರವೆಂದೇ ಕರೆಯಲಾಗುತ್ತದೆ. ನಮ್ಮ ದೇಶದಲ್ಲಿ ಸದಾ ಪೂಜಿತಗೊಳ್ಳುವ ಆಕೆಯ ಪವಿತ್ರ ಅಸ್ತಿತ್ವಕ್ಕೆ ಪ್ರತಿಯೊಂದು ಸಂದರ್ಭದಲ್ಲೂ ರಕ್ಷಣೆ ನೀಡಬೇಕಿದೆ. ವಿಶೇಷವಾಗಿ ಶಾಸಕಾಂಗ ತನ್ನ ವಿವೇಚನೆ ಬಳಸಿ ಅಂತಹ ರಾಜಿಗೆ ಅವಕಾಶ ನೀಡಲು ನಿರಾಕರಿಸಿದ್ದಾಗ ರಾಜಿ ಆಧಾರದ ಮೇಲೆ ಖುಲಾಸೆಗೊಳ್ಳಲು ಅನುಮತಿಸಬಾರದು ಎಂದಿತು.
ಆರೋಪಿ ಮದುವೆಯ ನೆಪದಲ್ಲಿ ಸಂತ್ರಸ್ತೆಯೊಂದಿಗೆ ಬಲವಂತದ ದೈಹಿಕ ಸಂಬಂಧ ಬೆಳೆಸಲು ಮುಂದಾಗಿದ್ದು ಬೆದರಿಕೆಯನ್ನೂ ಹಾಕಿದ್ದ. ಹೀಗಾಗಿ ಸಂತ್ರಸ್ತೆಯೊಂದಿಗೆ ರಾಜಿ ಮಾಡಿಕೊಂಡ ಮಾತ್ರಕ್ಕೆ, ಆರೋಪಿ ವಿರುದ್ಧದ ಆರೋಪ ಕಡಿಮೆಯಾಗುತ್ತದೆ ಅಥವಾ ರದ್ದಾಗುತ್ತದೆ ಎನ್ನಲಾಗದು. ಏಕೆಂದರೆ ಅಪರಾಧ ಮಹಿಳೆಯರ ಘನತೆಗೆ ವಿರುದ್ಧವಾಗಿದ್ದು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರವಾಗಿದೆ ಎಂದಿತು. ಅಂತೆಯೇ ಆರೋಪಿ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಲು ಅದು ನಿರಾಕರಿಸಿತು.