Justice Madan Lokur


 

File Photo

ಸುದ್ದಿಗಳು

ʼಗುಂಡು ಹೊಡೆಯಿರಿʼ ಎಂದು ಮಂತ್ರಿ ಹೇಳುವುದು ಕೊಲ್ಲಲು ನೀಡುವ ಪ್ರಚೋದನೆ: ದ್ವೇಷಭಾಷಣ ಕುರಿತಂತೆ ನ್ಯಾ. ಮದನ್ ಲೋಕೂರ್

ದ್ವೇಷಭಾಷಣದ ವಿರುದ್ಧ ಸಂಸತ್ತು ಕಾನೂನು ರೂಪಿಸಬೇಕು ಮತ್ತು ಅಂತಹ ಪ್ರಕರಣಗಳನ್ನು ವಿಚಾರಣೆ ನಡೆಸುವಾಗ ನ್ಯಾಯಾಲಯಗಳು ಹೆಚ್ಚು ಕ್ರಿಯಾಶೀಲವಾಗಿರಬೇಕು ಎಂದು ನ್ಯಾ. ಲೋಕೂರ್ ಕರೆ ನೀಡಿದರು.

Bar & Bench

ದ್ವೇಷಭಾಷಣದ ಬಗ್ಗೆ ಕಾರ್ಯಾಂಗ ಮತ್ತು ನ್ಯಾಯಾಂಗ ನೀಡುತ್ತಿರುವ ಪ್ರತಿಕ್ರಿಯೆ ಕುರಿತು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮದನ್‌ ಲೋಕೂರ್‌ ವಿಷಾದ ವ್ಯಕ್ತಪಡಿಸಿದ್ದಾರೆ.

“ದ್ವೇಷಭಾಷಣ ಮತ್ತು ಅದನ್ನು ಭಾರತದ ನ್ಯಾಯಾಲಯಗಳು ಎದುರಿಸುತ್ತಿರುವ ರೀತಿ” ಕುರಿತಂತೆ ʼಮಂಥನ್‌ ಲೈವ್‌ʼ ಭಾನುವಾರ ಏರ್ಪಡಿಸಿದ್ದ ಆನ್‌ಲೈನ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಗುಂಡು ಹೊಡೆಯಿರಿ ಎನ್ನುವ ಮಂತ್ರಿ ದೆಹಲಿಯಲ್ಲಿ ಇದ್ದಾರೆ. ಅದು ಕೊಲ್ಲಲು ಪ್ರಚೋದನೆ ಅಲ್ಲದೆ ಮತ್ತಿನ್ನೇನು?” ಎಂದು ಅವರು ಪ್ರಶ್ನಿಸಿದರು. ದ್ವೇಷಭಾಷಣವನ್ನು ಅಪರಾಧವಾಗಿ ಪರಿಗಣಿಸುವ ಕಾನೂನುಗಳು, ಪೂರ್ವ ನಿದರ್ಶನಗಳು ಹಾಗೂ ಅಂತರರಾಷ್ಟ್ರೀಯ ನ್ಯಾಯಶಾಸ್ತ್ರ ಈ ಕುರಿತು ಏನನ್ನು ಹೇಳುತ್ತದೆ ಎಂಬುದನ್ನು ಅವರು ಈ ಸಂದರ್ಭದಲ್ಲಿ ವಿವರಿಸಿದರು. ಅಲ್ಲದೆ ದ್ವೇಷಭಾಷಣದ ಅಪರಾಧ ನಿಗದಿಪಡಿಸಲು ಹಿಂಸೆ ನಡೆದಿರಲೇಬೇಕೆಂಬ ಅಗತ್ಯವಿಲ್ಲ ಎಂಬುದನ್ನು ತಮ್ಮ ಭಾಷಣದುದ್ದಕ್ಕೂ ಸ್ಪಷ್ಟಪಡಿಸಿದರು. “ದ್ವೇಷ ಭಾಷಣ ಮಾಡುವ ಸಚಿವರು ಸಮಂಜಸ ವ್ಯಕ್ತಿಯೇ? ಗುಂಪು ಹಲ್ಲೆಯ ಆರೋಪಿಗಳಿಗೆ ಹಾರ ಹಾಕಿದ ಸಚಿವರು ಸಮಂಜಸವಾದ ವ್ಯಕ್ತಿಯೇ? ” ಎಂದು ಅವರು ಇದೇ ವೇಳೆ ಪ್ರಶ್ನಿಸಿದರು.

“ಈಚೆಗೆ, ನೀವು ಸುಲ್ಲಿ ಡೀಲ್ಸ್ ಮತ್ತು ಬುಲ್ಲಿಬಾಯ್ (ಮೊಬೈಲ್‌ ಅಪ್ಲಿಕೇಷನ್‌ ಮೂಲಕ ನಡೆದ), ಮುಸ್ಲಿಂ ಮಹಿಳೆಯರ ಹರಾಜಿನ ಬಗ್ಗೆ ಕೇಳಿರುತ್ತೀರಿ. ಇದರಲ್ಲಿ ಯಾವುದೇ ಹಿಂಸೆ ಇಲ್ಲ, ಆದರೆ ಇದು ದ್ವೇಷಭಾಷಣ ತಾನೇ? "ಪರವಾಗಿಲ್ಲ! ಅಭಿವ್ಯಕ್ತಿ ಸ್ವಾತಂತ್ರ್ಯ" ಎಂದು ನೀವು ಹೇಳಬಹುದೇ? ಇದು ಖಂಡಿತವಾಗಿಯೂ ದ್ವೇಷ ಭಾಷಣ” ಎಂದು ಅವರು ತಿಳಿಸಿದರು.

ಕಳೆದ ವರ್ಷ ಹರಿದ್ವಾರದ ಧರ್ಮಸಂಸದ್‌ನಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆದ ಭಾಷಣವನ್ನು ಚರ್ಚಿಸಿದ ನ್ಯಾಯಮೂರ್ತಿಗಳು “ಧರ್ಮ ಸಂಸದ್‌ನಲ್ಲಿ ಜನಾಂಗೀಯ ನಿರ್ಮೂಲನೆ ಅಥವಾ ನರಮೇಧದ ಕರೆ ನೀಡಲಾಗಿತ್ತು. ಅತಿರೇಕದ ಸಂದರ್ಭಗಳಲ್ಲಿ ದ್ವೇಷಭಾಷಣ ಹಿಂಸಾಚಾರ ಅಥವಾ ನರಮೇಧಕ್ಕೆ ಕಾರಣವಾಗಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು ಎಂಬುದನ್ನು ನೆನಪಿಡಿ” ಎಂದರು. ಇಂತಹ ಸಂದರ್ಭಗಳಲ್ಲಿ ಕಾರ್ಯಾಂಗ ಮೂಕ ಪ್ರೇಕ್ಷಕವಾಗಿತ್ತು. ಸುಪ್ರೀಂಕೋರ್ಟ್‌ ಹೇಳುವವರೆಗೂ ಇಂತಹ ಪ್ರಕರಣಗಳ ಬಗ್ಗೆ ಕ್ರಮ ಕೈಗೊಂಡಿರಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಹಿಂಸೆ ನಡೆದಿದ್ದರಷ್ಟೇ ದ್ವೇಷ ಭಾಷಣ ಕುರಿತಂತೆ ಮಧ್ಯ ಪ್ರವೇಶಿಸುವುದಾಗಿ ಹೇಳುವ ನ್ಯಾಯಾಲಯಗಳ ನಿಲುವನ್ನೂ ಅವರು ಇದೇ ಸಂದರ್ಭದಲ್ಲಿ ಖಂಡಿಸಿದರು. ಹೀಗಾದರೆ ದ್ವೇಷ ಭಾಷಣದ ಚಕ್ರ ಮುಂದುವರೆಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ದ್ವೇಷಭಾಷಣಕ್ಕೆ ಬಲಿಯಾದ ಜನರ ಬಗ್ಗೆ ಒಗ್ಗಟ್ಟು ಪ್ರದರ್ಶಿಸುವುದು ಮಾತ್ರ ನಾವು ಮಾಡಬಹುದಾದ ಕೆಲಸ ಎಂದ ಅವರು ದ್ವೇಷಭಾಷಣದ ವಿರುದ್ಧ ಸಂಸತ್ತು ಕಾನೂನು ರೂಪಿಸಬೇಕು. ಅಂತಹ ಪ್ರಕರಣಗಳನ್ನು ವಿಚಾರಣೆ ನಡೆಸುವಾಗ ನ್ಯಾಯಾಲಯಗಳು ಹೆಚ್ಚು ಕ್ರಿಯಾಶೀಲವಾಗಿರಬೇಕು. ನಾವು ಕಾರ್ಯಾಂಗವನ್ನು ಪ್ರಾಸಿಕ್ಯೂಷನನ್ನು ಈ ಸಂಬಂಧ ತೊಡಗಿಸಿಕೊಳ್ಳಬೇಕಿದೆ ಎಂದು ನ್ಯಾಯಮೂರ್ತಿಗಳು ಕರೆ ನೀಡಿದರು.