Madras High Court, PMLA 
ಸುದ್ದಿಗಳು

ಅಕ್ರಮ ಹಣ ವರ್ಗಾವಣೆ ಸ್ವತಂತ್ರ ಅಪರಾಧ; ವಿಧೇಯ ಅಪರಾಧದ ಮುಕ್ತಾಯವನ್ನು ಇ ಡಿ ಪ್ರಶ್ನಿಸಬಹುದು: ಮದ್ರಾಸ್ ಹೈಕೋರ್ಟ್

ಲಾಟರಿ ದೊರೆ ಸ್ಯಾಂಟಿಯಾಗೊ ಮಾರ್ಟಿನ್ ಮತ್ತು ಸಹ-ಆರೋಪಿಗಳು ಅಕ್ರಮವಾಗಿ ₹ 7.20 ಕೋಟಿ ನಗದು ಹೊಂದಿದ್ದಕ್ಕೆ ಸಂಬಂಧಿಸಿದಂತೆ ಹೂಡಲಾಗಿದ್ದ ಕ್ರಿಮಿನಲ್ ಮೊಕದ್ದಮೆಗೆ ಮರುಜೀವ ನೀಡುವ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.

Bar & Bench

ಅಕ್ರಮವಾಗಿ ₹ 7.20 ಕೋಟಿ ನಗದು ಹೊಂದಿದ್ದ ಆರೋಪದಡಿ ಲಾಟರಿ ದೊರೆ ಸ್ಯಾಂಟಿಯಾಗೊ ಮಾರ್ಟಿನ್ ಮತ್ತು ಸಹ-ಆರೋಪಿಗಳವಿರುದ್ಧ ಹೂಡಲಾಗಿದ್ದ ಕ್ರಿಮಿನಲ್ ಮೊಕದ್ದಮೆಗೆ ಮದ್ರಾಸ್ ಹೈಕೋರ್ಟ್ ಸೋಮವಾರ ಮರುಜೀವ ನೀಡಿದೆ.

ಮಾರ್ಟಿನ್ ವಿರುದ್ಧ 2022ರಲ್ಲಿ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಗೆ ಸಂಬಂಧಿಸಿದಂತೆ ತಮಿಳುನಾಡು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಸಲ್ಲಿಸಿದ ಮುಕ್ತಾಯ ವರದಿ ಪುರಸ್ಕರಿಸಿದ್ದ ಸ್ಥಳೀಯ ನ್ಯಾಯಾಲಯದ ಆದೇಶವನ್ನು ಪೀಠ ಈ ಮೂಲಕ ರದ್ದುಗೊಳಿಸಿತು.

ಅಕ್ರಮ ಹಣ ವರ್ಗಾವಣೆ ಸ್ವತಂತ್ರ ಅಪರಾಧವಾಗಿದ್ದು ವಿಧೇಯ ಅಪರಾಧಕ್ಕೆ (ಪ್ರಿಡಿಕೇಟ್ ಅಫೆನ್ಸ್‌) ಮುಕ್ತಾಯ ವರದಿ ಸಲ್ಲಿಸುವುದನ್ನು ಪ್ರಶ್ನಿಸುವುದು ಇ ಡಿಯ ಹಕ್ಕಾಗಿದೆ ಎಂದು ನ್ಯಾಯಮೂರ್ತಿಗಳಾದ ಎಸ್‌ ಎಂ ಸುಬ್ರಮಣಿಯಂ ಮತ್ತು ವಿ ಶಿವಜ್ಞಾನಂ ಅವರಿದ್ದ ಪೀಠ ತಿಳಿಸಿದೆ.

ವಿಧೇಯ ಅಪರಾಧ ಎಂಬುದು ವಿಸ್ತೃತ ಅಪರಾಧದ ಭಾಗವಾಗಿದ್ದು ಅಕ್ರಮ ಹಣ ವರ್ಗಾವಣೆಯಂತಹ ಅಪರಾಧವು ಭಾರತೀಯ ದಂಡ ಸಂಹಿತೆಯ ಅಡಿ ಬರುವ ಅಪರಾಧದಿಂದ ಆರಂಭಗೊಳ್ಳಲಿದ್ದು, ಅಂತಹ ಅಪರಾಧವನ್ನು (ಐಪಿಸಿ ಅಡಿ ಬರುವ ಅಪರಾಧ) ವಿಧೇಯ ಅಪರಾಧ ಎಂದು ಪರಿಗಣಿಸಲಾಗುತ್ತದೆ.

ವಿಧೇಯ ಅಪರಾಧದಲ್ಲಿ ಖುಲಾಸೆ ಅಥವಾ ದೋಷಮುಕ್ತಗೊಳಿಸುವುದು ಇಲ್ಲವೇ ಅಂತಹ ಅಪರಾಧವನ್ನು ರದ್ದುಗೊಳಿಸುವುದು ಸ್ವಯಂಚಾಲಿತವಾಗಿ ಅಕ್ರಮ ಹಣ ವರ್ಗಾವಣೆ ಅಪರಾಧದಲ್ಲಿ ಖುಲಾಸೆ ಅಥವಾ ಬಿಡುಗಡೆಗೆ ಕಾರಣವಾಗುತ್ತದೆ ಎಂದು 2022ರಲ್ಲಿ ನೀಡಲಾದ ವಿಜಯ್ ಮದನ್‌ಲಾಲ್ ಚೌಧರಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದ ತೀರ್ಪಿನಲ್ಲಿ ತಿಳಿಸಿತ್ತು.

ಆದರೆ, ಅಕ್ರಮ ಹಣ ವರ್ಗಾವಣೆ ತನಿಖೆ ಪ್ರಾರಂಭಿಸಲು ವಿಧೇಯ ಅಪರಾಧ ನಡೆದಿರಬೇಕಿದ್ದರೂ ಇ ಡಿ ಸಕ್ಷಮ ನ್ಯಾಯಾಲಯದೆದುರು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ ದೂರು ಸಲ್ಲಿಸಿದ ಬಳಿಕ ಪಿಎಂಎಲ್‌ಎ ಕಾಯಿದೆ ಅಡಿಯಲ್ಲಿ ಅಕ್ರಮ ಹಣ ವರ್ಗಾವಣೆ ಅಪರಾಧ ಎಂಬುದು ಸ್ವತಂತ್ರ ಅಪರಾಧವಾಗುತ್ತದೆ ಎಂದು ಹೈಕೋರ್ಟ್‌ ತಿಳಿಸಿದೆ.

ಹೀಗಾಗಿ, ವಿಧೇಯ ಅಪರಾಧ ಕುರಿತು ಮುಕ್ತಾಯ ವರದಿ ಸಲ್ಲಿಸುವ ಮೂಲಕ ನ್ಯಾಯಪಾತವಾದಾಗ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 482 ರ ಅಡಿಯಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸುವ ಮೂಲಕ ಹೈಕೋರ್ಟ್‌ ಎದುರು ಅದನ್ನು ಪ್ರಸ್ತಾಪಿಸಲು ಇ ಡಿ ಅರ್ಹವಾಗಿದೆ ಎಂದು ಪೀಠ ನುಡಿದಿದೆ.

ಹಾಗಾಗಿ, ಲಾಟರಿ ಉದ್ಯಮಿ ಮಾರ್ಟಿನ್, ಆತನ ಪತ್ನಿ ಎಂ ಲೀಮಾ ರೋಸ್  ಹಾಗೂ ಇತರ ಮೂವರ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್‌‌ ಮೊಕದ್ದಮೆಯಲ್ಲಿ ಆಲಂದೂರು ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮುಕ್ತಾಯ ವರದಿ ಪುರಸ್ಕರಿಸಿರುವುದನ್ನು ಪ್ರಶ್ನಿಸಿ ಇ ಡಿ ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು  ಹೈಕೋರ್ಟ್‌ ಪುರಸ್ಕರಿಸಿತು. ಪಿಎಂಎಲ್‌ಎ ಮತ್ತು ಐಪಿಸಿ ಸೆಕ್ಷನ್‌ಗಳ ಅಡಿ ವಿಚಾರಣೆ ಮುಂದುವರಿಸಲು ಕ್ರಮವಾಗಿ ಇ ಡಿ ಮತ್ತು ಕ್ರೈಂ ಬ್ರಾಂಚ್‌ಗೆ ಅದು ಅನುಮತಿ ನೀಡಿತು.