ಸೊಸೆ ನಿಕಿತಾ ಸಿಂಘಾನಿಯಾ ಜೊತೆಯಲ್ಲಿರುವ ಮೊಮ್ಮಗನನ್ನು ತಮ್ಮ ಸುಪರ್ದಿಗೆ ಒಪ್ಪಿಸುವಂತೆ ಕೋರಿ ಈಚೆಗೆ ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನ ಟೆಕಿ ಅತುಲ್ ಸುಭಾಷ್ ಅವರ ತಾಯಿ ಈಚೆಗೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಡಿಸೆಂಬರ್ 20 ರಂದು ಅರ್ಜಿ ಆಲಿಸಿರುವ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ಕರ್ನಾಟಕ, ಉತ್ತರ ಪ್ರದೇಶ ಹಾಗೂ ಹರಿಯಾಣ ಸರ್ಕಾರಗಳ ಪ್ರತಿಕ್ರಿಯೆ ಕೇಳಿದ್ದು ಅಪ್ರಾಪ್ತ ಮಗುವಿನ ಸ್ಥಳ ಖಚಿತಪಡಿಸಿಕೊಳ್ಳುವಂತೆ ಸೂಚಿಸಿದೆ.
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸುಭಾಷ್ ಅವರಿಂದ ದೂರವಾಗಿದ್ದ ನಿಕಿತಾ ಹರಿಯಾಣದ ಗುರುಗ್ರಾಮದಲ್ಲಿ ನೆಲೆಸಿದ್ದರು. ಆಕೆಯ ತಾಯಿ ಮತ್ತು ಸಹೋದರ ಉತ್ತರ ಪ್ರದೇಶದ ನಿವಾಸಿಗಳು. ಹೀಗಾಗಿ ಮೂರು ರಾಜ್ಯ ಸರ್ಕಾರಗಳನ್ನು ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡಲಾಗಿದೆ. ಮಗು ಇರುವ ಸ್ಥಳವನ್ನು ಸೊಸೆ ಬಹಿರಂಗಪಡಿಸುತ್ತಿಲ್ಲ ಎಂದು ಆರೋಪಿಸಿ ತಾಯಿ ನ್ಯಾಯಾಲಯದ ಮೊರೆ ಹೋಗಿದ್ದರು. ಹಿರಿಯ ವಕೀಲ ಗೌರವ್ ಅಗರವಾಲ್ ಹಾಗೂ ವಕೀಲ ಕುಮಾರ್ ದುಶ್ಯಂತ್ ಸಿಂಗ್ ತಾಯಿ ಪರ ವಾದ ಮಂಡಿಸಿದರು.
ಸಾಫ್ಟ್‌ವೇರ್ ಇಂಜಿನಿಯರ್ ಸುಭಾಷ್ (34 ವರ್ಷ) ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತಮ್ಮ ಪರಿತ್ಯಕ್ತ ಪತ್ನಿ ನಿಕಿತಾ ಸಿಂಘಾನಿಯಾ ಮತ್ತು ಅವರ ಕುಟುಂಬ ತನಗೆ ಕಿರುಕುಳ ನೀಡಿದೆ ಎಂದು ಅವರು ಡೆತ್ ನೋಟ್ ಬರೆದಿದ್ದಲ್ಲದೆ 90 ನಿಮಿಷಗಳ ವಿಡಿಯೋ ಕೂಡ ರೆಕಾರ್ಡ್ ಮಾಡಿದ್ದರು.
ಅವರ ವಿಡಿಯೋ ಮತ್ತು ಸೂಸೈಡ್ ನೋಟ್ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಗಿದ್ದು, ನಿಕಿತಾ ಮತ್ತು ಅವರ ಕುಟುಂಬ ಸದಸ್ಯರನ್ನು ಬಂಧಿಸುವಂತೆ ಹಲವರು ಒತ್ತಾಯಿಸಿದ್ದರು.
ಉತ್ತರ ಪ್ರದೇಶದ ಜೌನ್‌ಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ, ಜೀವನಾಂಶ ಮತ್ತು ಮಕ್ಕಳ ಪಾಲನೆಗೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಯುತ್ತಿರುವಾಗಲೇ ನಿಕಿತಾ ಸಿಂಘಾನಿಯಾ ಮತ್ತವರ ಕುಟುಂಬ ತನ್ನ ವಿರುದ್ಧ ಅನೇಕ ವೈವಾಹಿಕ ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡುತ್ತಿದೆ ಎಂದು ಅವರು ವಿಡಿಯೋದಲ್ಲಿ ಆರೋಪಿಸಿದ್ದರು.
ಆತ್ಮಹತ್ಯೆ ತೀವ್ರ ಚರ್ಚೆಗೆ ಗ್ರಾಸವಾದ ಬೆನ್ನಿಗೇ ಬೆಂಗಳೂರಿನಲ್ಲಿ ನಿಕಿತಾ ಹಾಗೂ ಆಕೆಯ ಮೂವರು ಕುಟುಂಬ ಸದಸ್ಯರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು 3 (5) (ಸಾಮಾನ್ಯ ಉದ್ದೇಶದಿಂದ ಎಸಗಿದ ಅಪರಾಧ ಕೃತ್ಯ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು.
ನಂತರ ನಿಕಿತಾ, ಆಕೆಯ ತಾಯಿ ಮತ್ತು ಸಹೋದರನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.