Indigo  
ಸುದ್ದಿಗಳು

ಇಂಡಿಗೋ ಬಿಕ್ಕಟ್ಟು: ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ, ದೆಹಲಿ ಹೈಕೋರ್ಟ್ ಸಂಪರ್ಕಿಸುವಂತೆ ಸಲಹೆ

ಪೈಲಟ್‌ಗಳ ಕೊರತೆ ಮತ್ತು ಹೊಸದಾಗಿ ವಿಮಾನ ಕರ್ತವ್ಯ ಸಮಯ ನಿಯಮಾವಳಿ ಜಾರಿಗೆ ತರಲು ಸಾಧ್ಯವಾಗದೆ ಇಂಡಿಗೋ ಗಂಭೀರ ತೊಂದರೆ ಎದುರಿಸಿದೆ.

Bar & Bench

ಇಂಡಿಗೋ ವಿಮಾನಯಾನ ಸಂಸ್ಥೆಯ ವಿಮಾನ ರದ್ದತಿ ಮತ್ತು ವಿಳಂಬದಿಂದ ಉಂಟಾಗಿರುವ ಅವ್ಯವಸ್ಥೆಗೆ ಸಂಬಂಧಿಸಿದ ಅರ್ಜಿ ಆಲಿಸಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ.

ಈಗಾಗಲೇ ದೆಹಲಿ ಹೈಕೋರ್ಟ್‌ ಇದೇ ಪ್ರಕರಣದ ವಿಚಾರಣೆ ನಡೆಸುತ್ತಿದ್ದು ಅಲ್ಲಿಯೇ ಅರ್ಜಿ ಸಲ್ಲಿಸುವಂತೆ ಸಿಜೆಐ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಹಾಗೂ ವಿಪುಲ್ ಎಂ ಪಾಂಚೋಲಿ ಅವರಿದ್ದ ಪೀಠ ಹೇಳಿತು.

ನಿತ್ಯ ಪ್ರಯಾಣಿಕರು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಅರ್ಜಿದಾರರ ಪರ ವಕೀಲ ನರೇಂದ್ರ ಮಿಶ್ರಾ ಒತ್ತಾಯಿಸಿದಾಗ, ಪ್ರಕರಣ ಗಂಭೀರ ಕಳವಳಕಾರಿಯಾಗಿದೆಯಾದರೂ ಸಾಂವಿಧಾನಿಕ ನ್ಯಾಯಾಲಯ ಈಗಾಗಲೇ ಪ್ರಕರಣ ಆಲಿಸುತ್ತಿರುವಾಗ ತಾನು ಮಧ್ಯಪ್ರವೇಶಿಸುವಂತಿಲ್ಲ. ಹೈಕೋರ್ಟ್‌ನಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ತನಗೆ ಅರ್ಜಿ ಸಲ್ಲಿಸಬಹುದು ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿತು.

ಇಂಡಿಗೋ ಸ್ಥಿತಿ ಪರಿಶೀಲಿಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಈಗಾಗಲೇ ತಜ್ಞರ ಸಮಿತಿಯನ್ನು ರಚಿಸಿದೆ ಎಂಬುದನ್ನು ನ್ಯಾಯಾಲಯ ತಿಳಿಸಿತು.

ಇಂಡಿಗೋ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾದ ಮುಕುಲ್ ರೋಹಟ್ಗಿ ಮತ್ತು ಸಂದೀಪ್ ಸೇಥಿ ಹಾಗೂ ಅವರ ಕಾನೂನು ತಂಡ ವಾದ ಮಂಡಿಸಿತು.

ಪೈಲಟ್‌ಗಳ ಕೊರತೆ ಮತ್ತು ಹೊಸದಾಗಿ ವಿಮಾನ ಕರ್ತವ್ಯ ಸಮಯ ನಿಯಮಾವಳಿ ಜಾರಿಗೆ ತರಲು ಸಾಧ್ಯವಾಗದೆ ಇಂಡಿಗೋ ಗಂಭೀರ ತೊಂದರೆ ಎದುರಿಸಿದೆ. ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂಡಿಗೋಗೆ ವಿನಾಯಿತಿ ನೀಡಿದ್ದ ಡಿಜಿಸಿಎ ಶೇಕಡಾ 10 ರಷ್ಟು ವಿಮಾನ ಹಾರಾಟ ಕಡಿತಗೊಳಿಸುವಂತೆ ಆದೇಶಿಸಿತ್ತು.

 ಬಿಕ್ಕಟ್ಟನ್ನು ಶಮನಗೊಳಿಸಲು ಕೇಂದ್ರ ಸರ್ಕಾರ ಮತ್ತು ಡಿಜಿಸಿಎ ವಿಫಲವಾಗಿವೆ ಎಂದು ಕಳೆದ ವಾರ ದೆಹಲಿ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತ್ತು. ಇದೇ ವೇಳೆ ವಿಮಾನ ರದ್ದತಿ ಅಥವಾ ವಿಳಂಬದಿಂದಾಗಿ ಗಂಟೆಗಟ್ಟಲೆ ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರಿಗೆ ಪರಿಹಾರ ನೀಡುವಂತೆಯೂ ಅದು ಇಂಡಿಗೋಗೆ ಸೂಚಿಸಿತ್ತು.

"ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಡಿಜಿಸಿಎ ತೆಗೆದುಕೊಂಡ ಕ್ರಮಗಳನ್ನು ನಾವು ಶ್ಲಾಘಿಸುತ್ತೇವೆ. ಆದರೂ, ವಿಮಾನ ನಿಲ್ದಾಣಗಳಲ್ಲಿ ಲಕ್ಷಾಂತರ ಪ್ರಯಾಣಿಕರ ಕಾಳಜಿ ಮಾಡದೆ ಇಂತಹ ಪರಿಸ್ಥಿತಿ ಉಂಟಾಗಲು ಹೇಗೆ ಅವಕಾಶ ನೀಡಲಾಯಿತು ಎಂಬುದು ಬೇಸರ ತಂದಿದೆ. ಇಂತಹ ಪರಿಸ್ಥಿತಿ ಪ್ರಯಾಣಿಕರಿಗೆ ಅಸೌಕರ್ಯ ಉಂಟುಮಾಡುವುದಷ್ಟೇ ಅಲ್ಲ, ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ, ಏಕೆಂದರೆ ಇಂದಿನ ಪರಿಸ್ಥಿತಿಯಲ್ಲಿ ಪ್ರಯಾಣಿಕರ ವೇಗವಾದ ಸಂಚಾರ ಆರ್ಥಿಕತೆಯನ್ನು ಸಮರ್ಥವಾಗಿ ಕಾರ್ಯನಿರ್ವಹಿಸುವಂತೆ ಮಾಡುವ ಪ್ರಮುಖ ಅಂಶವಾಗಿದೆ." ಎಂದು ನ್ಯಾಯಾಲಯ ಕೇಂದ್ರದ ವಿರುದ್ಧ ಚಾಟಿ ಬೀಸಿತ್ತು.

ತನಿಖೆ ಪೂರ್ಣಗೊಳಿಸಿ ಮುಂದಿನ ವಿಚಾರಣೆ ನಡೆಯಲಿರುವ ಜನವರಿ 22, 2026ರರೊಳಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿತ್ತು.

ವಿಚಾರಣೆ ಬಳಿಕ ನಾಲ್ವರು ವಿಮಾನ ಕಾರ್ಯಾಚರಣಾ ನಿರೀಕ್ಷಕರನ್ನು ಡಿಜಿಸಿಎ ವಜಾಗೊಳಿಸಿತ್ತು. ವಿಮಾನ ಪ್ರಯಾಣಕ್ಕೆ ಮರುಚಾಲನೆ ನೀಡುವ ನಿಟ್ಟಿನಲ್ಲಿ ಗುಡಗಾಂವ್ನಲ್ಲಿರುವ ಇಂಡಿಗೊ ಪ್ರಧಾನ ಕಚೇರಿಯಲ್ಲಿ ಮೇಲ್ವಿಚಾರಣೆಗಾಗಿ ತನ್ನ ಹಲವು ಅಧಿಕಾರಿಗಳನ್ನು ಅದು ನಿಯೋಜಿಸಿತ್ತು.