Wedding 
ಸುದ್ದಿಗಳು

ಯುವತಿಯ ಅಚಲ ಒಲುಮೆಗೆ ತಲೆದೂಗಿದ ಕೇರಳ ಹೈಕೋರ್ಟ್: ಮದುವೆಗಾಗಿ ಜೀವಾವಧಿ ಶಿಕ್ಷೆಗೊಳಗಾದ ವ್ಯಕ್ತಿಗೆ ಪೆರೋಲ್

ತನ್ನ ಸಂಗಾತಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆಂದು ತಿಳಿದಿದ್ದರೂ, ಅಪರಾಧಿಯನ್ನು ಮದುವೆಯಾಗಲು ಮುಂದಾದ ಮಹಿಳೆಯ ಧೈರ್ಯವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

Bar & Bench

ತನ್ನ ಸಂಗಾತಿ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆಂದು ತಿಳಿದೂ, ಅಪರಾಧಿಯನ್ನು ಮದುವೆಯಾಗುವ ಅಚಲ ನಿರ್ಧಾರ ತಳೆದ ಯುವತಿಯೊಬ್ಬರ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೇರಳ ಹೈಕೋರ್ಟ್‌ ಆಕೆಯನ್ನು ಮದುವೆಯಾಗಲು ಜೀವಾವಧಿ ಶಿಕ್ಷೆಗೊಳಗಾದ ವ್ಯಕ್ತಿಗೆ 15 ದಿನಗಳ ಪೆರೋಲ್ ನೀಡಿತು [ಸಾಥಿ ವಿ ಮತ್ತು ಕೇರಳ ಹೈಕೋರ್ಟ್‌ ಇನ್ನಿತರರ ನಡುವಣ ಪ್ರಕರಣ].

ಜೀವಾವಧಿ ಶಿಕ್ಷೆಗೊಳಗಾದ ಸಂಗಾತಿ ಜೈಲಿನಲ್ಲಿಯೇ ಇರುತ್ತಾನೆ ಎಂದು ತಿಳಿದಿದ್ದರೂ, ಆತನನ್ನು ಮದುವೆಯಾಗಲು ದೃಢನಿಶ್ಚಯ ಮಾಡಿದ ಮಹಿಳೆಯ ಧೈರ್ಯ ತಮ್ಮನ್ನು ಭಾವುಕರನ್ನಾಗಿಸಿದೆ ಎಂದು ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್ ತಿಳಿಸಿದರು.

"ಅಪರಾಧಿಯನ್ನು ಮದುವೆಯಾಗಲು ನಿರ್ಧರಿಸಿದ ಆ ಹುಡುಗಿಯ ದೃಷ್ಟಿಕೋನದಿಂದ  ನಾನು ಈ ಪ್ರಕರಣ ನೋಡುತ್ತಿದ್ದೇನೆ. ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನಂತರವೂ ಅವಳ ಪ್ರೀತಿ  ಮುಂದುವರೆಯುತ್ತಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಆಕೆ 'ನೀನು ನನ್ನ ಇಂದು, ನನ್ನ ನಾಳೆ ಮತ್ತು ನನಗೆ ಎಂದೆಂದಿಗೂ' ಎಂದು ಹೇಳುತ್ತಿದ್ದಾಳೆ. ಅವಳು 'ನೀನು ನನ್ನ ಆತ್ಮ ಸಂಗಾತಿ,  ಜೊತೆಗಾರ, ಜೀವದ ಗೆಳೆಯʼ ಎಂದು ಹೇಳುತ್ತಾಳೆ. ತನ್ನ ಸಂಗಾತಿ ಜೈಲಿನಲ್ಲಿದ್ದರೂ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ ಎಂದು ತಿಳಿದಿದ್ದರೂ, ಅಪರಾಧಿಯನ್ನು ಮದುವೆಯಾಗಲು ಸಿದ್ಧವಾಗಿರುವ ಆ ಹುಡುಗಿಯ ಧೈರ್ಯವನ್ನು ಈ ನ್ಯಾಯಾಲಯ ನಿರ್ಲಕ್ಷಿಸಲು ಸಾಧ್ಯವಿಲ್ಲ. ಅಪರಾಧಿಗೆ 15 ದಿನಗಳ ಅವಧಿಗೆ ಪೆರೋಲ್ ನೀಡಲು ನಾನು ನನ್ನ ಅಸಾಧಾರಣ ನ್ಯಾಯವ್ಯಾಪ್ತಿಯನ್ನು ಬಳಸುತ್ತಿದ್ದೇನೆ" ಎಂದು ನ್ಯಾಯಮೂರ್ತಿಗಳು ವಿವರಿಸಿದ್ದಾರೆ.

ಕೊಲೆ ಪ್ರಕರಣವೊಂದರಲ್ಲಿ ಅಪರಾಧಿ ಎಂದು ಸಾಬೀತಾಗಿದ್ದ ತನ್ನ ಸಂಗಾತಿ ಜೈಲಿನಲ್ಲಿದ್ದಾನೆಂದು ತಿಳಿದಿದ್ದರೂ, ಅಪರಾಧಿಯನ್ನು ಮದುವೆಯಾಗಲು ಸಿದ್ಧವಾಗಿರುವ ಆ ಹುಡುಗಿಯ ಧೈರ್ಯವನ್ನು ಈ ನ್ಯಾಯಾಲಯ ನಿರ್ಲಕ್ಷಿಸಲು ಸಾಧ್ಯವಿಲ್ಲ...
ಕೇರಳ ಹೈಕೋರ್ಟ್

ಜುಲೈ 13, 2025 ರಂದು ತನ್ನ ಸಂಗಾತಿಯನ್ನು ಮದುವೆಯಾಗಲು ಸಾಧ್ಯವಾಗುವಂತೆ ತನ್ನ ಮಗನಿಗೆ ತುರ್ತು ಪೆರೋಲ್ ಕೋರಿ ಅಪರಾಧಿಯ ತಾಯಿ ಸಲ್ಲಿಸಿದ್ದ ಕ್ರಿಮಿನಲ್ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ನೀಡಿದರು.

ಅಮೆರಿಕದ ಖ್ಯಾತ ಕವಯಿತ್ರಿ ಮಾಯಾ ಏಂಜೆಲೋ ಅವರು ಪ್ರೇಮದ ಕುರಿತಾಗಿ ಬರೆದಿರುವ,

ʼಒಲುಮೆಗಿಲ್ಲ ಅಡೆ ತಡೆ
ಮೀರುವುದು ಅದು ಎಲ್ಲ ಒಡ್ಡುಗಳನು
ಹಾರುವುದು ಬೇಲಿಗಳನು
ಭರವಸೆಯ ಗೂಡು ಸೇರಲು
ತಾ ಛೇದಿಸುವುದು ಗೋಡೆಗಳನುʼ
ಎಂಬ ಸಾಲುಗಳನ್ನು ಅವರು ತಮ್ಮ ಆದೇಶದಲ್ಲಿ ಉಲ್ಲೇಖಿಸಿದರು.

ಸನ್ನಿವೇಶದ ಭಾವತೀವ್ರತೆಯನ್ನು ಪರಿಗಣಿಸಿದ ನ್ಯಾಯಾಲಯ  ಸಂವಿಧಾನದ 226 ನೇ ವಿಧಿಯಡಿ ದತ್ತವಾದ ತನ್ನ ಅಸಾಧಾರಣ ನ್ಯಾಯವ್ಯಾಪ್ತಿ ಬಳಸಿ ಅಪರಾಧಿಗೆ ಪೆರೋಲ್ ನೀಡಲು ನಿರ್ಧರಿಸಿತು.

" ಅಪರಾಧಿಗೆ 15 ದಿನಗಳ ಪೆರೋಲ್ ನೀಡಬಹುದು ಎಂಬುದು ನನ್ನ ಅಭಿಪ್ರಾಯ. ಆ ಹುಡುಗಿ ಸಂತೋಷವಾಗಿರಲಿ, ನ್ಯಾಯಾಲಯ ಆಕೆಯನ್ನು ಎಲ್ಲಾ ರೀತಿಯಲ್ಲಿ ಹರಸುತ್ತದೆ" ಎಂದು ಅದು ಹೇಳಿದೆ.

ಅಪರಾಧಿ ಯುವಕನೊಂದಿಗೆ ಹುಡುಗಿಯ ಮದುವೆಯು ಆತನಿಗೆ ಶಿಕ್ಷೆ ವಿಧಿಸುವುದಕ್ಕೂ ಮುನ್ನವೇ ನಿಶ್ಚಯವಾಗಿತ್ತು ಎನ್ನುವ ಅಂಶವನ್ನು ಇದೇ ವೇಳೆ ಯುವಕನ ತಾಯಿಯು ನ್ಯಾಯಾಲಯದ ಗಮನಕ್ಕೆ ತಂದರು.