ಸಂಸತ್ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಲು ಎಂಜಿನಿಯರ್ ರಶೀದ್‌ಗೆ ಕಸ್ಟಡಿ ಪೆರೋಲ್: ದೆಹಲಿ ಹೈಕೋರ್ಟ್ ಅನುಮತಿ

ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ರಶೀದ್ ಅವರಿಗೆ ಕಸ್ಟಡಿ ಪೆರೋಲ್ ನೀಡಲು ನ್ಯಾಯಮೂರ್ತಿ ವಿಕಾಸ್ ಮಹಾಜನ್ ಅನುಮತಿಸಿದರು.
Engineer Rashid, Delhi HC
Engineer Rashid, Delhi HC
Published on

ಫೆಬ್ರವರಿ 11ರಿಂದ ಫೆಬ್ರವರಿ 13ರವರೆಗೆ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಲು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದ ಲೋಕಸಭಾ ಸದಸ್ಯ (ಸಂಸದ) ಎಂಜಿನಿಯರ್ ರಶೀದ್ ಅವರಿಗೆ ದೆಹಲಿ ಹೈಕೋರ್ಟ್ ಸೋಮವಾರ ಕಸ್ಟಡಿ ಪೆರೋಲ್ ನೀಡಿದೆ.

ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಅಡಿಯಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದಡಿ ರಶೀದ್ ಪ್ರಸ್ತುತ ಜೈಲಿನಲ್ಲಿದ್ದಾರೆ.

Also Read
'ಎಂಜಿನಿಯರ್ ರಶೀದ್ ಜಾಮೀನು ಅರ್ಜಿ ವಿಚಾರಣೆ ಯಾರು ನಡೆಸಬೇಕು?' ಸುಪ್ರೀಂ ಸ್ಪಷ್ಟನೆ ಕೇಳಿದ ದೆಹಲಿ ಹೈಕೋರ್ಟ್

ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ರಶೀದ್ ಅವರಿಗೆ ಕಸ್ಟಡಿ ಪೆರೋಲ್ ನೀಡಲು ನ್ಯಾಯಮೂರ್ತಿ ವಿಕಾಸ್ ಮಹಾಜನ್ ಅನುಮತಿಸಿದರು.

ಯಾವುದೇ ಫೋನ್, ಮೊಬೈಲ್, ಲ್ಯಾಂಡ್‌ಲೈನ್ ಬಳಸಬಾರದು, ಇಂಟರ್ನೆಟ್ ಬಳಸಬಾರದು ಮತ್ತು ಯಾವುದೇ ವ್ಯಕ್ತಿಯೊಂದಿಗೆ ಸಂವಹನ ನಡೆಸಬಾರದು ಅಥವಾ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಬಾರದು ಎಂದು ನ್ಯಾಯಾಲಯ ತಾಕೀತು ಮಾಡಿದೆ.

ವಿಚಾರಣಾ ನ್ಯಾಯಾಲಯದ ಮುಂದೆ ಬಾಕಿ ಇರುವ ಜಾಮೀನು ಅರ್ಜಿಯನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ರಶೀದ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಸಂಸತ್‌ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಲು ಮಧ್ಯಂತರ ಜಾಮೀನು ಕೋರಿಯೂ ಅವರು ಅರ್ಜಿ ಸಲ್ಲಿಸಿದ್ದರು.

ಇದಕ್ಕೂ ಮೊದಲು, ಜಾಮೀನು ಅರ್ಜಿ ಆಲಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಾಯಿದೆಯಡಿ ರೂಪುಗೊಂಡ ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತು. ಆದರೆ ಸಂಬಂಧಪಟ್ಟ ಜನ ಪ್ರತಿನಿಧಿಗಳ ನ್ಯಾಯಾಲಯವಷ್ಟೇ ಇದನ್ನು ವಿಚಾರಣೆ ನಡೆಸಬಹುದು ಎಂದು ತಿಳಿಸಿ ನಂತರ ಪ್ರಕರಣದ ವಿಚಾರಣೆ ಕೈಬಿಟ್ಟಿತ್ತು.

ಹೀಗಾಗಿ ಅವರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ಎನ್‌ಐಎ ನ್ಯಾಯಾಲಯ ವಿಚಾರಣೆ ನಡೆಸಬೇಕೆ ಅಥವಾ ಜನಪ್ರತಿನಿಧಿಗಳ ನ್ಯಾಯಾಲಯ ನಡೆಸಬೇಕೆ ಎಂಬ ಗೊಂದಲ ಎದ್ದಿತ್ತು.  

ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳನ್ನು ವಿಚಾರಣೆ ನಡೆಸುವ  ನ್ಯಾಯಾಲಯವಲ್ಲದ ಕಾರಣ ಎನ್‌ಐಎ ನ್ಯಾಯಾಲಯ ತನ್ನ ಜಾಮೀನು ಅರ್ಜಿಯನ್ನು ಆಲಿಸುತ್ತಿಲ್ಲ ಹೀಗಾಗಿ ತಮಗೆ ಪರಿಹಾರ ದೊರೆಯುತ್ತಿಲ್ಲ ಎಂದು ರಶೀದ್ ಹೈಕೋರ್ಟ್‌ಗೆ ತಿಳಿಸಿದ್ದರು.

Also Read
ಕಾಶ್ಮೀರ ವಿಧಾನಸಭಾ ಚುನಾವಣಾ ಪ್ರಚಾರ: ಎಂಜಿನಿಯರ್ ರಶೀದ್‌ಗೆ ದೆಹಲಿ ನ್ಯಾಯಾಲಯ ಮಧ್ಯಂತರ ಜಾಮೀನು

ನಂತರ ಹೈಕೋರ್ಟ್, ಜಾಮೀನು ಅರ್ಜಿಯನ್ನು ಯಾವ ನ್ಯಾಯಾಲಯ ವಿಚಾರಣೆ ನಡೆಸಬೇಕು ಎಂಬುದರ ಕುರಿತು ಸುಪ್ರೀಂ ಕೋರ್ಟ್‌ನಿಂದ ಸ್ಪಷ್ಟೀಕರಣ ಕೋರಿತ್ತು.

ಈ ಮಧ್ಯೆ, ಸಂಸತ್ತಿಗೆ ಹಾಜರಾಗಲು ಅವರನ್ನು ಸೀಮಿತ ಅವಧಿಗೆ ಕಸ್ಟಡಿ ಪೆರೋಲ್ ಮೇಲೆ ಬಿಡುಗಡೆ ಮಾಡಲು ಅದು ಆದೇಶಿಸಿದೆ. ಯಾವ ನ್ಯಾಯಾಲಯ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಬೇಕು ಎಂಬುದರ ಕುರಿತು ಮಂಗಳವಾರ ನ್ಯಾಯಾಲಯ ಆಲಿಸಲಿದೆ.

ರಶೀದ್ ಅವರನ್ನು ಹಿರಿಯ ವಕೀಲ ಎನ್ ಹರಿಹರನ್ ಪ್ರತಿನಿಧಿಸಿದ್ದರೆ ಎನ್‌ಐಎ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ವಾದ ಮಂಡಿಸಿದ್ದರು.

Kannada Bar & Bench
kannada.barandbench.com