Delhi High Court 
ಸುದ್ದಿಗಳು

ಅರ್ಜಿದಾರರ ಸಹಿ ಇಲ್ಲದೆ ಮನವಿ ಸಲ್ಲಿಕೆ: ವಕೀಲರಿಗೆ ₹50,000 ದಂಡ ವಿಧಿಸಿದ ದೆಹಲಿ ಹೈಕೋರ್ಟ್

ವಕೀಲರು ದೂರುಗಳನ್ನು ಸಲ್ಲಿಸುವುದು ಮತ್ತು ಕಕ್ಷಿದಾರರ ಸಹಿ ಇಲ್ಲದೆ ತಾವಾಗಿಯೇ ನ್ಯಾಯಾಲಯಕ್ಕೆ ಹೋಗುವುದು ಕಾನೂನು ಪ್ರಕ್ರಿಯೆಯ ದುರುಪಯೋಗಕ್ಕೆ ಸಮ ಎಂದು ನ್ಯಾಯಾಲಯ ಹೇಳಿದೆ.

Bar & Bench

ದಾವೆ ಹೂಡುವವರ ಸಹಿ ಇಲ್ಲದೆ ಅರ್ಜಿ ಸಲ್ಲಿಸಿದ್ದಕ್ಕಾಗಿ ವಕೀಲ ಹಾಗೂ ದೂರುದಾರನಿಗೆ  ₹50,000 ದಂಡ ವಿಧಿಸಿ ದೆಹಲಿ ಹೈಕೋರ್ಟ್‌ ಈಚೆಗೆ ಆದೇಶ ಹೊರಡಿಸಿದೆ [ಮಧು ಗುಪ್ತಾ ಮತ್ತು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಇನ್ನಿತರರ ನಡುವಣ ಪ್ರಕರಣ].

ದೆಹಲಿಯಲ್ಲಿ ಅಕ್ರಮ ಕಾಮಗಾರಿ ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ವಕೀಲರ ಸಹಿ ಮಾತ್ರ ಇತ್ತು. ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಪರವಾಗಿ ಹಾಜರಾದ ವಕೀಲರು, ಅರ್ಜಿಗೆ ದಾವೆದಾರ ಸಹಿ ಮಾಡಿಲ್ಲ, ಬದಲಿಗೆ ಅವರನ್ನು ಪ್ರತಿನಿಧಿಸುವ ವಕೀಲ ಫರ್ಹಾದ್ ಆಲಂ ಮಾತ್ರ ಸಹಿ ಮಾಡಿದ್ದಾರೆ ಎಂದು ಗಮನ ಸೆಳೆದರು.

ಅಕ್ರಮ ಕಾಮಗಾರಿ  ಕುರಿತು ವಿಶೇಷ ಕಾರ್ಯಪಡೆಯ ಮುಂದೆ ಸಲ್ಲಿಸಲಾದ ದೂರಿನಲ್ಲಿ ಒದಗಿಸಲಾದ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿವರಗಳು ಅರ್ಜಿದಾರರದ್ದಾಗಿರದೆ, ವಕೀಲರಿಗೆ ಸೇರಿವೆ ಎಂದು ಕೂಡ ನ್ಯಾಯಾಲಯಕ್ಕೆ ತಿಳಿಸಲಾಯಿತು. ಅರ್ಜಿಯಲ್ಲಿರುವ ವಕೀಲರ ವಿವರಗಳು ಎಸ್‌ಟಿಎಫ್ ಪೋರ್ಟಲ್‌ನಲ್ಲಿ ದೂರುದಾರರ ವಿವರಗಳೊಂದಿಗೆ ಹೊಂದಿಕೆಯಾಗುವುದನ್ನು ನ್ಯಾಯಾಲಯ ಗಮನಿಸಿತು.

ಅನಧಿಕೃತ ಕಾಮಗಾರಿ ವಿರುದ್ಧ ಅರ್ಜಿದಾರರ ಸಹಿ ಇಲ್ಲದೇ ವಕೀಲರೇ ಖುದ್ದು ದೂರು ಸಲ್ಲಿಸುವುದಕ್ಕೆ ತೀವ್ರವಾಗಿ ಆಕ್ಷೇಪಿಸಿದ ನ್ಯಾ. ಮಿನಿ ಪುಷ್ಕರ್ಣ ಅವರಿದ್ದ ಏಕಸದಸ್ಯ ಪೀಠ ಇದನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದಿತು.

ಹೀಗೆ ನಡೆದುಕೊಂಡಿರುವುದು ಸ್ಪಷ್ಟವಾಗಿ ಕಾನೂನು ಪ್ರಕ್ರಿಯೆಯ ದುರುಪಯೋಗವಾಗಿದ್ದು ನ್ಯಾಯಾಲಯದ ಪ್ರಕ್ರಿಯೆಯನ್ನು ಗುಪ್ತ ಉದ್ದೇಶಗಳಿಗಾಗಿ ದುರುಪಯೋಗಪಡಿಸಿಕೊಳ್ಳುವಂತಿಲ್ಲ ಎಂದು ಅದು ಎಚ್ಚರಿಕೆ ನೀಡಿತು.

ಅಕ್ರಮ ಕಾಮಗಾರಿಗೆ ಸಂಬಂಧಿಸಿದಂತೆ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ದೆಹಲಿ ಮಹಾನಗರ ಪಾಲಿಕೆ ಇದೇ ವೇಳೆ ನ್ಯಾಯಾಲಯಕ್ಕೆ ತಿಳಿಸಿತು. ಅಂತೆಯೇ ಅರ್ಜಿ ವಜಾಗೊಳಿಸಿದ ಪೀಠ ಮನವಿದಾರ ಮತ್ತು ವಕೀಲರಿಗೆ ಜಂಟಿಯಾಗಿ ₹50,000 ದಂಡ ವಿಧಿಸಿತು. ಆದೇಶ ಪಾಲನೆಯಾಗಿದೆಯೇ ಎಂಬ ಕುರಿತು ಜಂಟಿ ರಿಜಿಸ್ಟ್ರಾರ್ ಜುಲೈ 21ರಂದು ವಿಚಾರಣೆ ನಡೆಸಲಿದ್ದಾರೆ.

[ಆದೇಶದ ಪ್ರತಿ]

Madhu_Gupta_vs_Municipal_Corporation_of_Delhi_and_Others.pdf
Preview