Gujarat High Court 
ಸುದ್ದಿಗಳು

ಮೌಖಿಕ ಪರಸ್ಪರ ಒಪ್ಪಿಗೆಯ ಮೂಲಕ ಮುಸ್ಲಿಂ ವಿವಾಹ ರದ್ದುಗೊಳಿಸಿಕೊಳ್ಳಬಹುದು: ಗುಜರಾತ್ ಹೈಕೋರ್ಟ್

"ಮುಬಾರತ್‌ಗೆ (ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ) ಸಂಬಂಧಿಸಿದಂತೆ ಲಿಖಿತ ಒಪ್ಪಂದ ಇರಲೇಬೇಕು ಎನ್ನಲು ಯಾವುದೇ ಕಾರಣವಿಲ್ಲ" ಎಂದು ನ್ಯಾಯಾಲಯ ಹೇಳಿದೆ.

Bar & Bench

ಲಿಖಿತ ವಿಚ್ಛೇದನದ ಒಪ್ಪಂದವಿಲ್ಲದೆಯೂ, ಮುಸ್ಲಿಂ ವಿವಾಹವನ್ನು ಮುಬಾರತ್ (ಪರಸ್ಪರ ಒಪ್ಪಿಗೆಯ ವಿಚ್ಛೇದನ) ಮೂಲಕ ರದ್ದುಪಡಿಸಿಕೊಳ್ಳಬಹುದು ಎಂದು ಗುಜರಾತ್ ಹೈಕೋರ್ಟ್ ತೀರ್ಪು ನೀಡಿದೆ.

ಮುಬಾರತ್ ಮೂಲಕ ವಿಚ್ಛೇದನ ಪಡೆಯಲು ವಿವಾಹ ವಿಸರ್ಜಿಸಲು ಲಿಖಿತ ಒಪ್ಪಂದ ಅಗತ್ಯ ಎಂಬ ಕೌಟುಂಬಿಕ ನ್ಯಾಯಾಲಯದ ಆದೇಶ  ರದ್ದುಗೊಳಿಸಿದ ನ್ಯಾಯಮೂರ್ತಿ ಎ.ವೈ ಕೊಗ್ಜೆ ಮತ್ತು ನ್ಯಾಯಮೂರ್ತಿ ಎನ್ ಎಸ್ ಸಂಜಯ್ ಗೌಡ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ನಿಖಾ ಆದ ಕಕ್ಷಿದಾರರ ನಡುವಿನ ವಿವಾಹ ವಿಸರ್ಜನೆಯ ಒಪ್ಪಂದವನ್ನು ಲಿಖಿತ ಸ್ವರೂಪದಲ್ಲಿ ದಾಖಲಿಸುವುದು ಅತ್ಯಗತ್ಯ ಎಂದು ನ್ಯಾಯಾಲಯ ಭಾವಿಸುವುದಿಲ್ಲ. ಮುಬಾರತ್‌ನ ಉದ್ದೇಶಕ್ಕಾಗಿ ಮೌಖಿಕ ಪರಸ್ಪರ ಒಪ್ಪಿಗೆಯ ಮೂಲಕ ನಿಖಾ ರದ್ದುಗೊಳಿಸಿಕೊಂಡರೆ ಅದೇ ವಿವಾಹ ವಿಸರ್ಜನೆ ಎನಿಸಿಕೊಳ್ಳುತ್ತದೆ ಎಂದು ಹೈಕೋರ್ಟ್‌ ಜುಲೈ 23ರಂದುತೀರ್ಪು ನೀಡಿದೆ.

ಕುರಾನ್, ಹದೀಸ್ (ಕುರಾನ್‌ ಹೇಳುವ ಸಂಪ್ರದಾಯಗಳ ಸಂಗ್ರಹ) ಅಥವಾ ಸ್ಥಾಪಿತ ಮುಸ್ಲಿಂ ವೈಯಕ್ತಿಕ ಕಾನೂನು ಪದ್ಧತಿಗಳಲ್ಲಿ ಮುಬಾರತ್‌ನ ಲಿಖಿತ ಒಪ್ಪಂದ ಇರಬೇಕು ಎಂಬ ಯಾವುದೇ ಷರತ್ತು ಇಲ್ಲ ಎಂದು ಹೈಕೋರ್ಟ್ ಗಮನಸೆಳೆದಿದೆ.

ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ನಿಖಾ ಅಥವಾ ಮುಸ್ಲಿಂ ವಿವಾಹ ನೋಂದಣಿಯಾಗುವುದು ಅತ್ಯಗತ್ಯವಲ್ಲ ಎಂದು ಅದು ಹೇಳಿದೆ.

"ಸಾಕ್ಷಿಯ ಸಮ್ಮುಖದಲ್ಲಿ 'ಕಬೂಲ್' ಎಂಬ ಪದಗಳನ್ನು ಉಚ್ಚರಿಸುವ ಮೂಲಕ  ಕಕ್ಷಿದಾರರು ಮಾಡಿಕೊಂಡ ಒಪ್ಪಂದವನ್ನು ಮಾತ್ರ ನಿಖಾನಾಮಾ ಗುರುತಿಸುತ್ತದೆಯಾದರೂ ನಿಖಾನಾಮಾ ಅಥವಾ ನಿಖಾ ನೋಂದಣಿ ನಿಖಾದ ಅತ್ಯಗತ್ಯ ಪ್ರಕ್ರಿಯೆಯ ಭಾಗವಲ್ಲ. ಅದೇ ರೀತಿ, ಮುಬಾರತ್‌ಗೆ ಲಿಖಿತ ಒಪ್ಪಂದ  ಎನ್ನವುದು ಕೂಡ ಅತ್ಯಗತ್ಯ ಪ್ರಕ್ರಿಯೆ ಅಲ್ಲ" ಎಂದು ನ್ಯಾಯಾಲಯ ಹೇಳಿದೆ.

ವಿಚ್ಛೇದನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಳೆದ ಏಪ್ರಿಲ್‌ನಲ್ಲಿ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ದಂಪತಿ ವಿಚ್ಛೇದನ ಕೋರಿ ಜಂಟಿಯಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ಮುಬಾರತ್ ಮೂಲಕ ತಮ್ಮ ವಿವಾಹವನ್ನು ವಿಸರ್ಜಿಸಲಾಗಿದೆ ಎಂದು ಘೋಷಿಸುವಂತೆ ಮುಸ್ಲಿಂ ದಂಪತಿ ಕೋರಿದ್ದರು .

ಆದರೂ, ಮುಬಾರತ್‌ ಮೂಲಕ ವಿಚ್ಛೇದನ ಪಡೆಯಲು ಲಿಖಿತ ಮುಬಾರತ್ ಒಪ್ಪಂದ ಅಗತ್ಯವಿರುವುದರಿಂದ ಅವರ ವಿಚ್ಛೇದನ ಅರ್ಜಿ ನಿರ್ವಹಣಾರ್ಹವಲ್ಲ ಎಂದು ಕೌಟುಂಬಿಕ ನ್ಯಾಯಾಲಯ ತೀರ್ಪು ನೀಡಿತು. ಷರಿಯತ್ (ಮುಸ್ಲಿಂ ವೈಯಕ್ತಿಕ ಕಾನೂನು) ಅಡಿಯಲ್ಲಿ, ಅಂತಹ ವಿವಾಹ ವಿಚ್ಛೇದನಕ್ಕೆ ಲಿಖಿತ ಒಪ್ಪಂದದ ಅಗತ್ಯವಿಲ್ಲ ಎಂದು ವಾದಿಸಿದ ದಂಪತಿ ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್) ಅರ್ಜಿ ಕಾಯ್ದೆ, 1937 ರ ಸೆಕ್ಷನ್ 2 ಅನ್ನು ಪರಿಶೀಲಿಸಿದ ಹೈಕೋರ್ಟ್‌ ಪತ್ನಿಯರು ಹೂಡುವ ಖುಲಾಗಿಂತ ಭಿನ್ನವಾಗಿ, ಇಬ್ಬರೂ ಸಂಗಾತಿಗಳು ಪರಸ್ಪರ ಬೇರ್ಪಡಲು ಒಪ್ಪಿಕೊಂಡರೆ ಅದು ಮುಬಾರತ್ ಎನಿಸಿಕೊಳ್ಳುತ್ತದೆ ಎಂದು ವಿವರಿಸಿತು.

ಮುಬಾರತ್ ಮೂಲಕ ಮದುವೆಯನ್ನು ವಿಸರ್ಜಿಸಲು ಲಿಖಿತ ಒಪ್ಪಂದ ಇರಬೇಕು ಅಥವಾ ಅಧಿಕೃತ ನೋಂದಣಿಯಾಗಿರಬೇಕು ಎಂದು ಕುರಾನ್ ಅಥವಾ ಮುಸ್ಲಿಂ ವೈಯಕ್ತಿಕ ಕಾನೂನು ಕಡ್ಡಾಯಗೊಳಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿತು.

ಆದ್ದರಿಂದ, ಕೌಟುಂಬಿಕ ನ್ಯಾಯಾಲಯದ ತೀರ್ಪು ರದ್ದುಗೊಳಿಸಿದ ಅದು, ಮೂರು ತಿಂಗಳೊಳಗೆ ಅರ್ಹತೆಯ ಆಧಾರದ ಮೇಲೆ ಪ್ರಕರಣದ ವಿಚಾರಣೆ ನಡೆಸುವಂತೆ ನಿರ್ದೇಶಿಸಿತು.