tirupati temple and laddus 
ಸುದ್ದಿಗಳು

ಕಾಂಗ್ರೆಸ್‌ಗೆ ತಿರುಪತಿ ಲಡ್ಡು ವಿವಾದ ತಳಕು: ವಿಡಿಯೋ ತೆಗೆದುಹಾಕಲು ನ್ಯೂಸ್ 18 ರಾಜಸ್ಥಾನಕ್ಕೆ ಎನ್‌ಬಿಡಿಎಸ್‌ಎ ಸೂಚನೆ

ಯಾವುದೇ ವ್ಯಕ್ತಿಯನ್ನು ಸಂದರ್ಶಿಸುವಾಗ ಸುದ್ದಿ ನಿರೂಪಕರು ಕಾರ್ಯಕ್ರಮ ನಡೆಸುವ ಸಂಬಂಧ ರೂಪಿಸಿರುವ ನಿರ್ದಿಷ್ಟ ಮಾರ್ಗಸೂಚಿಗಳ ಬಗ್ಗೆ ಗಮನ ಹರಿಸುವಂತೆ ಸುದ್ದಿ ವಾಹಿನಿಗೆ ಎನ್‌ಡಿಬಿಎಸ್‌ಎ ನಿರ್ದೇಶಿಸಿದೆ.

Bar & Bench

ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದಲ್ಲಿ ನೀಡಲಾಗುವ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಬಳಸಿದ್ದಕ್ಕೂ ಕಾಂಗ್ರೆಸ್‌ ಪಕ್ಷಕ್ಕೂ ಸಂಬಂಧವಿದೆ ಎಂಬ ಸುಳ್ಳು ಹೇಳಿಕೆ ಇರುವ ವಿಡಿಯೋ ತೆಗೆದುಹಾಕುವಂತೆ ಸುದ್ದಿ ವಾಹಿನಿ 'ನ್ಯೂಸ್‌ 18 ರಾಜಸ್ಥಾನʼಕ್ಕೆ ಸುದ್ದಿ ಪ್ರಸರಣ ಮತ್ತು ಡಿಜಿಟಲ್‌ ಗುಣಮಟ್ಟ ಪ್ರಾಧಿಕಾರ (ಎನ್‌ಬಿಡಿಎಸ್‌ಎ) ಈಚೆಗೆ ನಿರ್ದೇಶಿಸಿದೆ.

ವರದಿ ಮಾಡುವಾಗ ವಾಸ್ತವಾಂಶಗಳು ಪ್ರತ್ಯೇಕವಾಗಿರಬೇಕು. ತಮ್ಮದೇ ಆದ ಅಭಿಪ್ರಾಯ, ವಿಶ್ಲೇಷಣೆ ಹಾಗೂ ಹೇಳಿಕೆಗಳನ್ನು ಅದರೊಟ್ಟಿಗೆ ಬೆರೆಸಬಾರದು ಎಂಬ ನಿಟ್ಟಿನಲ್ಲಿ ವರದಿಗಾರಿಕೆಗೆಂದು ರೂಪಿಸಿರುವ ಮಾರ್ಗಸೂಚಿಗಳ ಬಗ್ಗೆ ಸುದ್ದಿ ಪ್ರಸಾರಕರು ಗಮನ ಹರಿಸುವಂತೆ ಎನ್‌ಬಿಡಿಎಸ್‌ಎ ತಾಕೀತು ಮಾಡಿದೆ.

ಯಾವುದೇ ವ್ಯಕ್ತಿಯನ್ನು ಸಂದರ್ಶಿಸುವಾಗ ಸುದ್ದಿ ನಿರೂಪಕರು ಕಾರ್ಯಕ್ರಮ ನಡೆಸುವ ಸಂಬಂಧ ರೂಪಿಸಿರುವ ನಿರ್ದಿಷ್ಟ ಮಾರ್ಗಸೂಚಿಗಳ ಬಗ್ಗೆ ಗಮನ ಹರಿಸುವಂತೆ ಸುದ್ದಿ ವಾಹಿನಿಗೆ ಎನ್‌ಬಿಡಿಎಸ್‌ಎ ಅಧ್ಯಕ್ಷ, ನ್ಯಾಯಮೂರ್ತಿ ಎ ಕೆ ಸಿಕ್ರಿ ಬುದ್ಧಿಮಾತು ಹೇಳಿದ್ದಾರೆ.

ವಿವಾದಾತ್ಮಕ ಕಾರ್ಯಕ್ರಮವನ್ನು ಸೆಪ್ಟೆಂಬರ್ 21, 2024ರಂದು ಪ್ರಸಾರ ಮಾಡಲಾಗಿತ್ತು. ತಿರುಪತಿ ಬಾಲಾಜಿ ದೇಗುಲದ ಪ್ರಸಾದ ಲಡ್ಡುವಿನಲ್ಲಿ  ಪ್ರಾಣಿಗಳ ಕೊಬ್ಬು ಸೇರಲು ಕಾಂಗ್ರೆಸ್ ಪಕ್ಷದ ಪಿತೂರಿ ಕಾರಣ ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿದ್ದನ್ನು ದೂರುದಾರ ಇಂದ್ರಜಿತ್ ಘೋರ್ಪಡೆ ಪ್ರಶ್ನಿಸಿದ್ದರು.

ಇದು ನಿಖರತೆ, ವಸ್ತುನಿಷ್ಠತೆ, ತಟಸ್ಥತೆ ಮತ್ತು ನ್ಯಾಯೋಚಿತತೆಯ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದ್ದ ಅವರು ಕೂಡಲೇ ಸುದ್ದಿ ವಾಹಿನಿ ವಿಡಿಯೋ ತೆಗೆದು ಹಾಕಿ ಸ್ಪಷ್ಟನೆ ನೀಡಬೇಕು ಎಂದು ಕೋರಿದ್ದರು.

ವಿಡಿಯೋ ತುಣುಕನ್ನು ಪರಿಶೀಲಿಸಿದ ಎನ್‌ಬಿಡಿಎಸ್‌ಎ ಯೂಟ್ಯೂಬ್‌ನಲ್ಲಿ ಇನ್ನೂ ಅದು ಲಭ್ಯವಿರುವುದನ್ನು ಗಮನಿಸಿತು.  ಈ ಹಿನ್ನೆಲೆಯಲ್ಲಿ ಆದೇಶದ ಪ್ರತಿ ಸ್ವೀಕರಿಸಿದ 7 ದಿನಗಳ ಒಳಗೆ ಯೂಟ್ಯೂಬ್‌ ಸೇರಿದಂತೆ ಎಲ್ಲಾ ವೇದಿಕೆಗಳಿಂದ ವಿಡಿಯೋ ತೆಗೆದು ಹಾಕುವಂತೆ ಆದೇಶಿಸಿತು.