cafe coffee day 
ಸುದ್ದಿಗಳು

ಕೆಫೆ ಕಾಫಿ ಡೇ ಮಾತೃ ಕಂಪನಿಯ ವಿರುದ್ಧದ ದಿವಾಳಿ ಪ್ರಕ್ರಿಯೆ ರದ್ದುಗೊಳಿಸಿದ ಎನ್‌ಸಿಎಲ್‌ಎಟಿ

ಆಗಸ್ಟ್ 2024ರಲ್ಲಿ, ಕಂಪನಿಯ ನಿರ್ದೇಶಕರಾದ ಮಾಳವಿಕಾ ಹೆಗ್ಡೆ ಅವರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಕಂಪನಿಯ ವಿರುದ್ಧ ಸಿಐಆರ್‌ಪಿ ಪ್ರಕ್ರಿಯೆ ಪ್ರಾರಂಭಿಸುವ ಎನ್‌ಸಿಎಲ್‌ಟಿ ಆದೇಶಕ್ಕೆ ಎನ್‌ಸಿಎಲ್‌ಎಟಿ ತಡೆ ನೀಡಿತ್ತು.

Bar & Bench

ಕರ್ನಾಟಕ ಮೂಲದ ಜಾಗತಿಕ ಕಾಫೀ ಉದ್ಯಮ ಕೆಫೆ ಕಾಫಿ ಡೇಯ ಮೂಲ ಕಂಪನಿಯಾದ ಕಾಫಿ ಡೇ ಎಂಟರ್‌ ಪ್ರೈಸರ್ಸ್‌ ಲಿಮಿಟೆಡ್ (ಸಿಡಿಇಎಲ್) ವಿರುದ್ಧ ದಿವಾಳಿ ಪ್ರಕ್ರಿಯೆ ಆರಂಭಿಸುವಂತೆ ಬೆಂಗಳೂರಿನ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ನೀಡಿದ್ದ ಆದೇಶವನ್ನು ಗುರುವಾರ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (ಎನ್‌ಸಿಎಲ್‌ಎಟಿ) ಚೆನ್ನೈ ಪೀಠ  ರದ್ದುಗೊಳಿಸಿದೆ  .

ನ್ಯಾಯಮಂಡಳಿಯ ನ್ಯಾಯಾಂಗ ಸದಸ್ಯರಾದ ನ್ಯಾ. ಶರದ್ ಕುಮಾರ್ ಶರ್ಮಾ ಮತ್ತು ತಾಂತ್ರಿಕ ಸದಸ್ಯ ಜತೀಂದ್ರನಾಥ್ ಸ್ವೈನ್ ಅವರಿದ್ದ ಸಮಿತಿ ಎನ್‌ಸಿಎಲ್‌ಟಿ ಆದೇಶ ರದ್ದುಗೊಳಿಸಿತು.

ಆಗಸ್ಟ್ 2024ರಲ್ಲಿ, ಕಂಪನಿಯ ನಿರ್ದೇಶಕರಾದ ಮಾಳವಿಕಾ ಹೆಗ್ಡೆ ಅವರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಕಂಪನಿಯ ವಿರುದ್ಧ ಸಿಐಆರ್ಪಿ ಪ್ರಕ್ರಿಯೆ ಪ್ರಾರಂಭಿಸುವ ಎನ್ಸಿಎಲ್ಟಿ ಆದೇಶಕ್ಕೆ ಎನ್ಸಿಎಲ್ಎಟಿ ತಡೆ ನೀಡಿತ್ತು. ದಿವಾಳಿ ಮತ್ತು ದಿವಾಳಿತನ ಸಂಹಿತೆಯ ಸೆಕ್ಷನ್ 7ರ ಅಡಿಯಲ್ಲಿ ಕಾರ್ಪೊರೇಟ್‌ ದಿವಾಳಿ ಪರಿಹಾರ ಪ್ರಕ್ರಿಯೆ (ಸಿಐಆರ್‌ಪಿ) ಹೂಡುವಂತೆ ಮನವಿ ಮಾಡಲು ಐಡಿಬಿಐಟಿಎಸ್ಎಲ್‌ಗೆ ಯಾವುದೇ ಅಧಿಕಾರವಿಲ್ಲ, ಏಕೆಂದರೆ ಅದು ಹಣಕಾಸಿನ ಸಾಲದಾತನಲ್ಲ ಎಂದು ಅವರು ವಾದಿಸಿದ್ದರು.

ಕಾಫಿ ಡೇ  ₹228ಕೋಟಿಗೂ ಹೆಚ್ಚು ಸುಸ್ತಿದಾರನಾಗಿದ್ದು ಇದರಿಂದಾಗಿ ಅದು ದಿವಾಳಿಯಾಗಿದೆ ಎಂದು ಆರೋಪಿಸಿ ಐಟಿಎಸ್ಎಲ್ ಸೆಪ್ಟೆಂಬರ್ 2023ರಲ್ಲಿ ಸಿಡಿಇಎಲ್ ವಿರುದ್ಧ ದಿವಾಳಿ ಅರ್ಜಿ ಸಲ್ಲಿಸಿತ್ತು.

ಆದರೆ ಐಡಿಬಿಐಟಿಎಸ್‌ಎಲ್‌ ಒಂದು ಡಿಬೆಂಚರ್‌ ಹೋಲ್ಡರ್‌ ಆಗಿದ್ದು ತನ್ನ ವಿರುದ್ಧ ಕಾರ್ಪೊರೇಟ್‌ ದಿವಾಳಿ ಗೊತ್ತುವಳಿ ಪ್ರಕ್ರಿಯೆ ಆರಂಭಿಸುವಂತೆ ಕೋರಿ ಅರ್ಜಿ ಸಲ್ಲಿಸಲು ಅದಕ್ಕೆ ಯಾವುದೇ ಅಧಿಕಾರ ಇಲ್ಲ ಎಂದು ನ್ಯಾಯಮಂಡಳಿ ಎದುರು ಸಿಡಿಇಎಲ್‌ ವಾದಿಸಿತ್ತು.

ಆದರೆ ಈ ವಾದವನ್ನು ಒಪ್ಪದ ಎನ್‌ಸಿಎಲ್‌ಟಿ ಐಬಿಸಿ ಸೆಕ್ಷನ್ 5(8)(c) ಅಡಿಯಲ್ಲಿನ ವ್ಯಾಖ್ಯಾನದ ಪ್ರಕಾರ ಡಿಬೆಂಚರ್‌ಗೆ ಅನುಸಾರವಾಗಿ ಇರುವ ಸಾಲವೂ ಸಹ 'ಹಣಕಾಸಿನ ಸಾಲ' ಎಂದಿತು.  ಆದ್ದರಿಂದ ಡಿಬೆಂಚರ್ ಹೊಂದಿರುವವರು ಹಣಕಾಸು ಸಾಲಗಾರರಾಗಿಲ್ಲ ಎಂಬ ಸಿಡಿಇಎಲ್‌ ಆರೋಪ ಸಮರ್ಥನೀಯವಲ್ಲ ಎಂದು ನುಡಿದಿತ್ತು. ಈ ಆದೇಶಕ್ಕೆ ಕಳೆದ ವರ್ಷ ಆಗಸ್ಟ್‌ನಲ್ಲಿ, ಎನ್‌ಸಿಎಲ್‌ಎಟಿ ತಡೆ ನೀಡಿತ್ತು.

2023ರ ಆರಂಭದಲ್ಲಿ, ಕೆಫೆ ಕಾಫಿ ಡೇಯ (ಸಿಸಿಡಿ) ಪೋಷಕ ಕಂಪನಿಯಾದ ಕಾಫಿ ಡೇ ಗ್ಲೋಬಲ್ ವಿರುದ್ಧ ಇಂಡಸ್ಇಂಡ್ ಬ್ಯಾಂಕ್ ಸಲ್ಲಿಸಿದ್ದ ದಿವಾಳಿತನ ಅರ್ಜಿಯನ್ನು ಎನ್‌ಸಿಎಲ್‌ಟಿ ವಿಚಾರಣೆಗೆ ಅಂಗೀಕರಿಸಿತ್ತು. ತರುವಾಯ, ಪಕ್ಷಕಾರರು ಇತ್ಯರ್ಥಕ್ಕೆ ಬಂದ ಹಿನ್ನೆಲೆಯಲ್ಲಿ ಆದೇಶ ರದ್ದುಗೊಳಿಸಲಾಗಿತ್ತು.