NCLT Bengaluru and Wipro 
ಸುದ್ದಿಗಳು

ವಿಪ್ರೋ ವಿರುದ್ಧ ದಿವಾಳಿ ಪ್ರಕ್ರಿಯೆ ಕೋರಿಕೆ: ಅಮೆರಿಕ ಮೂಲದ ಕಂಪೆನಿಯ ಅರ್ಜಿ ತಿರಸ್ಕರಿಸಿದ ಬೆಂಗಳೂರು ಎನ್‌ಸಿಎಲ್‌ಟಿ

ವಿಪ್ರೋ ₹ 2.8 ಕೋಟಿ ಮೊತ್ತ ಬಾಕಿ ಪಾವತಿಸದೆ ಇರುವುದರಿಂದ ಕ್ಯಾಲಿಫೋರ್ನಿಯಾ ಮೂಲದ ಕಂಪನಿಯೊಂದು ಕೆಲ ತಿಂಗಳುಗಳ ಹಿಂದೆ ದಿವಾಳಿ ಮನವಿ ಸಲ್ಲಿಸಿತ್ತು.

Bar & Bench

ಟೆಕ್ ದೈತ್ಯ ವಿಪ್ರೋ ವಿರುದ್ಧ ಕ್ಯಾಲಿಫೋರ್ನಿಯಾ ಮೂಲದ ಕ್ಲೌಡ್ ಸೇವಾ ಪೂರೈಕೆದಾರ ಇವಾಲುವಾ ಕಂಪೆನಿ ಸಲ್ಲಿಸಿದ್ದ ದಿವಾಳಿ ಪ್ರಕ್ರಿಯೆ ಅರ್ಜಿಯನ್ನು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ಅಕ್ಟೋಬರ್ 22 ರಂದು  ವಜಾಗೊಳಿಸಿದೆ.

ನ್ಯಾಯಾಂಗ ಸದಸ್ಯ ಕೆ ಬಿಸ್ವಾಲ್ ಮತ್ತು ತಾಂತ್ರಿಕ ಸದಸ್ಯ ಮನೋಜ್ ಕುಮಾರ್ ದುಬೆ ಅವರಿದ್ದ ಪೀಠ ಮನವಿ ವಜಾಗೊಳಿಸಿತು.

ಪಾಲುದಾರ ಕಾನೂನು ಸಂಸ್ಥೆಯಾದ ಲೋಮೇಶ್ ಕಿರಣ್ ನಿಡುಮದುರಿ ಮತ್ತು ಹಿರಿಯ ಅಸೋಸಿಯೇಟ್‌ಗಳಾದ ಪ್ರಶಸ್ತಿ ಭಟ್ ಮತ್ತು ಅಭಿಜ್ಞಾ ಎಸ್ ಅವರನ್ನೊಳಗೊಂಡ ಸಿರಿಲ್ ಅಮರಚಂದ್ ಮಂಗಲದಾಸ್ ಕಾನೂನು ಸಂಸ್ಥೆಯ ತಂಡ ವಿಪ್ರೊವನ್ನು ಪ್ರತಿನಿಧಿಸಿತ್ತು. ಇವಾಲುವಾ ಪರ ಕೊಚ್ಚರ್ ಅಂಡ್‌ ಕಂಪೆನಿಯ ಪಾಲುದಾರರಾದ ವಕೀಲೆ ಮೀನಾ ವೇಣುಗೋಪಾಲ್ ವಾದ ಮಂಡಿಸಿದರು.

ವಿಪ್ರೋ ₹ 2.8 ಕೋಟಿ ($3,00,000) ಮೊತ್ತ ಬಾಕಿ ಪಾವತಿಸದೆ ಇರುವುದರಿಂದ ಇವಾಲುವಾ 2016ರ ದಿವಾಳಿ ಮತ್ತು ದಿವಾಳಿತನ ಸಂಹಿತೆಯ (ಐಬಿಸಿ) ಸೆಕ್ಷನ್ 9 ರ ಅಡಿಯಲ್ಲಿ ಕೆಲ ತಿಂಗಳುಗಳ ಹಿಂದೆ ದಿವಾಳಿತನದ ಮನವಿ ಸಲ್ಲಿಸಿತ್ತು.

ಜುಲೈ 28, 2021ರ ಸೇವಾ ಒಪ್ಪಂದದ ಅಡಿಯಲ್ಲಿ, ಕಂಪನಿಯು ವಿಪ್ರೊಗೆ ಮೂರು ಇನ್‌ವಾಯ್ಸ್‌ಗಳನ್ನು ನೀಡಿದೆ, ಪ್ರತಿಯೊಂದೂ $ 100,000 ಮೀರಿದ್ದಾಗಿತ್ತು. ಆದರೆ ಐಬಿಸಿ ನಿಯಮಾವಳಿಯಂತೆ ಅಗತ್ಯವಿರುವ ಏಳು ದಿನಗಳ ಕಾಲಮಿತಿಯೊಳಗೆ ವಿಪ್ರೋ ತನ್ನ ಡಿಮಾಂಡ್‌ ನೋಟಿಸ್‌ಗೆ ಪ್ರತಿಕ್ರಿಯಿಸಲಿಲ್ಲ ಎಂದು ಇವಾಲುವಾ ವಾದಿಸಿತ್ತು.

ಒದಗಿಸಿದ ಸೇವೆಗಳು ಪರಿಕಲ್ಪನೆಯ ಪುರಾವೆಯ (ಪ್ರೂಫ್‌ ಆಫ್‌ ಕಾನ್ಸೆಪ್ಟ್‌) ಪ್ರಾಯೋಗಿಕ ಹಂತವನ್ನು ಮೀರಿ ಹೋಗದ ಕಾರಣ ಹಣ ಯಾವುದೇ ಇನ್‌ವಾಯ್ಸ್‌ಗಳಿಗೆ ಪಾವತಿಸಬೇಕಾದ ಹೊಣೆ ತನ್ನ ಮೇಲಿಲ್ಲ ಎಂದು ವಿಪ್ರೋ ವಾದಿಸಿತ್ತು. ಈ ಹಂತವು ಸ್ವೀಕೃತಿ ಪಡೆಯುವವರಿಗೆ ಸೇವೆ, ಉತ್ಪನ್ನವನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳುವ ಮೊದಲು ಸೇವೆಯನ್ನು ಮೌಲ್ಯಮಾಪನ ಮಾಡಲು ಪರೀಕ್ಷಾ ಅವಧಿಯಾಗಿ ಕಾರ್ಯನಿರ್ವಹಿಸುತ್ತದೆ.

ಪರಿಕಲ್ಪನೆಯ ಪುರಾವೆಗಾಗಿ ಕಂಪನಿಯು ಈಗಾಗಲೇ ಪಾವತಿಗಳನ್ನು ಮಾಡಿದೆ ಮತ್ತು ಈ ಹಂತವನ್ನು ಮೀರಿ ಯಾವುದೇ ಸೇವೆಗಳನ್ನು ಸಲ್ಲಿಸದ ಕಾರಣ, ಇನ್‌ವಾಯ್ಸ್‌ಗಳಿಗೆ ಮನ್ನಣೆ ನೀಡುವ ಅಗತ್ಯವಿಲ್ಲ. ಹೀಗಾಗಿ ಇವಾಲುವಾ ಆಪರೇಷನಲ್‌ ಕ್ರೆಡಿಟರ್‌ ಆಗುವ ಅರ್ಹತೆ ಹೊಂದಿಲ್ಲ ಎಂದು ವಿಪ್ರೊ ವಾದಿಸಿದೆ.

ವಿಪ್ರೊ ವಾದ ಪುರಸ್ಕರಿಸಿದ ಎನ್‌ಸಿಎಲ್‌ಟಿ ಮನವಿ ವಜಾಗೊಳಿಸಿತು.