Arjun Ram Meghwal  facebook
ಸುದ್ದಿಗಳು

ನೂತನ ಅಪರಾಧಿಕ ಕಾನೂನುಗಳು ನ್ಯಾಯ ಒದಗಿಸುತ್ತವೆಯೇ ವಿನಾ ದಂಡನೆಯನ್ನಲ್ಲ: ರಾಜ್ಯ ಸಚಿವ ಮೇಘವಾಲ್

Bar & Bench

ಶಿಕ್ಷೆಯ ಮೇಲೆ ಕೇಂದ್ರೀಕೃತವಾಗಿದ್ದ ವಸಾಹತುಶಾಹಿ ಯುಗದ ಕಾನೂನುಗಳಿಗಿಂತ ಭಿನ್ನವಾಗಿ ಜುಲೈ 1ರಿಂದ ಜಾರಿಗೆ ಬಂದಿರುವ ಮೂರು ನೂತನ ಕ್ರಿಮಿನಲ್ ಕಾನೂನುಗಳು ನ್ಯಾಯದಾನಕ್ಕೆ ಒತ್ತು ನೀಡುತ್ತವೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಹೇಳಿದ್ದಾರೆ.

ಕಾನೂನು ಮತ್ತು ನ್ಯಾಯ ಸಚಿವಾಲಯ ನಡೆದ 'ಅಪರಾಧಿಕ ನ್ಯಾಯ ವ್ಯವಸ್ಥೆಯ ಜಾರಿಯಲ್ಲಿ ಭಾರತದ ಪ್ರಗತಿಶೀಲ ಹಾದಿ' ಕುರಿತು ಜೂನ್ 30 ರಂದು ಆಯೋಜಿಸಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು.

ಭಾರತೀಯ ದಂಡ ಸಂಹಿತೆ (IPC), ಅಪರಾಧ ಪ್ರಕ್ರಿಯಾ ಸಂಹಿತೆ (CrPC) ಮತ್ತು ಭಾರತೀಯ ಸಾಕ್ಷ್ಯ ಕಾಯಿದೆ ಬದಲಿಗೆ ಈಗ ಜಾರಿಗೆ ಬಂದಿರುವ ಮೂರು ಹೊಸ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಕುರಿತು ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಸಾಮಾನ್ಯ ನಾಗರಿಕರು,  ಪಕ್ಷಾತೀತವಾಗಿ ಸಂಸದರು ಮತ್ತು ಶಾಸಕರು ಸೇರಿದಂತೆ ಅನೇಕ ಭಾಗೀದಾರರೊಂದಿಗೆ  ವ್ಯಾಪಕ ಸಮಾಲೋಚನೆ ನಡೆಸಿ ಹಾಗೂ ಭಾರತೀಯ ಕಾನೂನು ಆಯೋಗದ ಶಿಫಾರಸುಗಳನ್ನು ಗಮನಿಸಿ ಈ ಕಾನೂನುಗಳನ್ನು ರೂಪಿಸಲಾಗಿದೆ ಎಂದರು.

ಬಾಂಬೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ  ದೇವೇಂದ್ರ ಕುಮಾರ್ ಉಪಾಧ್ಯಾಯ,  ಎಂದು ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮನೀಂದ್ರ ಮೋಹನ್ ಶ್ರೀವಾಸ್ತವ, ಪಂಜಾಬ್ ಮತ್ತು ಹರಿಯಾಣದ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ, ಗುರ್ಮೀತ್ ಸಿಂಗ್ ಸಂಧವಾಲಿಯಾ, ಬಾಂಬೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮತ್ತು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ (ಐಟಿಎಟಿ) ಅಧ್ಯಕ್ಷ ಚಂದ್ರಕಾಂತ್ ವಸಂತ ಭದಂಗ್,  ಕಾನೂನು ಸಚಿವಾಲಯದ ಕಾನೂನು ವ್ಯವಹಾರ ಇಲಾಖೆಯ ಕಾರ್ಯದರ್ಶಿ ಡಾ. ರಾಜೀವ್ ಮಣಿ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಗಳಾದ ರೇವತಿ ಮೋಹಿತ್ ಡೇರೆ, ಎಎಸ್ ಗಡ್ಕರಿ ಮತ್ತು ಭಾರತಿ ಡಾಂಗ್ರೆ ಅವರು ಮೂರು ಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದರು.

ಹೊಸ ಕಾನೂನುಗಳು ಸ್ಪಷ್ಟ ಮಾರ್ಗಸೂಚಿಗಳನ್ನು ಹೊಂದಿದ್ದು ಕಾನೂನು ಜಾರಿಯಲ್ಲಿ ಪಾರದರ್ಶಕತೆಯನ್ನು ಸುಧಾರಿಸುವ ಹೊಣೆಗಾರಿಕೆಯ ಕ್ರಮಗಳನ್ನು ಹೆಚ್ಚಿಸಿವೆ ಎಂದು ಮಹಾರಾಷ್ಟ್ರ ರಾಜ್ಯಪಾಲ ರಮೇಶ್ ಬೈಸ್ ತಮ್ಮ ಸಮಾರೋಪ ಭಾಷಣದಲ್ಲಿ ತಿಳಿಸಿದರು.