NHAI 
ಸುದ್ದಿಗಳು

ತೆರಿಗೆ ಸಂಗ್ರಹಣೆ ಸುತ್ತೋಲೆ ತಡೆ ಹಿಡಿದ ಹೆದ್ದಾರಿ ಪ್ರಾಧಿಕಾರ: ನಿರ್ವಾಹಕರ ವಾದ ಆಲಿಸುವುದಾಗಿ ನ್ಯಾಯಾಲಯಕ್ಕೆ ಮಾಹಿತಿ

ತೆರಿಗೆ ಸಂಗ್ರಹ ಕುರಿತಾದ ನೂತನ ಸುತ್ತೋಲೆಯಲ್ಲಿ ಎನ್ಎಚ್ಎಐ ಮನಸೋಇಚ್ಛೆಯಾಗಿ ಬದಲಾವಣೆ ಮಾಡಿರುವುದನ್ನು ಹೆದ್ದಾರಿ ನಿರ್ವಾಹಕರು ಪ್ರಶ್ನಿಸಿದ್ದರು.

Bar & Bench

ಹೆದ್ದಾರಿ ನಿರ್ವಾಹಕರ ವಾದ ಆಲಿಸಿ ನಿರ್ಣಯಿಸುವವರೆಗೆ ಅವರು ವಿರೋಧಿಸುತ್ತಿರುವ ಟೋಲ್‌ ಸಂಗ್ರಹ ಕುರಿತಾದ ಸುತ್ತೋಲೆಯನ್ನು ಸ್ಥಗಿತಗೊಳಿಸುವುದಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಶುಕ್ರವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ [ಹೆದ್ದಾರಿ ನಿರ್ವಾಹಕರ ಸಂಘ ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇನ್ನಿತರರ ನಡುವಣ ಪ್ರಕರಣ].

ನ್ಯಾಯಮೂರ್ತಿ ಸಚಿನ್ ದತ್ತ ಅವರೆದುರು ಎನ್‌ಎಚ್‌ಎಐ ಸ್ಥಾಯಿ ಸಲಹೆಗಾರ ಸಂತೋಷ್ ಕುಮಾರ್ ಈ ಹೇಳಿಕೆ ನೀಡಿದ್ದಾರೆ.

ಹೇಳಿಕೆಯನ್ನು ದಾಖಲಿಸಿಕೊಂಡ ನಂತರ, ಸೆಪ್ಟೆಂಬರ್ 13ರಂದು ಎನ್‌ಎಚ್‌ಎಐ ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ಹೆದ್ದಾರಿ ನಿರ್ವಾಹಕರ ಸಂಘ (ಎಚ್‌ಒಎಐ) ಮತ್ತು ರೋಡ್‌ಸ್ಟಾರ್ ಇನ್ಫ್ರಾ ಇನ್ವೆಸ್ಟ್‌ಮೆಂಟ್ ಟ್ರಸ್ಟ್ (ಆರ್‌ಐಐಟಿ) ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಲೇವಾರಿ ಮಾಡಿತು.

ವಿವಿಧ ಮೂಲ ವರ್ಷಗಳ ನಡುವಿನ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯೂಪಿಐ) ದತ್ತಾಂಶವನ್ನು ಪರಿವರ್ತಿಸಲು ಬಳಸುವ 'ಲಿಂಕಿಂಗ್ ಫ್ಯಾಕ್ಟರ್' ಅನ್ನು ಈ ಸುತ್ತೋಲೆ ಪರಿಷ್ಕರಿಸಿದೆ.

ಸೆಪ್ಟೆಂಬರ್ 13 ರ ವಿವಾದಾತ್ಮಕ ಸುತ್ತೋಲೆ ಅಡಿಯಲ್ಲಿ ಗುತ್ತಿಗೆದಾರರ ಮೇಲೆ ಬಲವಂತದಕ್ರಮ ಕೈಗೊಳ್ಳದಂತೆ ನ್ಯಾಯಾಲಯ ಕಳೆದ ವಿಚಾರಣೆ ವೇಳೆ ಎನ್‌ಎಚ್‌ಎಐಗೆ ಸೂಚಿಸಿತ್ತು.

ಆಗ ಹೆದ್ದಾರಿ ನಿರ್ವಾಹಕರ ಸಂಘದ ಪರ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಸುಬ್ರಮಣಿಯಂ, ಲಿಂಕ್ ಮಾಡುವ ಅಂಶವನ್ನು ನಿರಂಕುಶ ರೀತಿಯಲ್ಲಿ ಎನ್‌ಎಚ್‌ಎಐ ತಿರಸ್ಕರಿಸಿದೆ ಎಂದು ವಾದಿಸಿದರು.

ಬದಲಾವಣೆ ಜಾರಿಗೆ ತರುವ ಮುನ್ನ ಎನ್‌ಎಚ್‌ಎಐ ಗುತ್ತಿಗೆ ನಿರ್ವಾಹಕರೀಗೆ ಯಾವುದೇ ಸೂಚನೆ ನೀಡಿರಲಿಲ್ಲ ಎಂದು ರೋಡ್‌ಸ್ಟಾರ್ ಇನ್ಫ್ರಾ ಇನ್ವೆಸ್ಟ್‌ಮೆಂಟ್ ಟ್ರಸ್ಟ್ ಪರವಾಗಿ ಹಾಜರಾದ ಹಿರಿಯ ವಕೀಲ ರಾಜೀವ್ ನಾಯರ್ ಹೇಳಿದರು.

ಲಿಂಕಿಂಗ್‌ ಫ್ಯಾಕ್ಟರ್‌ ಎಂಬುದು ಡಬ್ಲ್ಯೂಪಿಐ (ಸಗಟು ದರ ಸೂಚಿ) ಯಲ್ಲಿನ ಸಮಯ ಸರಣಿಯ ದತ್ತಾಂಶದಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲು ಬಳಸಲಾಗುವ ಗುಣಕವಾಗಿದೆ. ಮೂಲ ವರ್ಷ ಬದಲಾದಾಗ, ಸಂಖ್ಯೆಗಳು ಹೋಲಿಕೆಯಾಗಿ ಉಳಿಯುವಂತೆ ಖಚಿತಪಡಿಸಿಕೊಳ್ಳಲು ಲಿಂಕ್ ಮಾಡುವ ಅಂಶವನ್ನು ಪ್ರಸ್ತುತ ಸರಣಿಯ ಡಬ್ಲ್ಯೂಪಿಐ ಅನ್ನು ಹಿಂದಿನ ಸರಣಿಯ ಡಬ್ಲ್ಯೂಪಿಐ ಗೆ ಲಿಂಕ್ ಮಾಡಲು ಬಳಸಲಾಗುತ್ತದೆ.

ಎನ್‌ಎಚ್‌ಎಐ ಯಾವುದೇ ಆಧಾರವಿಲ್ಲದೆ, 2011-12 ರ ಮೂಲ ವರ್ಷದಿಂದ 2004-05 ರ ಹಿಂದಿನ ಮೂಲ ವರ್ಷಕ್ಕೆ ಎಲ್ಲಾ ಸರಕುಗಳ ಡಬ್ಲ್ಯೂಪಿಐ ಅನ್ನು ಪರಿವರ್ತಿಸಲು ಬಳಸಲಾಗುತ್ತಿದ್ದ 1.641 ರ ಲಿಂಕ್ ಅಂಶದ ಬಳಕೆಯಿಂದ (ಕಳೆದ 7 ವರ್ಷಗಳಿಂದ ಸ್ಥಿರವಾಗಿ ಬಳಸಲಾಗುತ್ತಿದೆ) ಹಿಂದೆ ಸರಿದಿದೆ ಎಂದು ನಿರ್ವಾಹಕರು ವಾದಿಸಿದ್ದಾರೆ.

ಈ ಬದಲಾವಣೆಯು 2018ರ ಹಿಂದಿನ ಸುತ್ತೋಲೆಯಲ್ಲಿ ಅಳವಡಿಸಿಕೊಂಡ ವಿಧಾನದಿಂದ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.