Allahabad High Court, Nithari Killings  
ಸುದ್ದಿಗಳು

ನಿಠಾರಿ ಹತ್ಯೆ ಪ್ರಕರಣ: ಆರೋಪಿಗಳ ಖುಲಾಸೆ ಪ್ರಶ್ನಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಮರಣದಂಡನೆಯನ್ನು ಅಕ್ಟೋಬರ್ 2023ರಲ್ಲಿ ರದ್ದುಗೊಳಿಸಿದ ಅಲಹಾಬಾದ್ ಹೈಕೋರ್ಟ್ ನಿಠಾರಿ ಹತ್ಯಾಕಾಂಡಕ್ಕೆ ಸಂಬಂಧಿಸಿದ ವಿವಿಧ ಪ್ರಕರಣಗಳಲ್ಲಿ ಪಂಧೇರ್ ಮತ್ತು ಕೋಲಿಯನ್ನು ಖುಲಾಸೆಗೊಳಿಸಿತ್ತು.

Bar & Bench

ರಾಷ್ಟ್ರ ರಾಜಧಾನಿ ದೆಹಲಿಗೆ ಹೊಂದಿಕೊಂಡಂತಿರುವ ನೊಯಿಡಾದ ನಿಠಾರಿ ಗ್ರಾಮದಲ್ಲಿ 2005-2006ರಲ್ಲಿ ನಡೆದಿದ್ದ ಮಕ್ಕಳ ಸರಣಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳ ಇಬ್ಬರು ಆರೋಪಿಗಳಾದ ಮೊನಿಂದರ್‌ ಸಿಂಗ್ ಪಂಧೇರ್ ಮತ್ತು ಸುರೇಂದ್ರ ಕೋಲಿ ಅವರನ್ನು ಅಲಾಹಾಬಾದ್‌ ಹೈಕೋರ್ಟ್‌ ಖುಲಾಸೆಗೊಳಿಸಿದ್ದನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ ಈ ಹಿಂದೆ ವಿಚಾರಣಾ ನ್ಯಾಯಾಲಯ ಇಬ್ಬರಿಗೂ ಮರಣದಂಡನೆ ವಿಧಿಸಿತ್ತು.

ಅಕ್ಟೋಬರ್ 2023ರಲ್ಲಿ ಸುರೀಂದರ್ ಕೋಲಿಯನ್ನು 12 ಪ್ರಕರಣಗಳಲ್ಲಿ ಮತ್ತು ಮೋನಿಂದರ್ ಸಿಂಗ್ ಪಂಧೇರ್ ಅವರನ್ನು 2 ಪ್ರಕರಣಗಳಲ್ಲಿ ಖುಲಾಸೆಗೊಳಿಸಿ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಿಬಿಐ ಮತ್ತು ಸಂತ್ರಸ್ತರ ಕುಟುಂಬಗಳು ಸಲ್ಲಿಸಿದ್ದ ಒಟ್ಟು 14 ಮೇಲ್ಮನವಿಗಳನ್ನು ಸಿಜೆಐ ಬಿ ಆರ್‌ ಗವಾಯಿ, ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಹಾಗೂ ಕೆ ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠ ವಜಾಗೊಳಿಸಿತು.

ಹೈಕೋರ್ಟ್‌ತೀರ್ಪಿನಲ್ಲಿ ಯಾವುದೇ ಲೋಪ ಕಂಡುಬಂದಿಲ್ಲ. ಆರೋಪ ಸಾಬೀತುಪಡಿಸುವಂತಹ ಸ್ವೀಕಾರಾರ್ಹ ಮತ್ತು ವಿಶ್ವಾಸಾರ್ಹ ಪುರಾವೆಗಳನ್ನು ಒದಗಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಪೀಠ ಹೇಳಿತು.

ತನಿಖಾ ಸಂಸ್ಥೆ ನಡೆಸಿದ ತನಿಖೆಯಲ್ಲಿ ಲೋಪ ಇರುವುದನ್ನು, ಅದರಲ್ಲಿಯೂ ಸಾಕ್ಷ್ಯ ಕಾಯಿದೆಯ ಸೆಕ್ಷನ್ 27ಕ್ಕೆ ಸಂಬಂಧಿಸಿದಂತೆ, ನ್ಯೂನತೆಗಳು ಇರುವುದನ್ನು ಸುಪ್ರೀಂ ಕೋರ್ಟ್ ಎತ್ತಿ ತೋರಿಸಿದೆ.

ನಿಠಾರಿ ಹತ್ಯಾಕಾಂಡ 2005- 2006ರಲ್ಲಿ ನಡೆದಿತ್ತು. ಪುಟ್ಟ ಮಕ್ಕಳು ಸೇರಿದಂತೆ ಹೆಣ್ಣುಮಕ್ಕಳನ್ನು ಮನೆಗೆ ಕರೆತಂದು ಬರ್ಬರವಾಗಿ ಹತ್ಯೆ ಮಾಡಿದ ಆರೋಪ ಮೊನಿಂದರ್‌ ಸಿಂಗ್‌ ಮತ್ತು ಸುರೇಂದ್ರ ಕೋಲಿ ಮೇಲಿತ್ತು. ಡಿಸೆಂಬರ್ 2006ರಲ್ಲಿ ನೋಯ್ಡಾದ ನಿಠಾರಿ ಗ್ರಾಮದ ಮೊನಿಂದರ್‌ ಸಿಂಗ್‌ ಪಂಧೇರ್‌ ಮನೆ ಸಮೀಪ ಇದ್ದ ಚರಂಡಿಯಲ್ಲಿ ಅಸ್ಥಿಪಂಜರಗಳು ಪತ್ತೆಯಾಗಿದ್ದವು.

ಕೋಲಿ ಪಂಧೇರ್‌ನ ಮನೆ ಸಹಾಯಕನಾಗಿದ್ದ. ಕೊಲೆ, ಅಪಹರಣ, ಅತ್ಯಾಚಾರ ಹಾಗೂ ಸಾಕ್ಷ್ಯ ನಾಶ ಸೇರಿದಂತೆ ವಿವಿಧ ಆರೋಪಗಳನ್ನು ಕೋಲಿ ವಿರುದ್ಧ ಮಾಡಲಾಗಿತ್ತು. ಪಂಧೇರ್‌ ಮಕ್ಕಳ ಅಕ್ರಮ ಕಳ್ಳಸಾಗಣಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದ. ಕಡೆಗೆ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಹಲವು ಪ್ರಕರಣಗಳನ್ನು ದಾಖಲಿಸಿತ್ತು.

ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಮರಣದಂಡನೆಯನ್ನು ಅಕ್ಟೋಬರ್ 2023ರಲ್ಲಿ ರದ್ದುಗೊಳಿಸಿದ ಅಲಹಾಬಾದ್ ಹೈಕೋರ್ಟ್ ನಿಠಾರಿ ಹತ್ಯಾಕಾಂಡಕ್ಕೆ ಸಂಬಂಧಿಸಿದ ವಿವಿಧ ಪ್ರಕರಣಗಳಲ್ಲಿ ಪಂಧೇರ್ ಮತ್ತು ಕೋಲಿಯನ್ನು ಖುಲಾಸೆಗೊಳಿಸಿತ್ತು. ಹೀಗಾಗಿ ಸಿಬಿಐ ಮತ್ತು ಸಂತ್ರಸ್ತರ ಕುಟುಂಬಗಳು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದವು.