ನಿಠಾರಿ ಹತ್ಯಾಕಾಂಡ: ಮೊನೀಂದರ್ ಸಿಂಗ್ ಪಂಧೇರ್, ಸುರೇಂದ್ರ ಕೋಲಿ ಖುಲಾಸೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ

ನೋಯ್ಡಾದ ನಿಠಾರಿ ಗ್ರಾಮದ ಮನೆಯೊಂದರ ಬಳಿಯ ಚರಂಡಿಯಲ್ಲಿ 2006ರ ಡಿಸೆಂಬರ್‌ನಲ್ಲಿ ಹಲವಾರು ಅಸ್ಥಿಪಂಜರಗಳು ಪತ್ತೆಯಾಗುವ ಮೂಲಕ ಕುಖ್ಯಾತ ಹತ್ಯಾಕಾಂಡ ಸಾರ್ವಜನಿಕರ ಗಮನಕ್ಕೆ ಬಂದಿತ್ತು.
Supreme Court
Supreme Court
Published on

ರಾಷ್ಟ್ರ ರಾಜಧಾನಿ ದೆಹಲಿಗೆ ಹೊಂದಿಕೊಂಡಂತಿರುವ ನೋಯ್ಡಾದ ನಿಠಾರಿ ಗ್ರಾಮದಲ್ಲಿ 2005-2006ರಲ್ಲಿ ನಡೆದಿದ್ದ ಮಕ್ಕಳ ಸರಣಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳ ಇಬ್ಬರು ಆರೋಪಿಗಳಾದ ಮೊನೀಂದರ್ ಸಿಂಗ್ ಪಂಧೇರ್ ಮತ್ತು ಸುರೇಂದ್ರ ಕೋಲಿ ಅವರನ್ನು ಅಲಾಹಾಬಾದ್‌ ಹೈಕೋರ್ಟ್‌ ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಶುಕ್ರವಾರ ಉತ್ತರ ಪ್ರದೇಶ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

ಪೀಠವು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹೈಕೋರ್ಟ್‌ನಿಂದ ಖುಲಾಸೆಗೊಳ್ಳುವ ಮುನ್ನ ಹಲವು ಹುಡುಗಿಯರ ಹತ್ಯೆಗೆ ಸಂಬಂಧಿಸಿದಂತೆ ಮರಣದಂಡನೆಗೆ ಗುರಿಯಾಗಿದ್ದ ಆರೋಪಿಗಳಿಗೆ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಸತೀಶ್ ಚಂದ್ರ ಶರ್ಮಾ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ನೋಟಿಸ್‌ ನೀಡಿತು. ಸಂತ್ರಸ್ತ ಬಾಲಕಿಯ ತಂದೆ ಪಪ್ಪು ಲಾಲ್ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಈ ನೋಟಿಸ್‌ ನೀಡಲಾಗಿದೆ.

ನಿಠಾರಿ ಹತ್ಯೆಗೆ ಸಂಬಂಧಿಸಿದ ಕೆಲ ಪ್ರಕರಣಗಳಲ್ಲಿ  ಅಲಾಹಾಬಾದ್‌ ಹೈಕೋರ್ಟ್‌ ಪಂಧೇರ್ ಮತ್ತು ಆತನ ಮನೆಯ ಸಹಾಯಕ ಸುರೇಂದ್ರ ಕೋಲಿಯನ್ನು ಖುಲಾಸೆಗೊಳಿಸಿತ್ತು. ವಿಚಾರಣಾ ನ್ಯಾಯಾಲಯ ಈ ಇಬ್ಬರಿಗೆ ವಿಧಿಸಿದ್ದ ಮರಣದಂಡನೆಯನ್ನು ರದ್ದುಪಡಿಸಲಾಗಿತ್ತು. ಕೋಲಿಯನ್ನು 12 ಪ್ರಕರಣಗಳಲ್ಲಿ ಮತ್ತು 2 ಪ್ರಕರಣಗಳಲ್ಲಿ ಪಂಧೇರ್‌ನನ್ನು ಖುಲಾಸೆಗೊಳಿಸಲಾಗಿತ್ತು.

Also Read
ನಿಠಾರಿ ಹತ್ಯೆ: ಗಲ್ಲು ಶಿಕ್ಷೆಗೊಳಗಾಗಿದ್ದ ಆರೋಪಿಗಳನ್ನು ಕೆಲ ಪ್ರಕರಣಗಳಲ್ಲಿ ಖುಲಾಸೆಗೊಳಿಸಿದ ಅಲಾಹಾಬಾದ್ ಹೈಕೋರ್ಟ್

ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಪ್ರಸ್ತುತ ಅರ್ಜಿ ಸಲ್ಲಿಸಲಾಗಿತ್ತು. ಹೈಕೋರ್ಟ್‌ ವೈದ್ಯಕೀಯ ಪುರಾವೆ ಮತ್ತು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ದಾಖಲಿಸಿದ್ದ ತಪ್ಪೊಪ್ಪಿಗೆಯನ್ನು ತಪ್ಪಾಗಿ ತಿರಸ್ಕರಿಸಿದೆ ಎಂದು ವಾದಿಸಲಾಗಿತ್ತು.

ನಿಠಾರಿ ಕೊಲೆ ಪ್ರಕರಣಗಳು 2005- 2006ರಲ್ಲಿ ನಡೆದಿದ್ದವು. ಪುಟ್ಟ ಮಕ್ಕಳು ಸೇರಿದಂತೆ ಹೆಣ್ಣುಮಕ್ಕಳನ್ನು ಮನೆಗೆ ಕರೆತಂದು ಬರ್ಬರವಾಗಿ ಹತ್ಯೆ ಮಾಡಿದ ಆರೋಪ ಇವರಿಬ್ಬರ ಮೇಲಿತ್ತು. ಡಿಸೆಂಬರ್ 2006ರಲ್ಲಿ ನೋಯ್ಡಾದ ನಿಠಾರಿ ಗ್ರಾಮದ ಮೋನಿಂದರ್‌ ಸಿಂಗ್‌ ಪಂಧೇರ್‌ ಮನೆ ಸಮೀಪ ಇದ್ದ ಚರಂಡಿಯಲ್ಲಿ ಅಸ್ಥಿಪಂಜರಗಳು ಪತ್ತೆಯಾಗಿದ್ದವು.

ಕೋಲಿ ಪಂಧೇರ್‌ನ ಮನೆ ಸಹಾಯಕನಾಗಿದ್ದ. ಕೊಲೆ, ಅಪಹರಣ, ಅತ್ಯಾಚಾರ ಹಾಗೂ ಸಾಕ್ಷ್ಯ ನಾಶ ಸೇರಿದಂತೆ ವಿವಿಧ ಆರೋಪಗಳನ್ನು ಕೋಲಿ ವಿರುದ್ಧ ಮಾಡಲಾಗಿತ್ತು. ಪಂಧೇರ್‌ ಅಕ್ರಮ ಮಕ್ಕಳ ಕಳ್ಳಸಾಗಣಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದ.

Also Read
ನಿಠಾರಿ ಸರಣಿ ಹತ್ಯೆ: ಬಡ ಕೆಲಸಗಾರನ ಮೇಲೆ ಗೂಬೆ ಕೂರಿಸಿದ ಸಿಬಿಐ, ಉ.ಪ್ರದೇಶ ಪೋಲೀಸರಿಗೆ ಅಲಾಹಾಬಾದ್ ಹೈಕೋರ್ಟ್ ಛೀಮಾರಿ

ವಿವಿಧ ಹೆಣ್ಣುಮಕ್ಕಳ ಮೇಲೆ ಅನೇಕ  ಬಾರಿ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿ ಕೋಲಿ ಎಂದು ಕೊನೆಗೆ ಸಾಬೀತಾಗಿ 10 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಮರಣದಂಡನೆ ವಿಧಿಸಲಾಗಿತ್ತು. ಪಂಧೇರ್‌ ಕೆಲ ಪ್ರಕರಣಗಳಲ್ಲಿ ತಪ್ಪಿತಸ್ಥ ಎಂದು ಘೋಷಿಸಲಾಗಿತ್ತು.

ಕ್ಷಮಾದಾನ ಕೋರಿ ಕೋಲಿ ಸಲ್ಲಿಸಿದ್ದ ಅರ್ಜಿಯಲ್ಲಿ ತೀರ್ಪು ನೀಡುವ ಸಂಬಂಧ ಭಾರೀ ವಿಳಂಬವಾಗಿದೆ ಎಂಬ ಕಾರಣಕ್ಕೆ ಅಲಾಹಾಬಾದ್‌ ಹೈಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ (ಈಗಿನ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು) ನೇತೃತ್ವದ ಪೀಠ  28 ಜನವರಿ 2015ರಂದು ಮರಣ ದಂಡನೆ ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಿತ್ತು.

Kannada Bar & Bench
kannada.barandbench.com