ನಿಠಾರಿ ಹತ್ಯಾಕಾಂಡ: ಆರೋಪಿಗಳ ಖುಲಾಸೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಉತ್ತರ ಪ್ರದೇಶ ಸರ್ಕಾರ, ಸಿಬಿಐ

ನೋಯ್ಡಾದ ನಿಠಾರಿ ಗ್ರಾಮದ ಮನೆಯೊಂದರ ಬಳಿಯ ಚರಂಡಿಯಲ್ಲಿ 2006ರ ಡಿಸೆಂಬರ್‌ನಲ್ಲಿ ಹಲವಾರು ಅಸ್ಥಿಪಂಜರಗಳು ಪತ್ತೆಯಾದ ಘಟನೆ ದೇಶವನ್ನು ಬೆಚ್ಚಿಬೀಳಿಸಿತ್ತು.
Supreme Court
Supreme Court
Published on

ರಾಷ್ಟ್ರ ರಾಜಧಾನಿ ದೆಹಲಿಗೆ ಹೊಂದಿಕೊಂಡಂತಿರುವ ನೋಯ್ಡಾದ ನಿಠಾರಿ ಗ್ರಾಮದಲ್ಲಿ 2005-2006ರಲ್ಲಿ ನಡೆದಿದ್ದ ಮಕ್ಕಳ ಸರಣಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳ ಇಬ್ಬರು ಆರೋಪಿಗಳಾದ ಮೊನೀಂದರ್ ಸಿಂಗ್ ಪಂಧೇರ್ ಮತ್ತು ಸುರೇಂದ್ರ ಕೋಲಿ ಅವರನ್ನು ಅಲಾಹಾಬಾದ್‌ ಹೈಕೋರ್ಟ್‌ ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರ ಮತ್ತು ಸಿಬಿಐ ಸುಪ್ರೀಂ ಕೋರ್ಟ್‌ಗೆ ಸೋಮವಾರ ಅರ್ಜಿ ಸಲ್ಲಿಸಿವೆ [ಸಿಬಿಐ ಮೂಲಕ ಸರ್ಕಾರ ಮತ್ತು ಸುರೇಂದ್ರ ಕೋಲಿ ನಡುವಣ ಪ್ರಕರಣ].

ಈ ಹಿಂದೆ ವಿಚಾರಣಾ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾಗಿ ನಂತರ ಸುಪ್ರೀಂ ಕೋರ್ಟ್‌ನಿಂದ ಖುಲಾಸೆ ಆದೇಶ ಪಡೆದಿದ್ದ ಆರೋಪಿಗಳಿಂದ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಪ್ರತಿಕ್ರಿಯೆ ಕೇಳಿದೆ.

Also Read
ನಿಠಾರಿ ಹತ್ಯಾಕಾಂಡ: ಮೊನೀಂದರ್ ಸಿಂಗ್ ಪಂಧೇರ್, ಸುರೇಂದ್ರ ಕೋಲಿ ಖುಲಾಸೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ

ಸಿಬಿಐ ಮತ್ತು ಉತ್ತರ ಪ್ರದೇಶ ಸರ್ಕಾರವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿನಿಧಿಸಿದ್ದರು. ಖುಲಾಸೆ ಪ್ರಶ್ನಿಸಿ ಸಂತ್ರಸ್ತ ಬಾಲಕಿಯೊಬ್ಬರ ತಂದೆ ಪಪ್ಪು ಲಾಲ್ ಅವರು ಮೇಲ್ಮನವಿ ಸಲ್ಲಿಸಿದ್ದರು. ಈ ಸಂಬಂಧ ಸುಪ್ರೀಂ ಕೋರ್ಟ್ ಕಳೆದ ಮೇ ತಿಂಗಳಲ್ಲಿ ಖುಲಾಸೆಗೊಂಡ ಆರೋಪಿಗಳಿಗೆ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು.

ಅಲಹಾಬಾದ್ ಹೈಕೋರ್ಟ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಿಠಾರಿ ಹತ್ಯಾಕಾಂಡಕ್ಕೆ ಸಂಬಂಧಿಸಿದ ಕೆಲವು ಪ್ರಕರಣಗಳಲ್ಲಿ ಪಂಧೇರ್ ಮತ್ತು ಕೋಲಿಯನ್ನು ಖುಲಾಸೆಗೊಳಿಸಿತ್ತು. ವಿಚಾರಣಾ ನ್ಯಾಯಾಲಯವು ಅವರಿಗೆ ವಿಧಿಸಿದ್ದ ಮರಣದಂಡನೆಯನ್ನೂ ಅದು ರದ್ದುಗೊಳಿಸಿತ್ತು. ಈ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತುತ ಮೇಲ್ಮನವಿಗಳನ್ನು ಸಲ್ಲಿಸಲಾಗಿದೆ.

ನಿಠಾರಿ ಹತ್ಯಾಕಾಂಡ 2005- 2006ರಲ್ಲಿ ನಡೆದಿತ್ತು. ಪುಟ್ಟ ಮಕ್ಕಳು ಸೇರಿದಂತೆ ಹೆಣ್ಣುಮಕ್ಕಳನ್ನು ಮನೆಗೆ ಕರೆತಂದು ಬರ್ಬರವಾಗಿ ಹತ್ಯೆ ಮಾಡಿದ ಆರೋಪ ಮೊನೀಂದರ್‌ ಸಿಂಗ್‌ ಮತ್ತು ಸುರೇಂದ್ರ ಕೋಲಿ ಮೇಲಿತ್ತು. ಡಿಸೆಂಬರ್ 2006ರಲ್ಲಿ ನೋಯ್ಡಾದ ನಿಠಾರಿ ಗ್ರಾಮದ ಮೋನಿಂದರ್‌ ಸಿಂಗ್‌ ಪಂಧೇರ್‌ ಮನೆ ಸಮೀಪ ಇದ್ದ ಚರಂಡಿಯಲ್ಲಿ ಅಸ್ಥಿಪಂಜರಗಳು ಪತ್ತೆಯಾಗಿದ್ದವು.

ಕೋಲಿ ಪಂಧೇರ್‌ನ ಮನೆ ಸಹಾಯಕನಾಗಿದ್ದ. ಕೊಲೆ, ಅಪಹರಣ, ಅತ್ಯಾಚಾರ ಹಾಗೂ ಸಾಕ್ಷ್ಯ ನಾಶ ಸೇರಿದಂತೆ ವಿವಿಧ ಆರೋಪಗಳನ್ನು ಕೋಲಿ ವಿರುದ್ಧ ಮಾಡಲಾಗಿತ್ತು. ಪಂಧೇರ್‌ ಅಕ್ರಮ ಮಕ್ಕಳ ಕಳ್ಳಸಾಗಣಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದ.

ವಿವಿಧ ಹೆಣ್ಣುಮಕ್ಕಳ ಮೇಲೆ ಅನೇಕ  ಬಾರಿ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿ ಕೋಲಿ ಎಂದು ಕೊನೆಗೆ ಸಾಬೀತಾಗಿ 10 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಮರಣದಂಡನೆ ವಿಧಿಸಲಾಗಿತ್ತು. ಪಂಧೇರ್‌ ಕೆಲ ಪ್ರಕರಣಗಳಲ್ಲಿ ತಪ್ಪಿತಸ್ಥ ಎಂದು ಘೋಷಿಸಲಾಗಿತ್ತು.

ಕ್ಷಮಾದಾನ ಕೋರಿ ಕೋಲಿ ಸಲ್ಲಿಸಿದ್ದ ಅರ್ಜಿಯಲ್ಲಿ ತೀರ್ಪು ನೀಡುವ ಸಂಬಂಧ ಭಾರೀ ವಿಳಂಬವಾಗಿದೆ ಎಂಬ ಕಾರಣಕ್ಕೆ ಅಲಾಹಾಬಾದ್‌ ಹೈಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ (ಈಗಿನ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು) ನೇತೃತ್ವದ ಪೀಠ  28 ಜನವರಿ 2015ರಂದು ಮರಣ ದಂಡನೆ ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಿತ್ತು.

Also Read
ನಿಠಾರಿ ಸರಣಿ ಹತ್ಯೆ: ಬಡ ಕೆಲಸಗಾರನ ಮೇಲೆ ಗೂಬೆ ಕೂರಿಸಿದ ಸಿಬಿಐ, ಉ.ಪ್ರದೇಶ ಪೋಲೀಸರಿಗೆ ಅಲಾಹಾಬಾದ್ ಹೈಕೋರ್ಟ್ ಛೀಮಾರಿ

ಉತ್ತರ ಪ್ರದೇಶ ಸರ್ಕಾರ ಮತ್ತು ಸಿಬಿಐನ ಪ್ರಾಸಂಗಿಕ ಮತ್ತು ತೋರಿಕೆಯ ತನಿಖೆಯನ್ನು ಈಗ ಪ್ರಶ್ನಿಸಲಾಗಿರುವ ತೀರ್ಪಿನಲ್ಲಿ ಹೈಕೋರ್ಟ್ ಖಂಡಿಸಿತ್ತು.

 ಕೋಲಿಯನ್ನು ಮಾತ್ರವೇ ಅಪರಾಧಿ ಎಂದು ಕೇಂದ್ರೀಕರಿಸುವ ಮೂಲಕ, ತನಿಖಾ ಅಧಿಕಾರಿಗಳು ಕುಖ್ಯಾತ ಅಪರಾಧಗಳ ಹಿಂದಿನ ನಿಜವಾದ ಉದ್ದೇಶವಾದ ಅಂಗಾಂಗ ವ್ಯಾಪಾರದ ಪ್ರಮುಖ ಸಾಧ್ಯತೆಯನ್ನು ಮರೆಮಾಚಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿತ್ತು.

Kannada Bar & Bench
kannada.barandbench.com