ಉಡುಪುಗಳ ತಯಾರಿಕೆ ಮತ್ತು ಮಾರಾಟದ ವಿಚಾರವಾಗಿ ಯಾವುದೇ ಹಕ್ಕುಸ್ವಾಮ್ಯ ಇರುವುದಿಲ್ಲ ಎಂದು ಈಚೆಗೆ ತಿಳಿಸಿರುವ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಪೂಮಾ ಕಂಪೆನಿಯ ಹೆಸರಿನಲ್ಲಿ ನಕಲಿಯಾಗಿ ಬಟ್ಟೆ ತಯಾರಿಸಿ ಅಕ್ರಮವಾಗಿ ಮಾರಾಟ ಮಾಡಿದ್ದ ಆರೋಪಿ ವಿರುದ್ಧ ಹೂಡಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿದೆ [ಅರುಣ್ ಕುಮಾರ್ ಮತ್ತು ಪಂಜಾಬ್ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಕೃತಿಸ್ವಾಮ್ಯ ಕಾಯಿದೆ- 1957ರ ಸೆಕ್ಷನ್ 13ರ ಪ್ರಕಾರ, ಕೃತಿಗಳ ನಿರ್ದಿಷ್ಟ ವರ್ಗಗಳಿಗೆ ಸಂಬಂಧಿಸಿದಂತೆ ಹಕ್ಕುಸ್ವಾಮ್ಯ ಅಸ್ತಿತ್ವದಲ್ಲಿರಬಹುದು. ಹೀಗಾಗಿ ಉಡುಪುಗಳ ತಯಾರಿಕೆ ಮತ್ತು ಮಾರಾಟದಲ್ಲಿ ಯಾವುದೇ ಹಕ್ಕುಸ್ವಾಮ್ಯ ಇರುವುದಿಲ್ಲ. ಆದ್ದರಿಂದ ಮೇಲ್ನೋಟಕ್ಕೆ ಪ್ರಾಸಿಕ್ಯೂಷನ್ ಕಾಯಿದೆಯ ಸೆಕ್ಷನ್ 63 ಮತ್ತು 65 ಉಲ್ಲಂಘನೆಯಾಗಿರುವುದನ್ನು ಸಾಬೀತುಪಡಿಸಲು ವಿಫಲವಾಗಿದೆ” ಎಂದ ನ್ಯಾಯಮೂರ್ತಿ ಕರಮ್‌ಜಿತ್ ಸಿಂಗ್ ಅವರು ತಿಳಿಸಿದರು.
ವಾಣಿಜ್ಯ ಚಿಹ್ನೆ ಕಾಯಿದೆ ಅಡಿಯಲ್ಲಿ ಸೂಚಿಸಲಾದ ಕಾರ್ಯವಿಧಾನ ಪಾಲಿಸದ ಆಧಾರದ ಮೇಲೆ ವ್ಯಕ್ತಿಯ ವಿರುದ್ಧ ಹೂಡಲಾಗಿದ್ದ ವಾಣಿಜ್ಯ ಚಿಹ್ನೆ ಉಲ್ಲಂಘನೆಯ ಪ್ರಕರಣವನ್ನೂ ನ್ಯಾಯಾಲಯ ಇದೇ ವೇಳೆ ರದ್ದುಗೊಳಿಸಿತು. ಪ್ರಸ್ತುತ ಪ್ರಕರಣದಲ್ಲಿ ವಾಣಿಜ್ಯ ಚಿಹ್ನೆ ಕಾಯಿದೆಯಡಿ ಆದೇಶ ಪಾಲಿಸಲಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.
"1999 ರ ಕಾಯಿದೆಯ ಸೆಕ್ಷನ್ 115 (4) ನ್ನು ಉಲ್ಲಂಘಿಸಿ ಇನ್‌ಸ್ಪೆಕ್ಟರ್ ವಿಜಯ್ ಕುಮಾರ್ ಅವರು ಪ್ರಕರಣದ ತನಿಖೆ ನಡೆಸಿದ್ದಾರೆ, ಕಾಯಿದೆ ಉಲ್ಲಂಘನೆಗೆ ಸಂಬಂಧಿಸಿದಂತೆ ಡಿವೈಎಸ್‌ಪಿ ಹುದ್ದೆಗಿಂತಲೂ ಕಡಿಮೆಯಲ್ಲದ ಪೊಲೀಸ್ ಅಧಿಕಾರಿ ತನಿಖೆ ನಡೆಸಬೇಕು ಎಂದು ಕಾಯಿದೆ ಹೇಳುತ್ತದೆ” ಎಂದಿದೆ.
ಕಾಯಿದೆಯ ಪ್ರಕಾರ ಶೋಧ ಕಾರ್ಯಾಚರಣೆ ಮತ್ತು ಮುಟ್ಟುಗೋಲಿಗೆ ತೆರಳುವ ಮುನ್ನ ತನಿಖಾಧಿಕಾರಿ ವಾಣಿಜ್ಯ ಚಿಹ್ನೆ ರಿಜಿಸ್ಟ್ರಾರ್ ಅವರ ಅಭಿಪ್ರಾಯ ಪಡೆದಿಲ್ಲ. ಹೀಗಾಗಿ, ಹಕ್ಕುಸ್ವಾಮ್ಯ ಕಾಯಿದೆ ಹಾಗೂ ವಾಣಿಜ್ಯ ಚಿಹ್ನೆ ಕಾಯಿದೆ ಅಡಿಯಲ್ಲಿ ಆರೋಪಿಗಳ ತನಿಖೆ ಕಾನೂನುಬದ್ಧವಾಗಿ ಸಮರ್ಥನೀಯವಲ್ಲ ಎಂದ ಅದು ಕುಮಾರ್ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿದೆ.