Supreme Court, West Bengal map  
ಸುದ್ದಿಗಳು

ಭಾವನಾತ್ಮಕ ಆಕ್ರೋಶಗಳೆಲ್ಲವೂ ಆರ್ಥಿಕ ಭದ್ರತೆಗೆ ಬೆದರಿಕೆಯಲ್ಲ: ಎನ್‌ಐಎ ಕಿವಿ ಹಿಂಡಿದ ಸುಪ್ರೀಂ ಕೋರ್ಟ್

ಕಳೆದ ತಿಂಗಳು ಪ. ಬಂಗಾಳದ ಬೆಲ್ಡಂಗಾದಲ್ಲಿ ನಡೆದ ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ಎನ್‌ಐಎ ತನಿಖೆಯನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Bar & Bench

ಪಶ್ಚಿಮ ಬಂಗಾಳದ ಬೆಲ್ದಂಗಾದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ತನಿಖೆಯನ್ನು ಸಮರ್ಥಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ- 1967 (ಯುಎಪಿಎ) ಮೊರೆ ಹೋಗಿರುವುದೇಕೆ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಪ್ರಶ್ನಿಸಿತು.

ಬೆಲ್ಡಂಗಾದ ಹಿಂಸಾಚಾರವು ಭಾರತದ ಆರ್ಥಿಕ ಭದ್ರತೆಗೆ ಧಕ್ಕೆ ತಂದಿದ್ದು ಯುಎಪಿಎ ಕಾಯ್ದೆಯ ಸೆಕ್ಷನ್ 15 ಅಡಿಯಲ್ಲಿ ಉಗ್ರಕೃತ್ಯ ಎನಿಸಿಕೊಳ್ಳುತ್ತದೆ ಎಂದು ಎನ್‌ಐಎ ವಾದಿಸಿತು.

ಇಂತಹ ನಿರ್ಣಯಕ್ಕೆ ಬರಲು ಅಗತ್ಯವಾದ ಪ್ರಕರಣದ ದಾಖಲೆಗಳನ್ನು ಪಶ್ಚಿಮ ಬಂಗಾಳ ಸರ್ಕಾರ ಇನ್ನಷ್ಟೇ ಎನ್‌ಐಎಗೆ ಹಸ್ತಾಂತರಿಸಬೇಕಿದೆ ಎಂಬುದನ್ನು ಸಿಜೆಐ ಸೂರ್ಯಕಾಂತ್‌ ಹಾಗೂ ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಗಮನಿಸಿತು.

“ದಾಖಲೆಗಳನ್ನು ಪರಿಶೀಲಿಸದೇ ನೀವು ಸೆಕ್ಷನ್ 15 ಯುಎಪಿಎ ಅನ್ವಯವಾಗುತ್ತದೆ ಎಂದು ಹೇಳಿದ್ದೀರಿ. ಪ್ರಕರಣದ ಡೈರಿ ನಿಮ್ಮ ಮುಂದೆ ಇಲ್ಲ... ಇದು ಪೂರ್ವನಿರ್ಧಾರಿತ ನಿರ್ಣಯವಾಗಿದೆ. ಪ್ರತಿಯೊಂದು ಭಾವನಾತ್ಮಕ ಆಕ್ರೋಶವನ್ನೂ ಆರ್ಥಿಕ ಭದ್ರತೆಗೆ ಬೆದರಿಕೆ ಎಂದು ವರ್ಗೀಕರಿಸಲಾಗುವುದಿಲ್ಲ!” ಎಂದು ನ್ಯಾಯಮೂರ್ತಿ ಬಾಗ್ಚಿ ಅವರು ಎನ್‌ಐಎ ಪರ ವಕೀಲರಿಗೆ ಬುದ್ಧಿಮಾತು ಹೇಳಿದರು.

ಈ ಹಿಂದೆ 2025ರ ಏಪ್ರಿಲ್‌ನಲ್ಲಿ ನಡೆದ ಹಿಂಸಾಚಾರ ಸಂದರ್ಭದಲ್ಲಿ ತನಿಖೆ ನಡೆಸಲು ಅವಕಾಶವಿದ್ದರೂ ಎನ್‌ಐಎ ವಿಳಂಬ ತೋರಿದೆ ಎಂದು ನ್ಯಾಯಾಲಯ ಹೇಳಿತು.

ಜನವರಿಯಲ್ಲಿ ನಡೆದ ಘಟನೆ ಅಲಾವುದ್ದೀನ್ ಶೇಖ್ ಎಂಬ ವ್ಯಕ್ತಿಯ ಮೃತದೇಹವನ್ನು ಜಾರ್ಖಂಡ್‌ನಿಂದ ಸ್ವಗ್ರಾಮಕ್ಕೆ ತರಲಾದ ವೇಳೆ ಭುಗಿಲೆದ್ದಿತ್ತು. ಆ ಬಳಿಕ ನಾಲ್ಕು ಎಫ್‌ಐಆರ್‌ಗಳು ದಾಖಲಾಗಿದ್ದು, ಕನಿಷ್ಠ 30 ಮಂದಿಯನ್ನು ಬಂಧಿಸಲಾಗಿತ್ತು. ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ ತಡೆದು ಪತ್ರಕರ್ತರ ಮೇಲೂ ದಾಳಿ ನಡೆಸಿದ್ದರು.

ಜನವರಿ 20ರಂದು ಕಲ್ಕತ್ತಾ ಹೈಕೋರ್ಟ್, ಹಿಂಸಾಚಾರ ಮರುಕಳಿಸದಂತೆ ಕೇಂದ್ರ ಶಸ್ತ್ರಸಜ್ಜಿತ ಪಡೆಗಳನ್ನು ನಿಯೋಜಿಸಲು ರಾಜ್ಯಕ್ಕೆ ಸೂಚಿಸಿತ್ತು ಹಾಗೂ ಎನ್‌ಐಎ ತನಿಖೆಯನ್ನು ಪರಿಗಣಿಸಲು ಕೇಂದ್ರಕ್ಕೆ ಅವಕಾಶವಿದೆ ಎಂದಿತ್ತು. ಇದನ್ನಾಧರಿಸಿ ಕೇಂದ್ರ ಗೃಹ ಸಚಿವಾಲಯ ಜನವರಿ 28ರಂದು ಎನ್‌ಐಎ ತನಿಖೆಗೆ ಆದೇಶಿಸಿತು. ಇದನ್ನು ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಇಂದಿನ ವಿಚಾರಣೆಯ ವೇಳೆ ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯವು ತನಿಖೆಯ ಸ್ಥಿತಿಗತಿ ಕುರಿತು ಎನ್‌ಐಎ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಕಲ್ಕತ್ತಾ ಹೈಕೋರ್ಟ್‌ಗೆ ಸಲ್ಲಿಸುವಂತೆ ಸೂಚಿಸಿತು. ಪ್ರಕರಣವನ್ನು ಕಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠವೇ ಸ್ವತಂತ್ರವಾಗಿ ಪರಿಗಣಿಸಲಿ ಎಂದು ಅದು ಆದೇಶಿಸಿತು. ಪ್ರಕರಣದ ವಿಚಾರಣಾರ್ಹತೆಯ ವಿಷಯದ ಬಗ್ಗೆ ತಾವು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸಿತು.

ವಿಚಾರಣೆ ವೇಳೆ ಪ. ಬಂಗಾಳ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕಲ್ಯಾಣ್‌ ಬ್ಯಾನರ್ಜಿ ಎನ್‌ಐಎ ಆಯ್ಕೆಮಾಡಿ ಕ್ರಮ ಕೈಗೊಳ್ಳುತ್ತಿದೆ ಎಂದು ಆರೋಪಿಸಿದರೆ, ಎನ್‌ಐಎ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ತನಿಖೆಗೆ ದೃಢವಾದ ಆಧಾರವಿದೆ ಎಂದು ವಾದಿಸಿದರು.