A1
A1
ಸುದ್ದಿಗಳು

ಲಿಖಿತವಾಗಿ ತಿಳಿಸದೆ ಕೇರಳ ಮಾಲೀಕನ ಲಾರಿ ಮುಟ್ಟುಗೋಲು: ಅರಣ್ಯಾಧಿಕಾರಿಗಳ ಆದೇಶ ಬದಿಗೆ ಸರಿಸಿದ ಮಡಿಕೇರಿ ನ್ಯಾಯಾಲಯ

Bar & Bench

ಕೇರಳದ ವ್ಯಕ್ತಿಯೊಬ್ಬರಿಗೆ ಸೇರಿದ ಲಾರಿಯೊಂದನ್ನು ಕರ್ನಾಟಕ ಅರಣ್ಯ ಕಾಯಿದೆಯ ಸೆಕ್ಷನ್‌ 71­ ಬಿಯಲ್ಲಿ ತಿಳಿಸಿರುವಂತೆ ಲಿಖಿತವಾಗಿ ಮಾಹಿತಿ ನೀಡದೆ ಮುಟ್ಟುಗೋಲು ಹಾಕಿಕೊಂಡಿದ್ದ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯ ಅರಣ್ಯಾಧಿಕಾರಿಗಳು ಹೊರಡಿಸಿದ್ದ ಆದೇಶವನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಇತ್ತೀಚೆಗೆ ಬದಿಗೆ ಸರಿಸಿದೆ. [ಮುಸಮ್ಮಿಲ್‌ ಟಿ ಮತ್ತು ಕುಶಾಲನಗರ ಆರ್‌ಎಫ್‌ಒ ಮೂಲಕ ರಾಜ್ಯ ಸರ್ಕಾರದ ನಡುವಣ ಪ್ರಕರಣ].

ಅಲ್ಲದೆ ಪ್ರಕರಣವನ್ನು ಅಧಿಕೃತ ಅಧಿಕಾರಿ ಮತ್ತು ಮಡಿಕೇರಿ ಅರಣ್ಯ ಉಪ ಸಂರಕ್ಷಣಾಧಿಕಾರಿಗಳಿಗೆ ಮರಳಿಸಿರುವ ನ್ಯಾಯಾಧೀಶರಾದ ಬಿ ಎಲ್‌ ಜಿನರಾಳ್ಕರ್‌ ಅರ್ಜಿದಾರರಿಗೆ ಕಾಯಿದೆಯ ಸೆಕ್ಷನ್‌ 71­ ಬಿ ಅಡಿ ಶೋಕಾಸ್‌ ನೋಟಿಸ್‌ ನೀಡಿ ಎರಡೂ ಕಡೆಯ ಮನವಿಗಳನ್ನು ಆಲಿಸಿ ಬಳಿಕ ಕಾನೂನಿನ ಪ್ರಕಾರ ಮುಂದುವರೆಯುವಂತೆ ಸೂಚಿಸಿದೆ.

ಲಾರಿ ಮುಟ್ಟುಗೋಲು ಹಾಕಿಕೊಂಡಿರುವ ವಿಚಾರವನ್ನು ತಮಗೆ ತಿಳಿಸಲು ಡಿಸಿಎಫ್‌ ವಿಫಲರಾಗಿದ್ದಾರೆ ಮತ್ತು ಪ್ರಕರಣದಲ್ಲಿ ತಮ್ಮ ವಾದ ಮಂಡಿಸಲು ಅವಕಾಶ ನೀಡಿಲ್ಲ ಇದು ಸಹಜ ನ್ಯಾಯದ ತತ್ವಕ್ಕೆ ವಿರುದ್ಧ ಎಂದು ಅರ್ಜಿದಾರರಾದ ಕೇರಳದ ಕಣ್ಣೂರು ಜಿಲ್ಲೆಯ ಪೊಣ್ಣಿಯಂ ನಿವಾಸಿ ಮುಸಮ್ಮಿಲ್‌ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಅಲ್ಲದೆ ತಾವು ಉದ್ದೇಶಪೂರ್ವಕವಾಗಿ ಅರ್ಜಿ ಸಲ್ಲಿಸಲು ವಿಳಂಬ ಮಾಡಿಲ್ಲ. ಕೋವಿಡ್‌ ಹಿನ್ನೆಲೆಯಲಿ ತಾವು ಕೇರಳದಿಂದ ಕರ್ನಾಟಕಕ್ಕೆ ಓಡಾಡುವುದು ಸಾಧ್ಯವಾಗಲಿಲ್ಲ ಎಂಬ ಅರ್ಜಿದಾರರ ವಾದವನ್ನು ನ್ಯಾಯಾಲಯ ಮನ್ನಿಸಿದೆ.

ಘಟನೆಯ ಹಿನ್ನೆಲೆ

ಕೇರಳದ ಕಣ್ಣೂರು ಜಿಲ್ಲೆ ಪೊಣ್ಣಿಯಂ ನಿವಾಸಿ ಟಿ ಮುಸಮ್ಮಿಲ್‌ ಅವರ ವಿರುದ್ಧ ಕರ್ನಾಟಕ ಅರಣ್ಯ ಕಾಯಿದೆ- 1963 ಮತ್ತು ಕರ್ನಾಟಕ ಅರಣ್ಯ ನಿಯಮಾವಳಿಗಳ ವಿವಿಧ ಸೆಕ್ಷನ್‌ ಮತ್ತು ನಿಯಮಗಳ ಅಡಿ 16-­02-­2019ರಂದು ಪ್ರಕರಣ ದಾಖಲಿಸಿಕೊಂಡಿದ್ದ ಕುಶಾಲನಗರ ಆರ್‌ಎಫ್‌ಒ ಮುಸಮ್ಮಿಲ್‌ ಮಾಲೀಕತ್ವದ ಲಾರಿಯನ್ನು (KL­ 58 ­W ­9863) ಮುಟ್ಟುಗೋಲು ಹಾಕಿಕೊಂಡಿದ್ದರು.

ಲಾರಿಯನ್ನು ಬಿಡುಗಡೆ ಮಾಡುವಂತೆ ಕೋರಿ ಜಿಲ್ಲಾ ಅರಣ್ಯಾಧಿಕಾರಿಗಳಿಗೆ (ಡಿಎಫ್‌ಒ) ಮುಸಮ್ಮಿಲ್‌ ಮನವಿ ಸಲ್ಲಿಸಿದರೂ ಅದನ್ನು ತಿರಸ್ಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋದ ಲಾರಿ ಮಾಲೀಕ ಮುಸಮ್ಮಿಲ್‌ ಲಾರಿಯನ್ನು ಮಧ್ಯಂತರ ಸ್ವಾಧೀನಕ್ಕೆ ಒಪ್ಪಿಸುವಂತೆ ಕೋರಿದ್ದರು. ಸೂಕ್ತ ನಿಯಮಾವಳಿಗಳಡಿ ಡಿಎಫ್‌ಒಗೆ ಅರ್ಜಿ ಸಲ್ಲಿಸುವಂತೆ ನ್ಯಾಯಾಲಯ ಮುಸಮ್ಮಿಲ್‌ ಅವರಿಗೆ ಸೂಚಿಸಿತ್ತು. ಅಂತೆಯೇ ಮುಸಮ್ಮಿಲ್‌ ಮತ್ತೆ ಡಿಎಫ್‌ಒಗೆ ಹೊಸದಾಗಿ ಅರ್ಜಿ ಸಲ್ಲಿಸಿದ್ದರು.

ಆದರೆ ತಾವು ವಾಹನದ ಮಧ್ಯಂತರ ಸ್ವಾಧೀನಕ್ಕಾಗಿ ಸೂಕ್ತ ನಿಯಮಾವಳಿಗಳ ಅಡಿ ಅರ್ಜಿ ಸಲ್ಲಿಸದೇ ಹೋದರೂ ವಾಹನ ಸಂಖ್ಯೆಯನ್ನು ಮುಸಮ್ಮಿಲ್‌ ಸರಿಯಾಗಿಯೇ ನಮೂದಿಸಿದ್ದಾರೆ ಎಂಬುದು ಡಿಎಫ್‌ಒಗೆ ಅರಿವಿತ್ತು ಎಂದು ಅರ್ಜಿದಾರರು ವಾದಿಸಿದ್ದರು.

ಅಲ್ಲದೆ ತಾವು ಸಾಲ ಮಾಡಿ ವಾಹನ ಖರೀದಿಸಿದ್ದು ವಾಹನ ಮುಟ್ಟುಗೋಲು ಹಾಕಿಕೊಂಡಿರುವುದರಿಂದ ತಮ್ಮ ಕುಟುಂಬಕ್ಕೆ ಆದಾಯದ ಕೊರತೆ ಉಂಟಾಗಿದೆ. ಆ ವಾಹನದಿಂದ ದೊರೆಯವ ಆದಾಯದ ಮೂಲಕವೇ ತಮ್ಮ ಕುಟುಂಬ ಜೀವನ ನಡೆಸುತ್ತಿದೆ. ಅಲ್ಲದೆ ಡಿಎಫ್‌ಒ ಅವರಿಗೆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳುವ ಮತ್ತು ಅದನ್ನು ವಶದಲ್ಲಿಟ್ಟುಕೊಳ್ಳುವ ಅಧಿಕಾರ ವ್ಯಾಪ್ತಿಯಿಲ್ಲ ಎಂದು ಕೂಡ ಅರ್ಜಿಯಲ್ಲಿ ವಿವರಿಸಲಾಗಿತ್ತು.

ಮುಸಮ್ಮಿಲ್‌ ಅವರ ಪರವಾಗಿ ವಕೀಲೆ ಕೆ ಎಂ ಮೀನಾ ಕುಮಾರಿ ವಾದಿಸಿದ್ದರು. ಆರ್‌ಎಫ್‌ ಒ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ವಾದ ಮಂಡಿಸಿದ್ದರು.