ಒಮರ್ ಅಬ್ದುಲ್ಲಾ ಮತ್ತು ಸುಪ್ರೀಂ ಕೋರ್ಟ್‌  ಒಮರ್ ಅಬ್ದುಲ್ಲಾ (ಫೇಸ್‌ಬುಕ್‌)
ಸುದ್ದಿಗಳು

ಮಧ್ಯಸ್ಥಿಕೆಗೆ ಒಮರ್ ಅಬ್ದುಲ್ಲಾ ಹಾಗೂ ಪಾಯಲ್ ಒಪ್ಪಿಗೆ: ವಿಚ್ಛೇದನ ಪ್ರಕರಣದ ವಿಚಾರಣೆ ಮುಂದೂಡಿದ ಸುಪ್ರೀಂ

ತಮ್ಮ ಪರಿತ್ಯಕ್ತ ಪತ್ನಿಯಿಂದ ವಿಚ್ಛೇದನ ಕೋರಿ ಒಮರ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಒಮರ್ ಮೇಲ್ಮನವಿ ಸಲ್ಲಿಸಿದ್ದರು.

Bar & Bench

ಜಮ್ಮು- ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ  ಮತ್ತು ಅವರ ಪರಿತ್ಯಕ್ತ ಪತ್ನಿ ಪಾಯಲ್ ಅಬ್ದುಲ್ಲಾ ಅವರು ಭಿನ್ನಾಭಿಪ್ರಾಯ ಪರಿಹರಿಸಿಕೊಳ್ಳುವುದಕ್ಕಾಗಿ ಮಧ್ಯಸ್ಥಿಕೆಗೆ ಪರಸ್ಪರ ಒಪ್ಪಿದ ಹಿನ್ನೆಲೆಯಲ್ಲಿ ಪಾಯಲ್‌ ಅವರಿಂದ ವಿಚ್ಛೇದನ ಕೋರಿ ಒಮರ್‌ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಶುಕ್ರವಾರ ಸುಪ್ರೀಂ ಕೋರ್ಟ್‌ ಮುಂದೂಡಿದೆ [ಒಮರ್ ಅಬ್ದುಲ್ಲಾ ಮತ್ತು ಪಾಯಲ್ ಅಬ್ದುಲ್ಲಾ ನಡುವಣ ಪ್ರಕರಣ].

ಮಧ್ಯಸ್ಥಿಕೆದಾರರು ಹತ್ತು ವಾರಗಳಲ್ಲಿ ವರದಿ ಸಲ್ಲಿಸಬೇಕಿದ್ದು ಆ ಬಳಿಕ ಪ್ರಕರಣ ಆಲಿಸುವುದಾಗಿ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ತಿಳಿಸಿತು.

ಸೆಪ್ಟೆಂಬರ್, 1994ರಲ್ಲಿ ವಿವಾಹವಾಗಿದ್ದ ಒಮರ್ ಮತ್ತು ಪಾಯಲ್ ದೀರ್ಘಕಾಲದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

ಒಮರ್ ಅವರ ವಿಚ್ಛೇದನದ ಮನವಿಯನ್ನು ಕೌಟುಂಬಿಕ ನ್ಯಾಯಾಲಯ ಆಗಸ್ಟ್ 30, 2016ರಂದು ಮೊದಲ ಬಾರಿಗೆ ತಿರಸ್ಕರಿಸಿತ್ತು. ತಮ್ಮ ವೈವಾಹಿಕ ನಂಟು ಸರಿಪಡಿಸಲಾಗದಷ್ಟು ಬಿರುಕುಬಿಟ್ಟಿದೆ ಎಂದು ಸಾಬೀತುಪಡಿಸಲು ಒಮರ್‌ ವಿಫಲರಾಗಿದ್ದಾರೆ ಎಂದು ಅದು ಹೇಳಿತ್ತು.

ನಂತರ ಒಮರ್ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್ ಕೂಡ ವಿಚ್ಛೇದನದ ಮನವಿಯನ್ನು ತಿರಸ್ಕರಿಸಿತು. ಪರಿಣಾಮ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂದು ಅವರು ಕೋರಿದರು. ಪ್ರಕರಣವೊಂದರಲ್ಲಿ ಸಂಪೂರ್ಣ ನ್ಯಾಯ ಒದಗಿಸುವುದಕ್ಕಾಗಿ ಅಗತ್ಯವಾದ ಎಂಥದ್ದೇ ಆದೇಶ ಹೊರಡಿಸಲು ಈ ವಿಧಿಯಡಿ ಸುಪ್ರೀಂ ಕೋರ್ಟ್‌ಗೆ ಅಧಿಕಾರ ನೀಡಲಾಗಿದೆ. ಸರಿಪಡಿಸಲು ಸಾಧ್ಯವಾಗುವುದೇ ಇಲ್ಲ ಎನ್ನುವಂತಹ ವೈವಾಹಿಕ ಸಂಬಂಧದ ವಿಸರ್ಜನೆಗೆ ಈ ಹಿಂದೆ ಸುಪ್ರೀಂ ಕೋರ್ಟ್‌ ಈ ವಿಧಿಯನ್ನು ಬಳಸಿದ್ದಿದೆ. 

ಒಮರ್ ಅಬ್ದುಲ್ಲಾ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ , ಕಳೆದ 15 ವರ್ಷಗಳಿಂದ ವಿಚ್ಛೇದಿತ ದಂಪತಿ ಬೇರೆ ಬೇರೆಯಾಗಿ ಬದುಕುತ್ತಿದ್ದಾರೆ ಎಂದು ಇಂದು ಪುನರುಚ್ಚರಿಸಿದರು.

ಪಾಯಲ್ ಅಬ್ದುಲ್ಲಾ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್ ನ್ಯಾಯಾಲಯದ ಪ್ರಶ್ನೆಗೆ, ಮಧ್ಯಸ್ಥಿಕೆಯಿಂದ ವಿವಾದ ಪರಿಹರಿಸಲು ಮುಂದಾಗಬಹುದು ಎಂದು ಹೇಳಿದರು.

ನ್ಯಾಯಾಲಯ ಸಕಾರಾತ್ಮಕವಾಗಿ ಸ್ಪಂದಿಸಿದಾಗ "ಇದು ಪರಿಹಾರವಾಗುತ್ತದೆ ಎನ್ನಿಸುವುದಿಲ್ಲ. ಆದರೂ ನ್ಯಾಯಾಲಯ ಮುಂದುವರೆಯಬಹುದು” ಎಂದು ಸಿಬಲ್‌ ಪ್ರತಿಕ್ರಿಯಿಸಿದರು.

ಇತ್ತೀಚೆಗೆ ನಿವೃತ್ತರಾದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್, ಹೇಮಂತ್ ಗುಪ್ತಾ ಮತ್ತು ಎಸ್ ರವೀಂದ್ರ ಭಟ್ ಅವರನ್ನು ನ್ಯಾಯಾಲಯವು ಮಧ್ಯಸ್ಥಿಕೆದಾರರನ್ನಾಗಿ ನೇಮಿಸಬಹುದು ಎಂದು ದಿವಾನ್ ಸಲಹೆ ನೀಡಿದರು .ಆದರೆ, ಕಕ್ಷಿದಾರರು ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ಕೇಂದ್ರವನ್ನು ಸಂಪರ್ಕಿಸಬೇಕು ಎಂದು ಪೀಠ ಸೂಚಿಸಿತು.

ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಒಮರ್ ಅಬ್ದುಲ್ಲಾ ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿರುವ ಕಾರಣ ಸ್ವಲ್ಪ ದೀರ್ಘ ಸಮಯದವರೆಗೆ ವಿಚಾರಣೆ ಮುಂದೂಡಬೇಕೆಂದು ಸಿಬಲ್‌ ಕೋರಿದರು.

ಹತ್ತು ವಾರದಲ್ಲಿ ಮಧ್ಯಸ್ಥಿಕೆದಾರರ ವರದಿ ನೀಡುವಂತೆ ಸೂಚಿಸಿದ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿತು.

ಜೀವನಾಂಶಕ್ಕೆ ಸಂಬಂಧಿಸಿದಂತೆ ತದನಂತರ ವಿಚಾರಣೆ ನಡೆಸುವಂತೆ ದಿವಾನ್‌ ಮನವಿ ಮಾಡಿದರು.

ಈ ಹಿಂದೆ ಪಾಯಲ್‌ ಅವರಿಗೆ ನೀಡಬೇಕಿದ್ದ ಜೀವನಾಂಶವನ್ನು ದೆಹಲಿ ಹೈಕೋರ್ಟ್‌ ಹೆಚ್ಚಿಸಿತ್ತು. ಪಾಯಲ್‌ ಅವರಿಗೆ ಜೀವನಾಂಶ ರೂಪದಲ್ಲಿ ತಿಂಗಳಿಗೆ ₹1.5 ಲಕ್ಷ, ಇಬ್ಬರು ಪುತ್ರರ ವಿದ್ಯಾಭ್ಯಾಸಕ್ಕಾಗಿ ತಲಾ ₹60,000 ರೂ.ಗಳನ್ನು ನೀಡುವಂತೆ ಸೂಚಿಸಲಾಗಿತ್ತು.