ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ, ಹಾಗೂ ಅಲಾಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಥುರ್ ಅವರಿಗೆ ಪತ್ರ ಬರೆದಿರುವ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಉತ್ತರಪ್ರದೇಶದ ಎಟಾದಲ್ಲಿ ನಡೆದ ಘಟನೆಯೊಂದರಲ್ಲಿ ವಕೀಲರ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಸಿಬ್ಬಂದಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಕೋರಿದೆ,
ಇದು ಉತ್ತರಪ್ರದೇಶ ಪೊಲೀಸರು ನಡೆಸಿದ ಗೂಂಡಾಗಿರಿಯಲ್ಲದೆ ಮತ್ತೇನೂ ಅಲ್ಲ ಎಂದಿರುವ ಬಿಸಿಐ ʼಉತ್ತರಪ್ರದೇಶ ಪೊಲೀಸರ ದೌರ್ಜನ್ಯಕ್ಕೆ ಯಾವುದೇ ಮಿತಿ ಇಲ್ಲ ಎಂದು ತಿಳಿಸಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಸಿಬ್ಬಂದಿಯನ್ನು ಕೂಡಲೇ ಅಮಾನತು ಮಾಡಲು, ವರ್ಗಾವಣೆ ಅಥವಾ ಸೇವೆಯಿಂದ ವಜಾಗೊಳಿಸಲು ಉತ್ತರಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅದು ಆಗ್ರಹಿಸಿದೆ.
ಇದರ ಜೊತೆಗೆ ದೇಶದ ವಕೀಲರಿಗೆ ರಕ್ಷಣೆ ಒದಗಿಸುವ ಸಲುವಾಗಿ ಸೂಕ್ತ ಕಾನೂನುಗಳನ್ನು ಜಾರಿಗೆ ತರುವಂತೆ ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆಯಲು ಬಿಸಿಐ ನಿರ್ಧರಿಸಿದೆ. ಪಶ್ಚಿಮ ಬಂಗಾಳ, ಬಿಹಾರ ಹಾಗೂ ಬಹುತೇಕ ಎಲ್ಲ ರಾಜ್ಯಗಳಲ್ಲಿ ಇಂತಹ ಘಟನೆಗಳು ನಡೆದಿವೆ. ಪೊಲೀಸರ ಈ ಬಗೆಯ ಕ್ರಮಗಳು ಯಾವುದೇ ಘೋರ ಅಪರಾಧಿಗಳು ಎಸಗಿದ ಕೃತ್ಯಕ್ಕಿಂತಲೂ ಕೆಟ್ಟದಾಗಿದೆ" ಎಂದು ಪತ್ರದಲ್ಲಿ ಹೇಳಲಾಗಿದೆ.
“ಉತ್ತರಪ್ರದೇಶ ಪೊಲೀಸರು ಮನೆಯ ಬಾಗಿಲು ಒದ್ದು ಅಲ್ಲಿಂದ ವಕೀಲರೊಬ್ಬರನ್ನು (ವಕೀಲರ ಉಡುಗೆ ತೊಟ್ಟಿದ್ದರು) ಎಳೆದೊಯ್ದಿದ್ದಾರೆ. ಜೊತೆಗೆ ನಿರ್ದಯವಾಗಿ ಅವರ ಮೇಲೆ ದಾಳಿ ನಡೆಸಿದ್ದಾರೆ. ಘಟನೆ ಕುರಿತ ವಿಡಿಯೋ ವೈರಲ್ ಆಗಿದ್ದು ಉತ್ತರ ಪ್ರದೇಶ ವಕೀಲರ ಸಂಘ ಹಲ್ಲೆ ಕುರಿತು ಕಳವಳ ವ್ಯಕ್ತಪಡಿಸಿದ್ದರೂ ಯೋಗಿ ಆದಿತ್ಯನಾಥ್ ಸರ್ಕಾರ ಇದನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಪೊಲೀಸ್ ಸಿಬ್ಬಂದಿ ಕೆಲ ಗೌಪ್ಯ ಉದ್ದೇಶಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಇಂತಹ ಕ್ರೂರ ಘಟನೆಗಳನ್ನು ನ್ಯಾಯಾಂಗ ಮತ್ತು ಸರ್ಕಾರ ನಿರ್ಲಕ್ಷಿಸಿದರೆ ವಕೀಲರ ಸಂಘಟನೆಗಳು ಬೀದಿಗೆ ಇಳಿಯದೇ ಬೇರೆ ದಾರಿ ಇರುವುದಿಲ್ಲ” ಎಂದು ಎಚ್ಚರಿಕೆ ನೀಡಲಾಗಿದೆ.
ಭೌತಿಕ ಕಲಾಪಗಳ ಆರಂಭಕ್ಕೆ ಕೋರಿಕೆ
ವರ್ಚುವಲ್ ಕಲಾಪಗಳನ್ನು ಪರಿಚಯಿಸಿ ಭೌತಿಕ ಕಲಾಪಗಳಿಗೆ ಇತಿಶ್ರೀ ಹಾಡುವ ಸರ್ಕಾರದ ಉದ್ದೇಶದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಿಸಿಐ “ವಿಳಂಬಕ್ಕೆ ಎಡೆ ಮಾಡಿಕೊಡದೆ ದೇಶದೆಲ್ಲೆಡೆ ಭೌತಿಕ ಕಲಾಪಗಳನ್ನು ಆರಂಭಿಸಬೇಕು” ಎಂದು ಒತ್ತಾಯಿಸಿದೆ.
ಜೊತೆಗೆ “ಭಾರತೀಯ ಕಾನೂನು ಸಂಸ್ಥೆಗಳು ಮತ್ತು ವಕೀಲರಿಗೆ ವಿದೇಶಗಳಲ್ಲಿ ಪ್ರಾಕ್ಟೀಸ್ ಮಾಡಲು ಯಾವುದೇ ಅವಕಾಶ ಇಲ್ಲದಿರುವಾಗ ದೇಶದಲ್ಲಿ ಪ್ರಾಕ್ಟೀಸ್ ಮಾಡಲು ವಿದೇಶಿ ಕಾನೂನು ಸಂಸ್ಥೆಗಳಿಗೆ ಅವಕಾಶ ಮಾಡಿಕೊಡುವ ವಿಚಾರ ಸಂಸತ್ತಿನಲ್ಲಿ ಎದ್ದಿರುವುದೇಕೆ?” ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದೆ.