ಸಾಂವಿಧಾನಿಕ ಹುದ್ದೆಯಲ್ಲಿರುವವರು ಹಾಗೂ ಕಾರ್ಯಾಂಗದ ಹಿರಿಯ ಮುಖ್ಯಸ್ಥರ ಸಾರ್ವಜನಿಕ ಭಾಷಣ ನಿಯಂತ್ರಿಸುವುದಕ್ಕಾಗಿ ಮಾರ್ಗಸೂಚಿ ಹೊರಡಿಸುವಂತೆ ಕೋರಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
ಅರ್ಜಿ ನಿರ್ದಿಷ್ಟ ವ್ಯಕ್ತಿಯ ವಿರುದ್ಧವಾಗಿರಬಾರದು; ಅದು ಎಲ್ಲರಿಗೂ ಅನ್ವಯವಾಗುವಂತೆ ಇರಬೇಕು ಎಂದು ಸಿಜೆಐ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ತಿಳಿಸಿತು.
ಸಾಂವಿಧಾನಿಕ ಹುದ್ದೆಗಳಲ್ಲಿರುವವರ ಸಾರ್ವಜನಿಕ ಭಾಷಣಗಳು ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಬಾರದು ಎಂದು ಘೋಷಿಸುವಂತೆ ಕೋರಿ ಸಾಮಾಜಿಕ ಹೋರಾಟಗಾರ್ತಿ ರೂಪ ರೇಖಾ ವರ್ಮಾ ಅವರು ಅರ್ಜಿ ಸಲ್ಲಿಸಿದ್ದರು.
ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ಸಿಜೆಐ ಸೂರ್ಯಕಾಂತ್ ಅರ್ಜಿಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಹೆಸರನ್ನು ಉಲ್ಲೇಖಿಸಬೇಕು ಎಂದರು.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ದೇಶದ ವಾತಾವರಣ ತ್ವೇಷಮಯವಾಗುತ್ತಿದೆ ಎಂದರು. ಆಗ ನ್ಯಾಯಾಲಯ ರಾಜಕೀಯ ಪಕ್ಷಗಳೇ ಸಂವಿಧಾನಾತ್ಮಕ ಮೌಲ್ಯಗಳನ್ನು ಪಾಲಿಸಿ ಸಹೋದರತ್ವವನ್ನು ಉತ್ತೇಜಿಸಬೇಕು ಎಂದು ಅಭಿಪ್ರಾಯಪಟ್ಟಿತು.
ಈ ಹಂತದಲ್ಲಿ ನ್ಯಾ. ನಾಗರತ್ನ ಅವರು "ಭಾಷಣದ ಮೂಲ ಆಲೋಚನೆ; ಅದಕ್ಕೆ ಕಡಿವಾಣ ಹಾಕಲು ಸಾಧ್ಯವೇ? ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾದ ಆಲೋಚನೆಗಳನ್ನು ಅಳಿಸಬೇಕು" ಎಂದು ಹೇಳಿದರು. “ಎಲ್ಲೆಡೆಯಿಂದಲೂ ನಿರ್ಬಂಧ ಇರಬೇಕು. ರಾಜಕೀಯ ನಾಯಕರು ದೇಶದಲ್ಲಿ ಭ್ರಾತೃತ್ವ ಬೆಳೆಸಬೇಕು. ನಾವು ಮಾರ್ಗಸೂಚಿ ಹಾಕಿಕೊಟ್ಟರೂ ಪಾಲಿಸುವವರು ಯಾರು?” ಎಂದು ಅವರು ಪ್ರಶ್ನಿಸಿದರು.
ಭಾಷಣದ ಮೂಲ ಆಲೋಚನೆ; ಅದಕ್ಕೆ ಕಡಿವಾಣ ಹಾಕಲು ಸಾಧ್ಯವೇ? ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ಧವಾದ ಆಲೋಚನೆಗಳನ್ನು ನಾವು ಅಳಿಸಬೇಕು.-ನ್ಯಾ. ಬಿ ವಿ ನಾಗರತ್ನ
ಮತ್ತೊಂದೆಡೆ ನ್ಯಾ. ಜೊಯಮಲ್ಯ ಬಾಗ್ಚಿ ಅವರು ಈಗಾಗಲೇ ನೀಡಿರುವ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಜವಾಬ್ದಾರಿ ರಾಜಕೀಯ ಪಕ್ಷಗಳದ್ದೇ ಆಗಿದೆ ಎಂದರು.
ರಾಜಕೀಯ ಏಕತಾನತೆಯು ದ್ವೇಷ ಭಾಷಣದಂತಹ ಪ್ರಮುಖ ವಿಷಯಗಳ ಮಹತ್ವವನ್ನು ಕುಂದಿಸಬಾರದು.ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ
ಸಾರ್ವಜನಿಕ ಸೇವಕರು ಸೇವಾ ನಿಯಮಗಳು ಹಾಗೂ ಸಂವಿಧಾನಿಕ ನೈತಿಕತೆಯ ಗಡಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪೀಠ ತಿಳಿಸಿತು. ಅಂತೆಯೇ ಅರ್ಜಿ ತಿದ್ದುಪಡಿಗೆ ಕಾಲಾವಕಾಶ ನೀಡಿದ ಅದು ವಿಚಾರಣೆ ಮುಂದೂಡಿತು.