Toll booth 
ಸುದ್ದಿಗಳು

ರಸ್ತೆ ಪೂರ್ಣಗೊಳ್ಳುವ ಮುನ್ನವೇ ಟೋಲ್ ಸಂಗ್ರಹ: ಎನ್ಎಚ್ಎಐಗೆ ಸುಪ್ರೀಂ ಛೀಮಾರಿ

ರಸ್ತೆ ಕಳಪೆಯಾಗಿದ್ದು, ಸಂಚಾರ ದಟ್ಟಣೆಯಿಂದ ಕೂಡಿದ್ದಾಗ ಜನ ಏಕೆ ಶುಲ್ಕ ಪಾವತಿಸಬೇಕು ಎಂದು ನ್ಯಾಯಾಲಯ ಪ್ರಶ್ನಿಸಿತು.

Bar & Bench

ರಾಷ್ಟ್ರೀಯ ಹೆದ್ದಾರಿ 544ರ ಕಾಮಗಾರಿ ಅಪೂರ್ಣವಾಗಿದ್ದರೂ, ಜೊತೆಗೆ ಅಲ್ಲಿ ಸಂಚಾರ ದಟ್ಟಣೆ ಅಧಿಕವಾಗಿದ್ದರೂ ಕೇರಳದ ತ್ರಿಶೂರ್‌ ಜಿಲ್ಲೆಯ ಪಲಿಯೆಕ್ಕರ ಟೋಲ್ ಪ್ಲಾಜಾದಲ್ಲಿ ಪ್ರಯಾಣಿಕರಿಂದ ಟೋಲ್‌ ಸಂಗ್ರಹಿಸುತ್ತಿರುವುದು ಏಕೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು (ಎನ್‌ಎಚ್‌ಎಐ) ಸುಪ್ರೀಂ ಕೋರ್ಟ್‌ ಗುರುವಾರ ಪ್ರಶ್ನಿಸಿದೆ [ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇನ್ನಿತರರು ಮತ್ತು ಒ ಜೆ ಜಗದೀಶ್‌ ಮತ್ತಿತರರ ನಡುವಣ ಪ್ರಕರಣ].

ಹೆದ್ದಾರಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ಮತ್ತು ಸಂಚಾರ ದಟ್ಟಣೆ ಅಧಿಕವಾಗಿರುವುದರಿಂದ ನಾಲ್ಕು ವಾರಗಳ ಕಾಲ ಟೋಲ್‌ ಪ್ಲಾಜಾದಲ್ಲಿ ಟೋಲ್‌ ಸಂಗ್ರಹಿಸದಂತೆ ಕೇರಳ ಹೈಕೋರ್ಟ್‌ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಎನ್‌ಎಚ್‌ಎಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ ಆರ್‌ ಗವಾಯಿ ಮತ್ತು ನ್ಯಾಯಮೂರ್ತಿ ಕೆ ವಿನೋದ್‌ ಚಂದ್ರನ್‌ ಅವರಿದ್ದ ಪೀಠ ಎನ್‌ಎಚ್‌ಎಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.

ಫೆಬ್ರವರಿಯಲ್ಲಿಯೇ ಪರಿಹಾರ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌ ಸೂಚಿಸಿದ್ದರೂ ಎನ್‌ಎಚ್‌ಎಐ ಕ್ರಮ ಕೈಗೊಂಡಿಲ್ಲ ಎಂದ ಸರ್ವೋಚ್ಚ ನ್ಯಾಯಾಲಯ ಅಧಿಕಾರಿಗಳು ಗುತ್ತಿಗೆದಾರರು ತಮ್ಮೊಳಗೆ ವ್ಯಾಜ್ಯ ನಡೆಸುವ ಬದಲು ಸಾರ್ವಜನಿಕರ ತೊಂದರೆ ಪರಿಹರಿಸುವತ್ತ ಗಮನ ಹರಿಸಬೇಕು ಎಂಬುದಾಗಿ ಕಿವಿಮಾತು ಹೇಳಿತು.

ತಾವೇ ಖುದ್ದು ಈ ರಸ್ತೆಯಲ್ಲಿ ಪಯಣಿಸಿದ್ದನ್ನು ನೆನಪಿಸಿಕೊಂಡ ಸಿಜೆಐ ಗವಾಯಿ ಅವರು ಅಲ್ಲಿನ ಸ್ಥಿತಿ ಅತೃಪ್ತಿಕರವಾಗಿದೆ ಎಂದು ಗಮನ ಸೆಳೆದರು. ಜನರಿಂದ ಟೋಲ್‌ ಸಂಗ್ರಹಿಸುವ ಎನ್‌ಎಚ್‌ಎಐ ಸೇವೆ ಒದಗಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ, ಹೆದ್ದಾರಿಯುದ್ದಕ್ಕೂ ಇರುವ ಸರ್ವೀಸ್‌ ರಸ್ತೆಗಳನ್ನು ನಿರ್ವಹಿಸದ ಕಾರಣ ದಟ್ಟಣೆ ಇನ್ನಷ್ಟು ಹದಗೆಡುತ್ತಿದೆ ಎಂದು ನ್ಯಾಯಮೂರ್ತಿ ಚಂದ್ರನ್ ಹೇಳಿದರು. ಅಲ್ಲಿನ ಸಂಚಾರ ದಟ್ಟಣೆಯಿಂದಾಗಿ ವ್ಯಕ್ತಿಯೊಬ್ಬರು ತಮ್ಮ ಮಾವನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಇದ್ದುದನ್ನು ಅವರು ಪ್ರಸ್ತಾಪಿಸಿದರು.

ಎನ್‌ಎಚ್‌ಎಐ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ವಾದ ಮಂಡಿಸಿದ ವಾದದಿಂದ ನ್ಯಾಯಾಲಯ ತೃಪ್ತವಾಗಲಿಲ್ಲ. ಅಲ್ಲದೆ ಎನ್‌ಎಚ್‌ಎಐ ಮತ್ತು ಗುತ್ತಿಗೆದಾರರ ನಡುವೆ ವ್ಯಾಜ್ಯಗಳಿದ್ದರೆ ಅದನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಿಕೊಳ್ಳಬೇಕೆ ವಿನಾ ರಸ್ತೆ ಬಳಸುವವರ ಶುಲ್ಕದಲ್ಲಿ ಅಲ್ಲ ಎಂದು ಸಿಜೆಐ ಎಚ್ಚರಿಕೆ ನೀಡಿದರು.

ನಂತರ ಎಸ್.ಜಿ. ಮೆಹ್ತಾ ಅವರು ಪ್ರಕರಣವನ್ನು ಆಗಸ್ಟ್ 18ಕ್ಕೆ (ಸೋಮವಾರ) ಮುಂದೂಡುವಂತೆ ವಿನಂತಿಸಿದರು. ಸಂಚಾರ ದಟ್ಟಣೆ ಇರುವ ವಿಭಜಕಗಳು ವಾಸ್ತವವಾಗಿ ಟೋಲ್ ಪ್ಲಾಜಾಕ್ಕೆ ಹತ್ತಿರದಲ್ಲಿವೆ. ಆದ್ದರಿಂದ ಅವುಗಳ ಹೊಣೆ ಎನ್‌ಎಚ್‌ಎಐನದ್ದಲ್ಲ ಎಂದು ಸಾಬೀತುಪಡಿಸುವ  ನಕ್ಷೆಗಳನ್ನು ಹಾಜರುಪಡಿಸುವುದಾಗಿ ಅವರು ತಿಳಿಸಿದರು.

ಈ ಹಂತದಲ್ಲಿ ಹೈಕೋರ್ಟ್‌ ಆದೇಶದಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದ ಪೀಠ ವಿಚಾರಣೆಯನ್ನು ಆಗಸ್ಟ್ 18ಕ್ಕೆ ಮುಂದೂಡಿತು.