ಉದ್ಯಮಿ ಗೌತಮ್ ಅದಾನಿಯ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (ಎಇಎಲ್) ವಿರುದ್ಧ ಯಾವುದೇ ಮಾನಹಾನಿ ವಿಷಯವನ್ನು ಪ್ರಕಟಿಸದಂತೆ ದೆಹಲಿ ನ್ಯಾಯಾಲಯ ಇತ್ತೀಚೆಗೆ ಹೊರಡಿಸಿದ ಆದೇಶವನ್ನು ಪತ್ರಕರ್ತರಾದ ಪರಂಜಯ್ ಗುಹಾ ಠಾಕುರ್ತಾ, ರವಿ ನಾಯರ್, ಅಬೀರ್ ದಾಸ್‌ಗುಪ್ತಾ, ಅಯಸ್ಕಾಂತ್ ದಾಸ್ ಹಾಗೂ ಆಯುಷ್ ಜೋಶಿ ಪ್ರಶ್ನಿಸಿದ್ದಾರೆ.
ಎಇಎಲ್ ವಿರುದ್ಧದ ವಸ್ತುವಿಷಯವನ್ನು ತೆಗೆದುಹಾಕಬೇಕು ಜೊತೆಗೆ ಪರಿಶೀಲಿಸದ ಮತ್ತು ಮಾನಹಾನಿಕರ ಮಾಹಿತಿ ಪ್ರಕಟಿಸಬಾರದು ಎಂದು ರೋಹಿಣಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಅನುಜ್ ಕುಮಾರ್ ಸಿಂಗ್ ಅವರು ಸೆಪ್ಟೆಂಬರ್ 6ರಂದು ಆದೇಶ ಹೊರಡಿಸಿದ್ದರು.
ಸಿವಿಲ್ ನ್ಯಾಯಾಲಯದ ಆದೇಶದ ವಿರುದ್ಧ ಪತ್ರಕರ್ತರು ಇದೀಗ ಜಿಲ್ಲಾ ನ್ಯಾಯಾಲಯದಲ್ಲಿ ಎರಡು ಪ್ರತ್ಯೇಕ ಮೇಲ್ಮನವಿಗಳನ್ನು ಸಲ್ಲಿಸಿದ್ದಾರೆ.
ಒಂದು ಮೇಲ್ಮನವಿಯನ್ನು ಠಾಕುರ್ತಾ ಸಲ್ಲಿಸಿದ್ದರೆ, ಇನ್ನೊಂದು ಮೇಲ್ಮನವಿಯನ್ನು ರವಿ ನಾಯರ್, ಅಬೀರ್ ದಾಸ್‌ಗುಪ್ತಾ, ಅಯಸ್ಕಾಂತ್ ದಾಸ್ ಮತ್ತು ಆಯುಷ್ ಜೋಶಿ ಒಟ್ಟಾಗಿ ಸಲ್ಲಿಸಿದ್ದಾರೆ.
ತಮ್ಮ ವರದಿಗಳು ನೇರವಾಗಿ ಎಇಎಲ್ ಸಂಸ್ಥೆಯನ್ನು ಉಲ್ಲೇಖಿಸಿಲ್ಲ ಬದಲಿಗೆ ಗೌತಮ್ ಅದಾನಿ ಅಥವಾ ಅದಾನಿ ಸಮೂಹವನ್ನಷ್ಟೇ ಉಲ್ಲೇಖಿಸಿವೆ. ಯಾವ ವಸ್ತುವಿಷಯ ಮಾನಹಾನಿಕರವಾಗಿದೆ ಎಂದು ನಿರ್ದಿಷ್ಟವಾಗಿ ತಿಳಿಸದೆ ಸಿವಿಲ್ ನ್ಯಾಯಾಲಯ ಸಾಮಾನ್ಯ ಮತ್ತು ಒಟ್ಟಾರೆಯಾದ ತಡೆಯಾಜ್ಞೆ ನೀಡಿದೆ ಎಂದು ಅರ್ಜಿದಾರರು ದೂರಿದ್ದಾರೆ.
ಕೆಲ ಪತ್ರಕರ್ತರು ಮತ್ತು ಹೋರಾಟಗಾರರು ಭಾರತ ವಿರೋಧಿ ಹಿತಾಸಕ್ತಿಗಳೊಂದಿಗೆ ಸೇರಿಕೊಂಡು ಕಂಪನಿ ಮತ್ತು ಬ್ರ್ಯಾಂಡ್ ಇಂಡಿಯಾ ವರ್ಚಸ್ಸಿಗೆ, ಬ್ರಾಂಡ್ ಈಕ್ವಿಟಿ ಹಾಗೂ ವಿಶ್ವಾಸಾರ್ಹತೆಗೆ ಭಾರೀ ಹಾನಿ ಉಂಟುಮಾಡಿದ್ದು ಆ ಮೂಲಕ ತನ್ನ ಪಾಲುದಾರರಿಗೆ ಶತಕೋಟಿ ಡಾಲರ್‌ಗಳಷ್ಟು ನಷ್ಟ ಉಂಟುಮಾಡಿದ್ದಾರೆ ಎಂದು ಗೌತಮ್ ಅದಾನಿಯವರ ಕಂಪನಿ ಈ ಹಿಂದೆ ಮಾನನಷ್ಟ ಮೊಕದ್ದಮೆ ಹೂಡಿತ್ತು.
ಪತ್ರಕರ್ತರು ಮತ್ತು ಹೋರಾಟಗಾರರ ಈ ಕ್ರಿಯೆಗಳಿಂದಾಗಿ ಆಸ್ಟ್ರೇಲಿಯಾದ ಪ್ರಮುಖ ಮೂಲಸೌಕರ್ಯ ಮತ್ತು ಇಂಧನ ಯೋಜನೆಗಳು ದೊರೆಯುವುದು ವಿಳಂಬವಾಗಿ ಹಣಕಾಸು ನಷ್ಟ ಉಂಟಾಯಿತು. ಪದೇ ಪದೆ ಎಇಎಲ್‌ನ ಜಾಗತಿಕ ವರ್ಚಸ್ಸಿಗೆ ಕಳಂಕ ತರುವ ಯತ್ನಗಳಿಂದಾಗಿ ನಿಧಿ ಸಂಗ್ರಹಿಸುವ ತನ್ನ ಸಾಮರ್ಥ್ಯಕ್ಕೆ ಅಡ್ಡಿಯುಂಟಾಗಿದ್ದು ಅಭಿವೃದ್ಧಿಯನ್ನು ವರ್ಷಗಳ ಹಿಂದಕ್ಕೆ ತಳ್ಳಿತು ಎಂದು ಅದು ದೂರಿತ್ತು.
ಪರಂಜಯ್ ಡಾಟ್ ಇನ್, ಅದಾನಿ ವಾಚ್ ಡಾಟ್ ಆರ್ಗ್ ಹಾಗೂ ಅದಾನಿ ಫೈಲ್ಸ್ ಡಾಟ್ ಕಾಂ ಡಾಟ್ ಎಯು ಜಾಲತಾಣಗಳಲ್ಲಿ ಪ್ರಕಟವಾದ ಲೇಖನಗಳು ಎಇಎಲ್ ಕಂಪೆನಿ ಮತ್ತು ಅದರ ಅಧ್ಯಕ್ಷ ಗೌತಮ್ ಅದಾನಿ ಅವರನ್ನು ಪದೇ ಪದೇ ಗುರಿಯಾಗಿಸಿಕೊಂಡಿವೆ ಎಂದು ದೂರಿತು.
ವಾದ ಆಲಿಸಿದ್ದ ಸಿವಿಲ್ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ಕೋರಿ ಎಇಎಲ್ ಮಂಡಿಸಿದ್ದ ವಾದ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ತೀರ್ಪು ನೀಡಿತ್ತು.