Jharkhand High Court  
ಸುದ್ದಿಗಳು

ಪಾರಸನಾಥ್ ಬೆಟ್ಟ ಜೈನರಿಗೆ ಪವಿತ್ರ; ಮಾಂಸಾಹಾರ, ಪ್ರವಾಸೋದ್ಯಮ ನಿಷೇಧ ಜಾರಿ: ಜಾರ್ಖಂಡ್ ಹೈಕೋರ್ಟ್

ವಿಧಿಸಲಾದ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಬೆಟ್ಟದಲ್ಲಿ ಗೃಹರಕ್ಷಕರ ಸಂಖ್ಯೆ ಹೆಚ್ಚಿಸುವಂತೆ ನ್ಯಾಯಾಲಯ ಗಿರಿದಿಹ್ ಪೊಲೀಸ್ ವರಿಷ್ಠಾಧಿಕಾರಿಗೆ ಆದೇಶಿಸಿತು.

Bar & Bench

ಜೈನ ಸಮುದಾಯಕ್ಕೆ ಅಪಾರ ಧಾರ್ಮಿಕ ಮಹತ್ವವಿರುವ ಗಿರಿದಿಹ್‌ ಜಿಲ್ಲೆಯ ಪಾರಸನಾಥ್‌ ಬೆಟ್ಟದ ಪಾವಿತ್ರ್ಯ ಕಾಪಾಡುವಂತೆ ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ರಾಜ್ಯ ಸರ್ಕಾರಕ್ಕೆ ಹಲವಾರು ನಿರ್ದೇಶನ ನೀಡಿದೆ.

ಬೆಟ್ಟದ ಮೇಲೆ ಪ್ರಾಣಿಗಳಿಗೆ ಹಾನಿಯುಂಟು ಮಾಡುವುದನ್ನು ನಿಷೇಧಿಸುವ ಕೇಂದ್ರ ಸರ್ಕಾರದ ಅಧಿಸೂಚನೆ ಮತ್ತು ಬೆಟ್ಟದ ಮೇಲೆ ಮದ್ಯ ಮತ್ತಿತರ ಮಾದಕ ವಸ್ತುಗಳ ಮಾರಾಟ ಅಥವಾ ಸೇವನೆ, ಮಾಂಸಾಹಾರ ಬಡಿಸುವುದು ಮತ್ತು ಪ್ರಾಣಿಗಳಿಗೆ ಹಾನಿ ಎಸಗುವುದನ್ನು ನಿಷೇಧಿಸುವ ಕಚೇರಿ ಜ್ಞಾಪನಾ ಪತ್ರವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎಂ.ಎಸ್. ರಾಮಚಂದ್ರ ರಾವ್ ಮತ್ತು ನ್ಯಾಯಮೂರ್ತಿ  ದೀಪಕ್ ರೋಷನ್ ಅವರಿದ್ದ ಪೀಠ  ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಬೆಟ್ಟದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಿಲ್ಲಿಸುವಂತೆಯೂ ಅದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಬೆಟ್ಟದ ಪಾವಿತ್ರ್ಯವನ್ನು ರಕ್ಷಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಪಿಐಎಲ್‌ ಸಲ್ಲಿಸಲಾಗಿತ್ತು.

ಧಾರ್ಮಿಕ ಪ್ರಾಮುಖ್ಯತೆ ಹೊಂದಿರುವ ಸ್ಥಳಗಳಲ್ಲಿ ಕೆಲವು ಆಚರಣೆಗಳು ಅಥವಾ ಚಟುವಟಿಕೆಗಳ ಮೇಲಿನ ನಿರ್ಬಂಧಗಳು ಹೊಸ ವಿದ್ಯಮಾನವಲ್ಲ ಎಂದು ನ್ಯಾಯಾಲಯ ಹೇಳಿದೆ. ಅಂತಹ ನಿರ್ಬಂಧಗಳನ್ನು ಹಲವಾರು ಪ್ರಕರಣಗಳಲ್ಲಿ ನ್ಯಾಯಾಲಯಗಳು ಎತ್ತಿಹಿಡಿದಿವೆ ಎಂದು ಅದು ಹೇಳಿದೆ.

ಕೇಂದ್ರ ಸರ್ಕಾರದ ಆದೇಶ ನೀಡಿರುವುದರಿಂದ, ರಾಜ್ಯ ಸರ್ಕಾರ ಬೆಟ್ಟವನ್ನು ಪ್ರವಾಸಿ ಸ್ಥಳವಾಗಿ ಪ್ರಚಾರ ಮಾಡಲು ಅಥವಾ ಅಲ್ಲಿ ಗಣಿಗಾರಿಕೆ ಚಟುವಟಿಕೆಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ. ಬೆಟ್ಟದ ಮೇಲಿರುವ ಪ್ರಾಥಮಿಕ ಶಾಲೆಗಳು ವಿದ್ಯಾರ್ಥಿಗಳಿಗೆ ಮಾಂಸಾಹಾರ ಬಡಿಸುವಂತಿಲ್ಲ. ಪ್ರಾಣಿಗಳಿಗೆ ಹಾನಿ ಮಾಡುವುದನ್ನು ಕಚೇರಿ ಜ್ಞಾಪನಾ ಪತ್ರ ನಿಷೇಧಿಸಿರುವುದರಿಂದ ಬೆಟ್ಟದ ಮೇಲೆ ಪ್ರಾಣಿಗಳ ಬೇಟೆ ಮತ್ತು ವಧೆಗೆ ರಾಜ್ಯ ಸರ್ಕಾರ ಅವಕಾಶ ನೀಡುವಂತಿಲ್ಲ ಎಂದ ನ್ಯಾಯಾಲಯ ವಿಧಿಸಲಾದ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಬೆಟ್ಟದಲ್ಲಿ ಗೃಹರಕ್ಷಕರ ಸಂಖ್ಯೆ ಹೆಚ್ಚಿಸುವಂತೆ ನ್ಯಾಯಾಲಯ ಗಿರಿದಿಹ್ ಪೊಲೀಸ್ ವರಿಷ್ಠಾಧಿಕಾರಿಗೆ ಆದೇಶಿಸಿತು.