ಸಂಸತ್ತಿನ ಭದ್ರತೆ ಉಲ್ಲಂಘಿಸಿದ್ದ ಪ್ರಕರಣದ ಆರೋಪಿಗಳಾದ ನೀಲಂ ಆಜಾದ್ ಮತ್ತು ಮಹೇಶ್ ಕುಮಾವತ್ ಅವರಿಗೆ ದೆಹಲಿ ಹೈಕೋರ್ಟ್ ಬುಧವಾರ ಷರತ್ತು ಬದ್ಧ ಜಾಮೀನು ನೀಡಿದೆ. 2023ರಲ್ಲಿ ಘಟನೆ ನಡೆದಿತ್ತು.
ನ್ಯಾಯಮೂರ್ತಿಗಳಾದ ಸುಬ್ರಮೋಣಿಯಂ ಪ್ರಸಾದ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರಿದ್ದ ಪೀಠ ಆದೇಶ ಹೊರಡಿಸಿದೆ.
ಜಾಮೀನು ಮಂಜೂರು ಮಾಡುವ ವೇಳೆ ನ್ಯಾಯಾಲಯವು, ₹50,000 ಭದ್ರತೆ ನೀಡಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮಗಳಿಗೆ ಹೇಳಿಕೆ ನೀಡುವಂತಿಲ್ಲ. ದೆಹಲಿ ತೊರೆಯುವಂತಿಲ್ಲ. ಪ್ರತಿ ಸೋಮವಾರ ಬುಧವಾರ ಮತ್ತು ಶುಕ್ರವಾರ ತನಿಖಾ ಸಂಸ್ಥೆ ಎದುರು ಹಾಜರಾಗಬೇಕು ಎಂದು ಷರತ್ತುಗಳನ್ನು ವಿಧಿಸಿದೆ.
ಈ ಹಿಂದೆ ಆಜಾದ್ ಅವರ ಜಾಮೀನು ಅರ್ಜಿಯನ್ನು ಪಟಿಯಾಲ ಹೌಸ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (ASJ) ಹರ್ದೀಪ್ ಕೌರ್ ತಿರಸ್ಕರಿಸಿದ್ದರು.
2023ರ ಡಿಸೆಂಬರ್ 13ರಂದು ಲೋಕಸಭಾ ಕಲಾಪದ ಸಮಯದಲ್ಲಿ, ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳು ಸಂದರ್ಶಕರ ಗ್ಯಾಲರಿಯಿಂದ ಹಳದಿ ಹೊಗೆ ಸೂಸುವ ಡಬ್ಬಿಗಳೊಂದಿಗೆ ಅಧಿವೇಶನ ನಡೆಯುತ್ತಿದ್ದ ಜಾಗಕ್ಕೆ ನೆಗೆದಿದ್ದರು. ಇಬ್ಬರನ್ನೂ ದೆಹಲಿ ಪೊಲೀಸರು ಬಂಧಿಸಿದ್ದರು.
ಸಂಸತ್ತಿನ ಕಟ್ಟಡದ ಹೊರಗೆ ಹಳದಿ ಹೊಗೆ ಸೂಸುತ್ತಿದ್ದ ಡಬ್ಬಿಯೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ಅಮೋಲ್ ಶಿಂಧೆ ಮತ್ತು ನೀಲಂ ಎಂಬ ಇನ್ನಿಬ್ಬರನ್ನು ಸಹ ಬಂಧಿಸಲಾಗಿತ್ತು. 'ಮಾಸ್ಟರ್ ಮೈಂಡ್' ಲಲಿತ್ ಝಾನನ್ನು ಡಿಸೆಂಬರ್ 14ರಂದು ಪೊಲೀಸರು ಬಂಧಿಸಿದ್ದರು. ಎನ್‌ಐಎ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿದ್ದರಿಂದ ಅವರು ಹೈಕೋರ್ಟ್ ಮೊರೆ ಹೋಗಿದ್ದರು.