ಟಿಆರ್‌ಪಿ ಹಗರಣದ ಪ್ರಮುಖ ಆರೋಪಿ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್‌ನ (ಬಾರ್ಕ್) ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾರ್ಥೊ ದಾಸ್‌ಗುಪ್ತ ಅವರನ್ನು ಮುಂಬೈನ ಜೆಜೆ ಆಸ್ಪತ್ರೆಯಿಂದ ತಲೋಜಾ ಜೈಲಿಗೆ ವರ್ಗಾಯಿಸುವ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಬಾಂಬೆ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಸಂಜೆ 7 ಗಂಟೆಗೆ ನ್ಯಾಯಮೂರ್ತಿ ಪಿಡಿ ನಾಯಕ್ ಅರ್ಜಿಯ ವಿಚಾರಣೆ ನಡೆಸಿದರು. ಜೆಜೆ ಆಸ್ಪತ್ರೆಯ ಡಿಸ್ಚಾರ್ಜ್ ವಿವರಗಳಿಗೆ ಅನುಸಾರವಾಗಿ ತಲೋಜ ವೈದ್ಯಾಧಿಕಾರಿಗಳು ದಾಸ್‌ಗುಪ್ತ ಅವರಿಗೆ ಚಿಕಿತ್ಸೆ ನೀಡುವುದಾಗಿ ತಿಳಿಸಿದ್ದಾರೆ ಎಂದು ಮುಖ್ಯ ಸರ್ಕಾರಿ ಅಭಿಯೋಜಕ ದೀಪಕ್ ಠಾಕ್ರೆ ನ್ಯಾಯಾಲಯಕ್ಕೆ ಭರವಸೆ ನೀಡಿದ ನಂತರ ನ್ಯಾಯಾಲಯ ಈ ನಿರ್ಧಾರ ಕೈಗೊಂಡಿತು.
ಹಗರಣಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ದಾಸ್‌ಗುಪ್ತ ಅವರ ಜಾಮೀನು ಅರ್ಜಿಯನ್ನು ಮುಂಬೈನ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದ ಬಳಿಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ದಾಸ್‌ಗುಪ್ತ ಅವರಿಗೆ ಜಾಮೀನು ನೀಡಬೇಕೆಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.
ದಾಸ್‌ಗುಪ್ತ ಅನಾರೋಗ್ಯಪೀಡಿತರಾಗಿದ್ದಾರೆ ಎಂಬುದಕ್ಕೆ ಸಂಬಂಧಿಸಿದ ವೀಡಿಯೊ ಪ್ರದರ್ಶಿಸಿದ ಅವರ ಪರ ವಕೀಲ ಅರ್ಜುನ್ ಸಿಂಗ್ ಠಾಕೂರ್ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲು ಮನವಿ ಮಾಡಿದರು. “ಪಾರ್ಥೋ ಅವರನ್ನು ಸ್ಟ್ರೆಚರ್‌ನಲ್ಲಿ ಕರೆದೊಯ್ಯಲಾಗುತ್ತಿದೆ. ಅವರು ಸ್ವಸ್ಥರಾಗಿದ್ದರೆ ಹೀಗೆ ಸ್ಟ್ರೆಚರ್‌ನಲ್ಲಿ ಕರೆದೊಯ್ಯುವ ಅಗತ್ಯ ಇರಲಿಲ್ಲ” ಎಂದು ಅವರು ಹೇಳಿದರು. ಅಲ್ಲದೆ ದಾಸ್‌ಗುಪ್ತ ಅವರನ್ನು ಖಾಸಗಿ ಆಸ್ಪತ್ರೆಗೆ ವರ್ಗಾಯಿಸಬೇಕು, ಮತ್ತೆ ತಲೋಜಾ ಜೈಲಿಗೆ ಕರೆದೊಯ್ದರೆ ಮನವಿ ಫಲಪ್ರದವಾಗದು” ಎಂದರು.
ಆದರೆ ಮನವಿಯನ್ನು ವಿರೋಧಿಸಿದ ಠಾಕ್ರೆ, “ತಲೋಜಾ ಜೈಲಿನಿಂದ ದಾಸ್‌ಗುಪ್ತ ಅವರನ್ನು ಜೆಜೆ ಆಸ್ತತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದರಿಂದ ಅವರನ್ನು ಮತ್ತೆ ಜೈಲಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ವಿವರಿಸಿದರು. ಜೈಲಿನ ವೈದ್ಯಾಧಿಕಾರಿಗಳೇ ಅವರನ್ನು ಪರೀಕ್ಷೆಗೆ ಒಳಪಡಿಸುತ್ತಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಜೆಜೆ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು ಎಂದು ಅವರು ಹೇಳಿದರು.
ಠಾಕ್ರೆ ಅವರ ವಾದ ಆಲಿಸಿದ ಬಳಿಕ ನ್ಯಾಯಾಲಯ ಮಧ್ಯಪ್ರವೇಶಿಸಲು ನಿರಾಕರಿಸಿತು. ಆದರೆ ದಾಸ್‌ಗುಪ್ತ ಅವರಿಗೆ ಸಂಬಂಧಿಸಿದ ಜೆಜೆ ಆಸ್ಪತ್ರೆಯ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ಮತ್ತು ತಲೋಜಾ ಜೈಲಿನಲ್ಲಿ ಸೋಮವಾರ ನಡೆಯಲಿರುವ ಪರೀಕ್ಷೆಯ ವರದಿಗಳನ್ನು ಸಲ್ಲಿಸಬೇಕೆಂದು ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿತು ಮತ್ತೆ ಸೋಮವಾರ (ಜ 25) ಅರ್ಜಿಯ ವಿಚಾರಣೆ ನಡೆಯಲಿದೆ.