ಪೆಗಸಸ್ ಸ್ಪೈವೇರ್‌ನಿಂದ ನನ್ನ ಫೋನ್ ಹ್ಯಾಕ್ ಮಾಡಲಾಗಿದೆ ಎಂದು ನಂಬಲು ಕಾರಣಗಳಿವೆ ಎಂಬುದಾಗಿ ನಾಗಪುರ ಮೂಲದ ವಕೀಲರೊಬ್ಬರು ದೂರಿದ್ದು ಈ ಸಂಬಂಧ ಪೆಗಸಸ್ ಗೂಢಚರ್ಯೆ ಹಗರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ನೇಮಿಸಿರುವ ತಾಂತ್ರಿಕ ಸಮಿತಿಗೆ ಪತ್ರ ಬರೆದಿದ್ದಾರೆ.
ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಆರೋಪಿಗಳಾಗಿರುವ ಸುರೇಂದ್ರ ಗಾಡ್ಲಿಂಗ್, ಸುಧೀರ್ ಧಾವಲೆ, ಮಹೇಶ್ ರಾವುತ್, ಶೋಮಾ ಸೇನ್, ರಮೇಶ್ ಗಾಯ್ಚೊರ್ ಮತ್ತು ಸಾಗರ್ ಗೋರ್ಖೆ ಅವರ ಪರವಾಗಿ ವಾದ ಮಂಡಿಸುತ್ತಿರುವ ವಕೀಲ ನಿಹಾಲ್ ಸಿಂಗ್ ರಾಥೋಡ್ ಅವರು ತನಿಖಾ ಸಮಿತಿಯ ಎದುರು ಹಾಜರಾಗಿ ತಮ್ಮ ಫೋನ್ ಒಪ್ಪಿಸುವುದಾಗಿ ತಿಳಿಸಿದ್ದಾರೆ.
ವಾಟ್ಸಾಪ್ ಅಪ್ಲಿಕೇಷನ್ ಪ್ರವೇಶಿಸುವ ಮೂಲಕ ಪೆಗಸಸ್ ಬಳಸಿ ನನ್ನ ಮೊಬೈಲ್ ಫೋನ್ ಹ್ಯಾಕ್ ಮಾಡಲಾಗಿದೆ ಎಂದು ನಂಬಲು ನನಗೆ ಹಲವು ಕಾರಣಗಳಿವೆ. ತನ್ನ ಫೋನ್ ಸ್ಪೈವೇರ್‌ಗೆ ತುತ್ತಾಗಿದೆ ಎಂದು ಖುದ್ದು ವಾಟ್ಸಾಪ್‌ನಿಂದ ಅಧಿಕೃತ ಸಂದೇಶ ಬಂದಿದೆ. ಆ ಸಂದೇಶ ವಾಟ್ಸಾಪ್ ಮೂಲಕವೇ ಬಂದಿತ್ತು. ಅದನ್ನು ನನ್ನ ಬಳಿ ಉಳಿಸಿಕೊಂಡಿದ್ದೇನೆ” ಎಂದು ಅವರು ತಿಳಿಸಿದ್ದಾರೆ.
ತಮ್ಮ ಸಾಧನಗಳು ಪೆಗಸಸ್ ಸ್ಪೈವೇರ್ ದಾಳಿಗೆ ತುತ್ತಾಗಿವೆ ಎಂಬ ಶಂಕೆ ಇರುವವರು ಸೂಕ್ತ ಕಾರಣಗಳೊಂದಿಗೆ ವಿವರವನ್ನು ಒದಗಿಸುವಂತೆ ಪೆಗಸಸ್ ಗೂಢಚರ್ಯೆ ಹಗರಣದ ತನಿಖೆಗಾಗಿ ಸುಪ್ರೀಂಕೋರ್ಟ್ ರಚಿಸಿರುವ ತಾಂತ್ರಿಕ ಸಮಿತಿ ಇತ್ತೀಚೆಗೆ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿತ್ತು. ಈ ಹಿನ್ನೆಲೆಯಲ್ಲಿ ವಕೀಲರು ಪತ್ರ ಬರೆದಿದ್ದಾರೆ. ಮೂವರು ಸ್ವತಂತ್ರ ತಜ್ಞರು ಮತ್ತು ಅವರ ಅಧೀನದಲ್ಲಿ ತಾಂತ್ರಿಕ ಸಮಿತಿಗಳು ಹಗರಣದ ತನಿಖೆ ನಡೆಸಬೇಕು ಎಂದು ಕಳೆದ ವರ್ಷ ಅಕ್ಟೋಬರ್ 27ರಂದು ಸುಪ್ರೀಂಕೋರ್ಟ್ ಆದೇಶಿಸಿತ್ತು.