Pending Cases
Pending Cases 
ಸುದ್ದಿಗಳು

ಬಾಕಿ ಉಳಿದ ಪ್ರಕರಣಗಳು: ಸಿವಿಲ್, ಕ್ರಿಮಿನಲ್ ಎರಡರಲ್ಲೂ ಬೆಂಗಳೂರು ನಗರ ಮೊದಲು; ಯಾದಗಿರಿಯಲ್ಲಿ ಕಡಿಮೆ ಮೊಕದ್ದಮೆಗಳು

Ramesh DK

ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿರುವ ಪ್ರಕರಣಗಳ ಕುರಿತು ವಿವರ ನೀಡುವ ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಜಾಲ (ಎನ್‌ಜೆಡಿಜಿ) ಮಾಹಿತಿಯಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಅತಿಹೆಚ್ಚು ಇದೆ. ಇದಕ್ಕೆ ವ್ಯತಿರಿಕ್ತವಾಗಿ ಯಾದಗಿರಿ, ಗದಗ ಹಾಗೂ ದಾವಣಗೆರೆ ಜಿಲ್ಲೆಗಳ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೇ ಇರುವ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ.

ಇ- ನ್ಯಾಯಾಲಯಗಳ ಸಮಗ್ರ ಮಿಷನ್ ಮೋಡ್ ಯೋಜನೆಯ ಭಾಗವಾಗಿರುವ ಎನ್‌ಜೆಡಿಜಿ, ಪ್ರಕರಣಗಳನ್ನು ಗುರುತಿಸಲು, ನಿರ್ವಹಿಸಲು ಮತ್ತು ಅವುಗಳ ವಿಳಂಬ ತಪ್ಪಿಸಲು ಸಹಕಾರಿಯಾಗುವಂತಹ ಮಾಹಿತಿಗಳನ್ನು ಆನ್ ಲೈನ್ ಮೂಲಕ ಒದಗಿಸುತ್ತದೆ. ಅಲ್ಲದೆ ನೀತಿನಿರೂಪಣೆ, ನ್ಯಾಯಾಲಯಗಳ ಕಾರ್ಯಕ್ಷಮತೆಯ ಮೇಲ್ವಿಚಾರಣೆಗೆ ಕೂಡ ಗ್ರಿಡ್ ಸಹಕಾರಿಯಾಗಿದೆ. ಬಾಲಾಪರಾಧದಿಂದ ಹಿಡಿದು ಎಲ್ಲ ಬಗೆಯ ಪ್ರಕರಣಗಳ ಮಾಹಿತಿ ಇದರಲ್ಲಿ ಲಭ್ಯ.

ಬೆಂಗಳೂರು ನಗರದಲ್ಲಿ 2,97,573 ಪ್ರಕರಣಗಳು ಬಾಕಿ ಉಳಿದಿದ್ದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1,32,158 ಪ್ರಕರಣಗಳು ನ್ಯಾಯಾಲಯಗಳಲ್ಲಿವೆ. ಇದನ್ನು ಹೊರತುಪಡಿಸಿದರೆ ನ್ಯಾಯಾಲಯಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ಬಾಕಿ ಇರುವ ಜಿಲ್ಲೆ ಬೆಳಗಾವಿ. ಅಲ್ಲಿ 1,23,700 ಪ್ರಕರಣಗಳು ತೀರ್ಮಾನವಾಗಬೇಕಿದೆ. ಬೆಂಗಳೂರು ಗ್ರಾಮಾಂತರ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರು ನಗರದಲ್ಲಿ ಇತ್ಯರ್ಥವಾಗಬೇಕಿರುವ ಪ್ರಕರಣಗಳ ಸಂಖ್ಯೆ ದುಪ್ಪಟ್ಟಿದೆ ಎಂಬುದು ಗಮನಿಸಬೇಕಾದ ಸಂಗತಿ.

ಆದರೆ ಯಾದಗಿರಿ ಜಿಲ್ಲೆಯಲ್ಲಿ ಅತಿಕಡಿಮೆ ಎಂದರೆ 14,978 ಪ್ರಕರಣಗಳಷ್ಟೇ ಬಾಕಿ ಇವೆ. ನಂತರದ ಸ್ಥಾನದಲ್ಲಿ ಕೊಡಗು ಜಿಲ್ಲೆಯಿದ್ದು ಅಲ್ಲಿ 16429 ಪ್ರಕರಣಗಳು ಮತ್ತು ಮೂರನೇ ಸ್ಥಾನದಲ್ಲಿರುವ ಗದಗ ಜಿಲ್ಲೆಯಲ್ಲಿ 16498 ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕಿದೆ.

ಕ್ರಿಮಿನಲ್ ಪ್ರಕರಣಗಳ ವಿವರ: ಅತಿ ಹೆಚ್ಚು ಕ್ರಿಮಿನಲ್ ಪ್ರಕರಣಗಳು ತೀರ್ಮಾನವಾಗದೇ ಉಳಿದಿರುವ ಜಿಲ್ಲೆಗಳಲ್ಲಿ ಬೆಂಗಳೂರು ನಗರವೇ (ಪ್ರಕರಣಗಳು: 1,96,365) ಮುಂಚೂಣಿಯಲ್ಲಿದೆ. ನಂತರದ ಸ್ಥಾನ ಮೈಸೂರಿನದ್ದು (60,846). ಬೆಳಗಾವಿ ಜಿಲ್ಲೆ ಮೂರನೇ ಸ್ಥಾನದಲ್ಲಿದೆ (56,745). ಅತಿ ಕಡಿಮೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವ ಜಿಲ್ಲೆಗಳ ಮಾಹಿತಿ ಹೀಗಿದೆ: ಗದಗ-7,377, ಯಾದಗಿರಿ- 8,658, ಹಾಗೂ ಚಾಮರಾಜನಗರ 9,858.

ಸಿವಿಲ್ ಮೊಕದ್ದಮೆಗಳ ಮಾಹಿತಿ: ಅತಿ ಹೆಚ್ಚು ಸಿವಿಲ್ ಪ್ರಕರಣಗಳು ಬಾಕಿ ಉಳಿದಿರುವ ಜಿಲ್ಲೆಗಳಲ್ಲೂ ಬೆಂಗಳೂರು ನಗರ (1,01,208), ಬೆಂಗಳೂರು ಗ್ರಾಮಾಂತರ (79,476) ಹಾಗೂ ಬೆಳಗಾವಿ ಜಿಲ್ಲೆಗಳೇ (66,955) ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದಿವೆ. ಕೊಡಗು (4,905), ಯಾದಗಿರಿ (6,410) ಹಾಗೂ ಗದಗ ಜಿಲ್ಲೆಗಳಲ್ಲಿ (9,121) ಅತಿ ಕಡಿಮೆ ಸಿವಿಲ್ ದಾವೆಗಳು ಇತ್ಯಾರ್ಥವಾಗದೇ ಉಳಿದಿವೆ.

ಅಂದಹಾಗೆ, ಕರ್ನಾಟಕದಲ್ಲಿ ಒಟ್ಟಾರೆಯಾಗಿ 1,7,20,206 ಪ್ರಕರಣಗಳು ಬಾಕಿ ಉಳಿದಿದ್ದು ಇತ್ಯರ್ಥವಾಗಬೇಕಿರುವ ಕ್ರಿಮಿನಲ್ ಪ್ರಕರಣಗಳ ಸಂಖ್ಯೆ 8,97,625ರಷ್ಟಿದೆ. ಜೊತೆಗೆ 8,22,581 ಸಿವಿಲ್ ಪ್ರಕರಣಗಳು ನ್ಯಾಯಾಲಯಗಳ ತೀರ್ಪನ್ನು ಎದುರು ನೋಡುತ್ತಿವೆ.

ಆಧಾರ: ಈ ಮಾಹಿತಿಯು 13, ಅಕ್ಟೋಬರ್ 2020ರ ಎನ್‌ಜೆಡಿಜಿ ದತ್ತಾಂಶ ಆಧಾರಿತ.