Srinagar Bench, Jammu & Kashmir and Ladakh High Court 
ಸುದ್ದಿಗಳು

ಮುಫತ್ತಾಗಿ ಜಮೀನು ಆಕ್ರಮಿಸಿಕೊಂಡವರಿಗೆ ಅದರ ಮೇಲೆ ಹಕ್ಕು ಇರುವುದಿಲ್ಲ: ಕಾಶ್ಮೀರ ಹೈಕೋರ್ಟ್

ವ್ಯಕ್ತಿ ಅನಾಮತ್ತಾಗಿ ಭೂಮಿ ಆಕ್ರಮಿಸಿದ್ದರೆ ಆಗ ಆ ಜಾಗಕ್ಕೆ ಆತನ ಆರಂಭಿಕ ಪ್ರವೇಶವೇ ಪ್ರಶ್ನಾರ್ಹವಾಗುತ್ತದೆ ಮತ್ತು ಆಸ್ತಿಯಲ್ಲಿ ಆತನಿಗೆ ಯಾವುದೇ ಹಕ್ಕು ಇರುವುದಿಲ್ಲ ಎಂದಿತು ಪೀಠ.

Bar & Bench

ವ್ಯಕ್ತಿಯೊಬ್ಬ ಜಮೀನನ್ನು ಮುಫತ್ತಾಗಿ ಆಕ್ರಮಿಸಲು ಬಿಟ್ಟ ಮಾತ್ರಕ್ಕೆ ಆತ ಆ ಆಸ್ತಿಯ ಒಡೆಯನಾಗುವುದಿಲ್ಲ ಎಂದು ಜಮ್ಮು ಕಾಶ್ಮೀರ ಹಾಗೂ ಲಡಾಖ್‌ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ [ಎಂ/ಎಸ್‌ ಎಂ ಆರ್‌ ಇಂಡಸ್ಟ್ರೀಸ್‌ ಮತ್ತು ಕಾಶ್ಮೀರ ಸರ್ಕಾರ ಇನ್ನಿತರರ ನಡುವಣ ಪ್ರಕರಣ]

ಮರಿಯಾ ಮಾರ್ಗರಿಟಾ ಸಿಕ್ವೇರಾ ಫೆರ್ನಾಂಡಿಸ್ ಮತ್ತಿತರರು ಹಾಗೂ ಎರಾಸ್ಮೊ ಜಾಕ್ ಡಿ ಸಿಕ್ವೇರಾ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ 2012ರಲ್ಲಿ ನೀಡಿದ್ದ ತೀರ್ಪಿನಲ್ಲಿ ಈ ವಿಚಾರ ಸ್ಪಷ್ಟಗೊಳಿಸಲಾಗಿದೆ ಎಂದು ನ್ಯಾಯಮೂರ್ತಿ ಸಂಜಯ್ ಧರ್ ವಿವರಿಸಿದರು.

ವ್ಯಕ್ತಿ ಮುಫತ್ತಾಗಿ ಆವರಣ ಆಕ್ರಮಿಸಿಕೊಂಡಿದ್ದರೆ ಆಗ ಆವರಣಕ್ಕೆ ಆತನ ಆರಂಭಿಕ ಪ್ರವೇಶವೇ ಪ್ರಶ್ನಾರ್ಹವಾಗುತ್ತದೆ ಮತ್ತು ಆಸ್ತಿಯಲ್ಲಿ ಆತನಿಗೆ ಯಾವುದೇ ಹಕ್ಕು ಇರುವುದಿಲ್ಲ ಎಂದು ಪೀಠ ನುಡಿಯಿತು.

"ಒಬ್ಬ ವ್ಯಕ್ತಿ ಮುಫತ್ತಾಗಿ ಆಸ್ತಿ ಆಕ್ರಮಿಸಲು ಬಿಟ್ಟ ಮಾತ್ರಕ್ಕೆ ಆ ವ್ಯಕ್ತಿ ಆಸ್ತಿಯ ಮೇಲೆ ಯಾವುದೇ ಒಡೆತನದ ಹಕ್ಕು ಪಡೆಯುವುದಿಲ್ಲ ಹಾಗೂ ಅಂತಹ ವ್ಯಕ್ತಿಯ ಆಸ್ತಿಯ ಸ್ವಾಧೀನದ ರಕ್ಷಣೆಯನ್ನು ನ್ಯಾಯಾಲಯಗಳು ಸಮರ್ಥಿಸುವುದಿಲ್ಲ. ತನ್ನ ಪರವಾಗಿ ಮಾನ್ಯತೆ ಪಡೆದ ಬಾಡಿಗೆ ಒಪ್ಪಂದ, ಗುತ್ತಿಗೆ ಕರಾರು ಇಲ್ಲವೇ ಪರವಾನಗಿ ಒಪ್ಪಂದ ಇರುವ ವ್ಯಕ್ತಿಗಷ್ಟೇ ರಕ್ಷಣೆ ನೀಡಬಹುದು" ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಶ್ನಾರ್ಹ ರೀತಿಯಲ್ಲಿ ಆಸ್ತಿ ಪಡೆದು ಸ್ವಲ್ಪ ಸಮಯದವರೆಗೆ ಮುಫತ್ತಾಗಿ ಅದನ್ನು ಅನುಭವಿಸಿದ ವ್ಯಕ್ತಿ, ಆತ ಎಷ್ಟು ಸಮಯದವರೆಗೂ ಆಸ್ತಿ ಅನುಭವಿಸಿದ್ದರೂ ಅದನ್ನು ಲೆಕ್ಕಿಸದೆ ಆತನಿಗೆ ಆಸ್ತಿ ಹಕ್ಕು ದೊರೆಯದಂತಾಗುತ್ತದೆ. ಆತ ದೀರ್ಘಾವಧಿಯವರೆಗೆ ಆಸ್ತಿ ಸ್ವಾಧೀನಪಡಿಸಿಕೊಂಡಿದ್ದರೂ ಯಾವುದೇ ಕಾನೂನು ಪರಿಣಾಮ ಬೀರದು ಎಂದು ನ್ಯಾಯಾಮೂರ್ತಿಗಳು ತಿಳಿಸಿದರು.

ಅಂತೆಯೇ ಯಾವುದೇ ಬಾಡಿಗೆ ಅಥವಾ ಗುತ್ತಿಗೆ ಒಪ್ಪಂದವಿಲ್ಲದೆ ಸ್ವಾಧೀನಕ್ಕೆ ಅನುಮತಿಸಲಾದ ಆಸ್ತಿಯ ಮೇಲೆ  ಹಕ್ಕು ಸಾಧಿಸಿದ್ದ ಕೈಗಾರಿಕಾ ಘಟಕದ ಪರವಾಗಿ ಮಧ್ಯಂತರ ತಡೆಯಾಜ್ಞೆ ನೀಡಲು ಅದು ನಿರಾಕರಿಸಿತು.

ಜಮೀನು ವಾಸ್ತವವಾಗಿ ಮೂರನೇ ವ್ಯಕ್ತಿಗೆ ಸೇರಿದ್ದರೂ ಅಲ್ಲಿ ಕೈಗಾರಿಕೆ ನಡೆಸಲು ಅನುಮತಿಸಲಾಗಿತ್ತು. ಈ ರೀತಿಯಾಗಿ ಮುಫತ್ತಾಗಿ ನಿವೇಶನ ಸ್ವಾಧೀನಕ್ಕೆ ನ್ಯಾಯಾಲಯ ರಕ್ಷಣೆ ನೀಡುವುದನ್ನು ಸಮರ್ಥಿಸಲಾಗದು ಎಂದ ನ್ಯಾ. ಧರ್‌ ಡಿಸೆಂಬರ್ 17ರಂದು ಹೊರಡಿಸಿದ ಆದೇಶದ ಮೂಲಕ ಮೇಲ್ಮನವಿ ವಜಾಗೊಳಿಸಿದರು. ಅಂತೆಯೇ ವಿಚಾರಣಾ ನ್ಯಾಯಾಲಯದ ಆದೇಶ ಎತ್ತಿ ಹಿಡಿದರು.