2020ರ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್ಎಟಿ) ವೇಳೆ ಸಂವಿಧಾನದ 14 ಮತ್ತು 15ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅಲ್ಲದೆ ಪರೀಕ್ಷೆ ರದ್ದುಗೊಳಿಸುವಂತೆ ಸಿಎಲ್ಎಟಿ ಒಕ್ಕೂಟಕ್ಕೆ ನಿರ್ದೇಶನ ನೀಡಬೇಕೆಂದು ಕೂಡ ಮನವಿ ಮಾಡಲಾಗಿದೆ.
ಸಿಎಲ್ಎಟಿ 2020 ಆಕಾಂಕ್ಷಿಗಳ ಗುಂಪೊಂದು ಅರ್ಜಿ ಸಲ್ಲಿಸಿದ್ದು ಸೆಪ್ಟೆಂಬರ್ 28 ರಂದು ನಡೆದ ಪರೀಕ್ಷೆ ವೇಳೆ ತಾಂತ್ರಿಕ ತೊಂದರೆಗಳು ಉಂಟಾದ ಹಿನ್ನೆಲೆಯಲ್ಲಿ ಅನೇಕ ಆಕಾಂಕ್ಷಿಗಳು ಎದುರಿಸಿದ ಸಮಸ್ಯೆಗಳನ್ನು ಅದರಲ್ಲಿ ಎತ್ತಿ ತೋರಿಸಲಾಗಿದೆ. ವಿದ್ಯಾರ್ಥಿಗಳು ಸಲ್ಲಿಸಿದ ದೂರು ಮತ್ತು ಅಹವಾಲುಗಳನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸುವಂತೆ ಸಿಎಲ್ಎಟಿಗೆ ನಿರ್ದೇಶನ ನೀಡುವಂತೆಯೂ ಕೋರಲಾಗಿದೆ.
ಹೊಸದಾಗಿ ಪರೀಕ್ಷೆ ನಡೆಸುವಂತೆ ವಿನಂತಿಸಿರುವುದಲ್ಲದೆ ಮರು- ಪರೀಕ್ಷೆ ವೇಳೆ ತಾಂತ್ರಿಕ ತೊಂದರೆಗಳು ಉಂಟಾಗದಂತೆ ನೋಡಿಕೊಳ್ಳಲು ಒಕ್ಕೂಟಕ್ಕೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಕೋವಿಡ್- 19 ಕಾರಣದಿಂದ ಹಲವು ಬಾರಿ ಮುಂದೂಲಾಗಿದ್ದ ಸಿಎಲ್ಎಟಿ ಪರೀಕ್ಷೆಯನ್ನು ಸೆ. 28ರಂದು ನಡೆಸಲಾಗಿತ್ತು. ಪರೀಕ್ಷೆ ವೇಳೆ ಹೊಂದಾಣಿಕೆಯಾಗದ ಉತ್ತರಗಳನ್ನು ನೀಡಲಾಗಿತ್ತು ಎಂದಿರುವ ಅಭ್ಯರ್ಥಿಗಳು ಇದು ಪ್ರತಿಕೂಲ ಪರಿಣಾಮ ಬೀರುವುದರಿಂದ ಪರೀಕ್ಷೆ ನಿರುಪಯುಕ್ತವಾಗಿದೆ ಎಂದು ವಾದಿಸಿದ್ದಾರೆ.
"...ದೊಡ್ಡಮಟ್ಟದಲ್ಲಿ ಅರ್ಜಿದಾರರು / ಆಕಾಂಕ್ಷಿಗಳು ಸಲ್ಲಿಸಿದ್ದ ಆಕ್ಷೇಪಣೆಗಳು / ಕುಂದುಕೊರತೆಗಳ ಬಗ್ಗೆ ಕುಂದುಕೊರತೆ ಸಮಿತಿಯಾಗಲೀ ಅಥವಾ ಒಕ್ಕೂಟವಾಗಲೀ ಗಮನಹರಿಸಲಿಲ್ಲ. ಅಲ್ಲದೆ, 03.10.2020ರ ದಿನಾಂಕದ ಪತ್ರಿಕಾ ಪ್ರಕಟಣೆ ಮೂಲಕ ಪಕ್ಷಪಾತದ ಧೋರಣೆ ತಾಳಿ ಬಹಳ ದರ್ಪದಿಂದ ವರ್ತಿಸಲಾಗಿದೆ.” ಎಂದು ಅರ್ಜಿಯಲ್ಲಿ ಹೇಳಲಾಗಿದೆ.
"... ಪರೀಕ್ಷೆಯಲ್ಲಿ ಒದಗಿಸಲಾದ ಸೂಚನೆಗಳ ಅನಿರ್ದಿಷ್ಟತೆ ಮತ್ತು ಅಸ್ಪಷ್ಟತೆಯಿಂದಾಗಿ ಸಿಎಲ್ಎಟಿಯ ಸ್ವೇಚ್ಛಾಚಾರ ಮತ್ತು ತಾರತಮ್ಯ ಇನ್ನಷ್ಟು ಹೆಚ್ಚಾಯಿತು. ಜೊತೆಗೆ ಇದು ಸಂವಿಧಾನದ 14 ಮತ್ತು 15 ನೇ ವಿಧಿಗಳನ್ನೂ ಉಲ್ಲಂಘಿಸುತ್ತದೆ" ಎಂದು ಅಸಹಾಯಕತೆ ವ್ಯಕ್ತಪಡಿಸಲಾಗಿದೆ.
"ಇಂಗ್ಲಿಷ್ ಮಾತನಾಡುವ ಹಿನ್ನೆಲೆಯಿಂದ ಬಂದಿರದ ವಿದ್ಯಾರ್ಥಿಗಳನ್ನು ವ್ಯವಸ್ಥಿತವಾಗಿ ಹೊರಗಿಡುವ ರೀತಿಯಲ್ಲಿ ಸಿಎಲ್ಎಟಿ 2020ರ ಪ್ರಶ್ನೆಪತ್ರಿಕೆಯನ್ನು ವಿನ್ಯಾಸಗೊಳಿಸಿರುವುದು ದುರದೃಷ್ಟಕರ" ಎಂದು ಅರ್ಜಿದಾರರು ವಾದಿಸಿದ್ದಾರೆ.
ವಕೀಲೆ ಅಂಕಿತಾ ಚೌಧರಿ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದೆ.