ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆ, ನಿಷೇಧ ಮತ್ತು ಪರಿಹಾರ) ಕಾಯಿದೆ- 2013ಅನ್ನು (ಪಿಒಎಸ್‌ಎಚ್- ಪೋಶ್ ಕಾಯಿದೆ) ದೇಶದೆಲ್ಲೆಡೆಯ ರಾಜಕೀಯ ಪಕ್ಷಗಳಿಗೂ ಅನ್ವಯಿಸುವಂತೆ ಕೋರಿರುವ ಅರ್ಜಿದಾರರು ನ್ಯಾಯಾಂಗದಿಂದ ಪರಿಹಾರ ಕೋರುವುದಕ್ಕೂ ಮುನ್ನ ಭಾರತೀಯ ಚುನಾವಣಾ ಆಯೋಗವನ್ನು (ಇಸಿಐ) ಸಂಪರ್ಕಿಸಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ತಿಳಿಸಿದೆ [ಯೋಗಮಯ ಎಂ ಜಿ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
“ಅರ್ಜಿದಾರರು ಭಾರತೀಯ ಚುನಾವಣಾ ಆಯೋಗವನ್ನು ಏಕೆ ಸಂಪರ್ಕಿಸಿಲ್ಲ? ಇಸಿಐ ಕಾರ್ಯನಿರ್ವಹಿಸದೆ ಇದ್ದಾಗ ಅರ್ಜಿದಾರರು ನ್ಯಾಯಾಲಯಕ್ಕೆ ಬರಬಹುದು” ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಮನಮೋಹನ್ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ. ಅರ್ಜಿದಾರರ ಪರ ವಕೀಲರು ಸಲಹೆಗೆ ಸಮ್ಮತಿಸಿದ ಹಿನ್ನೆಲೆಯಲ್ಲಿ ಮನವಿಯನ್ನು ಪೀಠ ವಿಲೇವಾರಿ ಮಾಡಿತು.
ರಾಜಕೀಯ ಪಕ್ಷಗಳು ಕಾಯಿದೆಯನ್ನು ಅದರಲ್ಲಿಯೂ ಲೈಂಗಿಕ ಕಿರುಕುಳದ ದೂರುಗಳನ್ನು ಸ್ವೀಕರಿಸುವ ಆಂತರಿಕ ದೂರುಗಳ ಸಮಿತಿಯ (ಐಸಿಸಿ) ರಚನೆಯ ವಿಚಾರವನ್ನು ಪಾಲಿಸುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ವಕೀಲೆ ಯೋಗಮಾಯಾ ಎಂ ಜಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಹೀಗಾಗಿ ಪೋಶ್ ಕಾಯಿದೆಯಡಿ 'ಕೆಲಸದ ಸ್ಥಳ' ಮತ್ತು 'ಉದ್ಯೋಗದಾತ' ಎಂಬ ವ್ಯಾಖ್ಯಾನಗಳನ್ನು ರಾಜಕೀಯ ಪಕ್ಷಗಳ ಸಂದರ್ಭಕ್ಕನುಗುಣವಾಗಿಯೂ ಅರ್ಥೈಸಿಕೊಳ್ಳಬೇಕು. ರಾಜಕೀಯ ಪಕ್ಷಗಳಲ್ಲಿ ಪ್ರಮಾಣಿತ ಐಸಿಸಿಗಳು ಇಲ್ಲದಿರುವುದರಿಂದ ಲೈಂಗಿಕ ಕಿರುಕುಳದ ದೂರುಗಳ ಅಸಮರ್ಪಕ ವರದಿಗೆ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳಿಗೆ ಎಡೆ ಮಾಡಿಕೊಡಲಿದೆ ಎಂದು ಮನವಿ ತಿಳಿಸಿತ್ತು.
ರಾಜಕೀಯ ಪಕ್ಷಗಳಲ್ಲಿ ಉದ್ಯೋಗದಾತ-ಉದ್ಯೋಗಿ ಸಂಬಂಧವಿಲ್ಲವಾದ್ದರಿಂದ ರಾಜಕೀಯ ಪಕ್ಷಗಳಿಗೆ ಪೋಶ್ ಕಾಯಿದೆ ಅನ್ವಯಿಸುವುದು ಕಷ್ಟವಾಗುತ್ತದೆ ಎಂದು ಕೇರಳ ಹೈಕೋರ್ಟ್ ನೀಡಿರುವ ಅಭಿಪ್ರಾಯದಲ್ಲಿ ಸ್ವಲ್ಪ ಹುರುಳಿದೆ ಎಂದು ಇಂದಿನ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ತಿಳಿಸಿತು.
ಆದರೆ ಗುತ್ತಿಗೆ ಕಾರ್ಮಿಕರಂತಹ ಪ್ರಕರಣಗಳಲ್ಲಿ ಯಾವುದೇ ಕಟ್ಟುನಿಟ್ಟಿನ ಉದ್ಯೋಗದಾತ- ಉದ್ಯೋಗಿ ಸಂಬಂಧಗಳಿಲ್ಲದ ಸಂದರ್ಭಗಳಲ್ಲಿಯೂ ಪೋಶ್ ಕಾಯಿದೆ ಅನ್ವಯಿಸಬಹುದು ಎಂದು ಪೀಠ ಹೇಳಿದೆ.
ಕಾಯಿದೆಯ ಸೆಕ್ಷನ್ 6ರ ಅಡಿಯಲ್ಲಿ ರಚಿಸಲಾಗುವ ಸ್ಥಳೀಯ ಸಮಿತಿಗಳು ಗುತ್ತಿಗೆ ಕಾರ್ಮಿಕರು ಮತ್ತು ಸಣ್ಣ ಅಂಗಡಿಗಳಿಗೆ ಕೂಡ ಅನ್ವಯವಾಗುತ್ತವೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು.
ಪ್ರಕರಣದಲ್ಲಿ ಸದ್ಯಕ್ಕೆ ಮಧ್ಯಪ್ರವೇಶಿಸದಿರಲು ಕಡೆಗೆ ನಿರ್ಧರಿಸಿದ ನ್ಯಾಯಾಲಯ ಮೊದಲು ಇಸಿಐ ಸಂಪರ್ಕಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯ ಕಲ್ಪಿಸಿತು.
ಅರ್ಜಿದಾರರ ಪರ ಹಿರಿಯ ವಕೀಲರಾದ ಶೋಭಾ ಗುಪ್ತಾ ಮತ್ತು ವಕೀಲರಾದ ಶ್ರೀರಾಮ್ ಪರಕ್ಕಾಟ್ ಮತ್ತು ದೀಪಕ್ ಪ್ರಕಾಶ್ ವಾದ ಮಂಡಿಸಿದರು.