ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ 
ಸುದ್ದಿಗಳು

ಅಪರಾಧ ತನಿಖೆಗಳ ಸುದ್ದಿ ಪ್ರಸಾರ ಮಾಡದಂತೆ ಅರ್ನಾಬ್ ಮತ್ತು ರಿಪಬ್ಲಿಕ್ ಟಿವಿಗೆ ನಿರ್ದೇಶಿಸಲು ಕೋರಿ ಪಿಐಎಲ್

Bar & Bench

ತನಿಖಾ ಪತ್ರಿಕೋದ್ಯಮದ ಹೆಸರಿನಲ್ಲಿ ಯಾವುದೇ ಅಪರಾಧ ತನಿಖೆಗಳಿಗೆ ಸಂಬಂಧಿಸಿದ ಮಾಹಿತಿ ಅಥವಾ ಸುದ್ದಿಯ ಪ್ರಕಟಣೆ/ಪ್ರಸಾರ ಮಾಡುವುದನ್ನು ತಕ್ಷಣ ನಿಲ್ಲಿಸುವಂತೆ ಅರ್ನಾಬ್ ಗೋಸ್ವಾಮಿ ಮತ್ತು ರಿಪಬ್ಲಿಕ್ ಟಿವಿಯನ್ನು ನಡೆಸುತ್ತಿರುವ ಅವರ ಮಾಧ್ಯಮ ಕಂಪನಿಗೆ ನಿರ್ದೇಶನ ನೀಡಬೇಕೆಂದು ಕೋರಿ ದೆಹಲಿ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಗಿದೆ. (ಮೊಹಮ್ಮದ್ ಖಲೀಲ್ ವರ್ಸಸ್ ಭಾರತ ಸರ್ಕಾರ).

ಯಾವುದೇ ಮಾಧ್ಯಮಗಳು, ಯಾವುದೇ ಕ್ರಿಮಿನಲ್ ತನಿಖೆಗೆ ಸಂಬಂಧಿಸಿದ ಯಾವುದೇ ಸುದ್ದಿಗಳನ್ನು ವರದಿ ಅಥವಾ ಪ್ರಸಾರ ಮಾಡುವ ಸಂಬಂಧ ನಿಬಂಧನೆ, ನಿಯಮ ಅಥವಾ ಮಾರ್ಗಸೂಚಿಗಳನ್ನು ರೂಪಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೂಡ ಅರ್ಜಿಯಲ್ಲಿ ಕೋರಲಾಗಿದೆ.

ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ ಅರ್ನಾಬ್ ಗೋಸ್ವಾಮಿ ಮತ್ತವರ ಸುದ್ದಿ ಮಾಧ್ಯಮ ಕಂಪನಿ ತಮ್ಮ ಪ್ರಸಾರ ಮತ್ತು ಪ್ರಕಟಣೆಗಳ ಮೂಲಕ ತಿರುಚಿದ ಹಾಗೂ ದಾರಿತಪ್ಪಿಸುವ ವಿಚಾರಗಳನ್ನು ವರದಿ ಮಾಡುತ್ತಿದೆ ಎಂದು ಅರ್ಜಿದಾರ ಮೊಹಮ್ಮದ್ ಖಲೀಲ್ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಪೂರ್ವಾಗ್ರಹ ಪೀಡಿತ ವರದಿ, ನಟಿ ರಿಯಾ ಚಕ್ರವರ್ತಿ ಅವರ ನ್ಯಾಯಯುತ ವಿಚಾರಣೆಯ ಹಕ್ಕಿಗೆ ಧಕ್ಕೆ ತಂದಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. "ಇಡೀ ಪ್ರಹಸನ ಆರೋಪಿಯ ನ್ಯಾಯಯುತ ವಿಚಾರಣೆಗೆ ಧಕ್ಕೆ ತಂದು ಟಿಆರ್‌ಪಿ ಮತ್ತು ವೀಕ್ಷಣೆ ವೃದ್ಧಿಸಿಕೊಳ್ಳುವ ಕಸರತ್ತಾಗಿದೆ" ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ನ್ಯಾಯಸ್ಥಾನದ ಕಾರ್ಯಭಾರದಲ್ಲಿ ಹಸ್ತಕ್ಷೇಪ ಮಾಡುವ ಮತ್ತು ಅಡ್ಡಿಪಡಿಸುವ ಸಾಮರ್ಥ್ಯ ಪ್ರಸಾರಕ್ಕೆ ಇರುವುದರಿಂದ ಅರ್ನಾಬ್ ಗೋಸ್ವಾಮಿ ಮತ್ತವರ ಮಾಧ್ಯಮ ಕಂಪನಿಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬೇಕು ಎಂದೂ ಸಹ ಅರ್ಜಿದಾರರು ಮನವಿ ಮಾಡಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರಿದ್ದ ಪೀಠ ಶುಕ್ರವಾರ ಅರ್ಜಿಯ ಭೌತಿಕ ವಿಚಾರಣೆ ಆರಂಭಿಸಿತು. ನವೆಂಬರ್ 27ಕ್ಕೆ ವರ್ಚುವಲ್ ಕಲಾಪವನ್ನು ನಿಗದಿಪಡಿಸಲಾಗಿದೆ.

ಅಂದು, ಅರ್ಜಿದಾರರಿಗೆ ತಾವು ಜಾರಿಗೆ ತರಲು ಪ್ರಸ್ತಾಪಿಸುವ ಕರಡು ನಿಯಮಗಳೊಂದಿಗೆ ಸಿದ್ಧರಾಗಿ ಬರುವಂತೆ ನ್ಯಾಯಾಲಯ ಸೂಚಿಸಿದೆ.

ವಕೀಲ ರಣಧೀರ್ ಕುಮಾರ್ ಲಾಲ್ ಮೂಲಕ ಅರ್ಜಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರವನ್ನು ವಕೀಲ ಅಜಯ್ ದಿಗ್ಪೌಲ್ ಅವರು ಪ್ರತಿನಿಧಿಸಿದರು.