Delhi High Court
Delhi High Court 
ಸುದ್ದಿಗಳು

ಮಾಹಿತಿ ಅಧಿಕಾರಿಗಳು ಕೇವಲ ಅಂಚೆ ಕಚೇರಿಯಂತೆ ಕೆಲಸ ಮಾಡಬಾರದು: ದೆಹಲಿ ಹೈಕೋರ್ಟ್ ಕಿಡಿ

Bar & Bench

ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ (ಸಿಪಿಐಒ) ಕೇವಲ ʼಅಂಚೆ ಕಚೇರಿʼಯಂತೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಮಾಹಿತಿ ಹಕ್ಕು (ಆರ್‌ಟಿಐ) ಕಾಯಿದೆಯಡಿ ವಿವರವನ್ನು ಒದಗಿಸಲಾಗಿದೆಯೆ ಎಂಬುದನ್ನು ಅವರು ಖಚಿತಪಡಿಸಿಕೊಳ್ಳಬೇಕು ಎಂದು ದೆಹಲಿ ಹೈಕೋರ್ಟ್ ತಿಳಿಸಿದೆ. (ರಾಕೇಶ್ ಗುಪ್ತಾ ಮತ್ತಿತರರು ಹಾಗೂ ಕೇಂದ್ರ ಮಾಹಿತಿ ಆಯೋಗದ ನಡುವಣ ಪ್ರಕರಣ).

ಸಿಪಿಐಒ ತನ್ನ ಬುದ್ಧಿ ಉಪಯೋಗಿಸಿ ಪ್ರಕರಣವನ್ನು ವಿಶ್ಲೇಷಿಸಬೇಕು. ನಂತರ ಮಾಹಿತಿಯ ನೇರ ಬಹಿರಂಗಪಡಿಸುವಿಕೆ ಅಥವಾ ಬಹಿರಂಗಪಡಿಸದೇ ಇರುವಿಕೆಗೆ ಕಾರಣಗಳನ್ನು ನೀಡಬೇಕು ಎಂದು ನ್ಯಾ. ಪ್ರತಿಭಾ ಎಂ ಸಿಂಗ್‌ ಅವರಿದ್ದ ಪೀಠ ತಿಳಿಸಿದೆ. ಸಿಐಸಿ (ಕೇಂದ್ರ ಮಾಹಿತಿ ಆಯೋಗ) ಕೂಡ ಸಿಪಿಐಒಗಳ ಕಾರ್ಯನಿರ್ವಹಣೆಗೆ ಸಹಕಾರ ನೀಡಬೇಕು ಎಂದು ಕೂಡ ತಿಳಿಸಲಾಗಿದೆ.

ಆರ್‌ಟಿಐ ಕಾಯಿದೆಯ ಸೆಕ್ಷನ್ 5 (5) ರ ಅಡಿಯಲ್ಲಿ ಸಹಾಯ ನೀಡುವ ಇತರ ಅಧಿಕಾರಿಗಳನ್ನು ಸಹ ಸಿಪಿಐಒಗಳಾಗಿ ಪರಿಗಣಿಸಲಾಗುತ್ತದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಆರ್‌ಟಿಐ ಕಾಯಿದೆಯ ಸೆಕ್ಷನ್ 5 (3) ರ ಪ್ರಕಾರ ಮಾಹಿತಿ ಕೋರಿಕೆಯನ್ನು ನಿರ್ವಹಿಸಲು ಮತ್ತು ಮಾಹಿತಿ ಬಯಸುವ ವ್ಯಕ್ತಿಗೆ ʼಸೂಕ್ತ ಸಹಾಯʼ ನೀಡುವ ಗಂಭೀರ ಹೊಣೆಗಾರಿಕೆʼ ಸಿಪಿಐಒಗಳಿಗೆ ʼ ಇದೆ ಎಂದು ನ್ಯಾಯಾಲಯ ಹೇಳಿದೆ.

ಈ ಹಿಂದಿನ ತೀರ್ಪುಗಳ ಆಧಾರದಲ್ಲಿ ಆರ್‌ಟಿಐ ಕಾಯಿದೆಯಡಿ ಸಿಪಿಐಒಗಳು ವಹಿಸಬೇಕಾದ ಪಾತ್ರದ ಕುರಿತು ಕೆಳಕಂಡ ಕೆಲ ತತ್ವಗಳನ್ನು ಅಳವಡಿಸಿಕೊಳ್ಳುವಂತೆ ಅದು ಸೂಚಿಸಿದೆ:

  • ಸೂಕ್ತ ಕಾರಣವಿಲ್ಲದೆ ಸಿಪಿಐಒ / ಪಿಐಒಗಳು ಮಾಹಿತಿ ತಡೆಹಿಡಿಯುವಂತಿಲ್ಲ.

  • ಕಾಯಿದೆಯಡಿ ಅನುಮತಿಸಿರುವ ರೀತಿಯಲ್ಲಿ ಪ್ರಾಮಾಣಿಕವಾಗಿ ಮಾಹಿತಿ ತಿರಸ್ಕರಿಸಿದ್ದರೆ ಅದಕ್ಕೆ ಪಿಐಒ / ಸಿಪಿಐಒ ಜವಾಬ್ದಾರರಾಗಿರುವುದಿಲ್ಲ.

  • ಸಿಐಸಿ ಕಡೆಯಿಂದ ಭಿನ್ನಾಭಿಪ್ರಾಯ ವ್ಯಕ್ತವಾಗಿದ್ದರೆ ಅದಕ್ಕೆ ಆರ್‌ಟಿಐ ಕಾಯಿದೆಯ ಸೆಕ್ಷನ್ 20ರ ಅಡಿಯಲ್ಲಿ ದಂಡ ವಿಧಿಸಲು ಸಾಧ್ಯವಿಲ್ಲ.

  • ಮಾಹಿತಿ ಬಹಿರಂಗಪಡಿಸುವುದನ್ನು ತಪ್ಪಿಸಲು ಸರ್ಕಾರಿ ಇಲಾಖೆಗಳಿಗೆ ಅನುಮತಿ ನೀಡಬಾರದು. ಮಾಹಿತಿ ಲಭ್ಯವಿಲ್ಲ ಅಥವಾ ಪತ್ತೆಹಚ್ಚಲಾಗುವುದಿಲ್ಲ ಎಂದು ತೀರ್ಮಾನಿಸುವ ಮೊದಲು, ಸಂಬಂಧಪಟ್ಟ ಇಲಾಖೆಗಳು ಸಮಗ್ರ ಶೋಧ ಮತ್ತು ತನಿಖೆ ನಡೆಸುವ ಕುರಿತು ಶ್ರದ್ಧೆ ವಹಿಸಬೇಕಾಗುತ್ತದೆ.

  • ಮಾಹಿತಿ ಪತ್ತೆ ಹಚ್ಚಲು ಸರ್ವ ಪ್ರಯತ್ನ ಮಾಡಬೇಕಿದ್ದು ಶಿಸ್ತು ಕ್ರಮದ ಭೀತಿಯು ಪಟ್ಟಭದ್ರ ಹಿತಾಸಕ್ತಿಗಳು ಮಾಹಿತಿ ನಿಗ್ರಹಿಸುವುದನ್ನು ತಡೆಯುತ್ತದೆ.

  • ಪಿಐಒ ಅಧೀನ ಅಧಿಕಾರಿಗಳನ್ನು ಅವಲಂಬಿಸಿರಲು ಸಾಧ್ಯವಿಲ್ಲ.

  • ಸಿಪಿಐಒ / ಪಿಐಒಗಳ ಮೇಲೆ ಪಾಲನಾ ಕರ್ತವ್ಯಇರುತ್ತದೆ. ವಸ್ತುನಿಷ್ಠವಾಗಿ ಮತ್ತು ಗಂಭೀರವಾಗಿಪಿಐಒ/ ಸಿಪಿಐಒ ಅಧಿಕಾರ ಪ್ರಕ್ರಿಯೆ ನಡೆಸಬೇಕು. ಈ ವಿಚಾರದಲ್ಲಿ ಅವರು ನಿರ್ಲಕ್ಷ್ಯ ವಹಿಸುವಂತಿಲ್ಲ.

ಕೇಂದ್ರ ಮಾಹಿತಿ ಆಯೋಗ (ಸಿಐಸಿ) ನೀಡಿದ ಆದೇಶ ಪ್ರಶ್ನಿಸಿ ಯೂನಿಯನ್ ಬ್ಯಾಂಕಿನ ಇಬ್ಬರು ಸಿಪಿಐಒಗಳು (ಅರ್ಜಿದಾರರು) ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ಆದೇಶವನ್ನು ಜಾರಿಗೊಳಿಸಿದೆ. ಅಪೂರ್ಣ ಮಾಹಿತಿ ನೀಡಿದ್ದಕ್ಕಾಗಿ ಮತ್ತು ನುಣುಚಿಕೊಳ್ಳುವ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಅದು ಅರ್ಜಿದಾರ ಅಧಿಕಾರಿಗಳಿಬ್ಬರಿಗೂ ತಲಾ 10,000 ರೂ. ದಂಡ ವಿಧಿಸಿದೆ.

ವಾಣಿಜ್ಯ ಗೌಪ್ಯತೆಯ ಆಂತರಿಕ ದಾಖಲೆಯಾಗಿರುವುದರಿಂದ ಆರ್‌ಟಿಐ ಕಾಯಿದೆಯ ಸೆಕ್ಷನ್ 8 (1) (ಡಿ) ಅಡಿಯಲ್ಲಿ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಈ ಹಿಂದೆ ಮಾಹಿತಿ ನಿರಾಕರಿಸಿದ್ದರು. ನಂತರ ಮಾಹಿತಿ ಬಯಸಿದವರು ಸಿಐಸಿ ಮೊರೆ ಹೋಗಿದ್ದರು. ಪರಿಣಾಮ ಅಧಿಕಾರಿಗಳಿಗೆ ಶೋ ಕಾಸ್‌ ನೋಟಿಸ್‌ ಜಾರಿ ಮಾಡಲಾಗಿತ್ತು. ಆ ಬಳಿಕ ಅವರು ಸಂಪೂರ್ಣ ಭಿನ್ನ ನಿಲುವು ತಳೆದು, ಕೋರಿದ ಮಾಹಿತಿ ದಾಖಲೆಯಲ್ಲಿ ಲಭ್ಯ ಇಲ್ಲ ಎಂದು ತಿಳಿಸಿದ್ದರು. ಅಧಿಕಾರಿಗಳು ನೀಡಿದ ಉತ್ತರದಲ್ಲಿ ವ್ಯತ್ಯಾಸ ಕಂಡುಬಂದದ್ದಲ್ಲದೆ ಎರಡು ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಮಾಹಿತಿ ಒದಗಿಸಿಲ್ಲ ಎಂದು ಸಿಐಸಿ ನಿರ್ಣಯಿಸಿತು. ಅರ್ಜಿದಾರರ ದುರುದ್ದೇಶದ ನಡೆ ಕಂಡ ಸಿಐಸಿ ಅವರ ವಿರುದ್ಧ ಕಾಯಿದೆಯ ಸೆಕ್ಷನ್ 20 ರ ಅಡಿಯಲ್ಲಿ ದಂಡ ವಿಧಿಸಿತು.

ಸಿಐಸಿ ಜಾರಿಗೊಳಿಸಿದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ ನ್ಯಾಯಾಲಯ, ಸಿಪಿಐಒಗಳು ಅಗತ್ಯ ಮಾಹಿತಿಯನ್ನು ನ್ಯಾಯಯುತ, ಮುಕ್ತ ಹಾಗೂ ಸತ್ಯ ರೀತಿಯಲ್ಲಿ ಒದಗಿಸುವಾಗ ಹೊಣೆಗಾರಿಕೆ ಪ್ರದರ್ಶಿಸುವ ಅಗತ್ಯವಿತ್ತು ಎಂದು ಹೇಳಿದೆ. ಆದರೆ ಇಬ್ಬರೂ ಸಿಪಿಐಒಗಳು ಸೇವೆಯಿಂದ ನಿವೃತ್ತರಾಗಿದ್ದಾರೆ ಎಂಬ ಅಂಶ ಪರಿಗಣಿಸಿ, ದಂಡವನ್ನು ತಲಾ 5,000 ರೂಗಳಿಗೆ ಮಿತಿಗೊಳಿಸಲಾಯಿತು. ಅರ್ಜಿದಾರರ ಪರ ವಕೀಲ ಒ ಪಿ ಗಗ್ಗರ್ ಹಾಜರಾದರು. ಸ್ಥಾಯಿ ವಕೀಲ ಗೌರಂಗ್ ಕಾಂತ್, ವಕೀಲ ಅಮನ್ ಸಿಂಗ್ ಬಕ್ಷಿ ಅವರು ಸಿಐಸಿ ಪರವಾಗಿ ವಾದ ಮಂಡಿಸಿದರು.