Justice Shekhar Kumar Yadav with Allahabad High Court 
ಸುದ್ದಿಗಳು

ನ್ಯಾ. ಯಾದವ್‌ ಅವರಿಗೆ ವಾಗ್ದಂಡನೆ ಪ್ರಶ್ನಿಸಿ ಅಲಾಹಾಬಾದ್ ಹೈಕೋರ್ಟ್‌ಗೆ ಅರ್ಜಿ

ನ್ಯಾ. ಯಾದವ್ ಅವರು ತಮ್ಮ ಭಾಷಣದಲ್ಲಿ ಬಳಸಿದ ಕಠ್‌ಮುಲ್ಲಾ ಪದ ದ್ವೇಷ ಭಾಷಣವಾಗದು. ಅವರು ವೈಯಕ್ತಿಕವಾಗಿ ಹೇಳಿಕೆ ನೀಡಿದ್ದಾರೆಯೇ ವಿನಾ ನ್ಯಾಯಮೂರ್ತಿಯಾಗಿ ಅಲ್ಲ ಎಂದು ಮನವಿ ಪ್ರತಿಪಾದಿಸಿದೆ.

Bar & Bench

ಅಲಹಾಬಾದ್ ಹೈಕೋರ್ಟ್‌ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ಇತ್ತೀಚೆಗೆ ಮುಸ್ಲಿಂ ಸಮುದಾಯದ ವಿರುದ್ಧ ಮಾಡಿದ ಅವಹೇಳನಕಾರಿ ಹೇಳಿಕೆಗಳ ವಿರುದ್ಧ ವಾಗ್ದಂಡನಾ ನಿರ್ಣಯ ಮಂಡಿಸಲು ಕಪಿಲ್ ಸಿಬಲ್‌ ಮತ್ತು ಸಂಸದರು ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದ ಕೆಲ ದಿನಗಳಲ್ಲಿಯೇ ನಿರ್ಣಯವನ್ನು ಪ್ರಶ್ನಿಸಿ ಅಲಾಹಾಬಾದ್‌ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.

ಸಿಬಲ್‌ ಸೇರಿದಂತೆ  54 ಸಂಸದರು ಸಲ್ಲಿಸಿರುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳದೆ ಇರಲು ರಾಜ್ಯಸಭಾಧ್ಯಕ್ಷರಿಗೆ ನಿರ್ದೇಶನ ನೀಡಬೇಕು ಎಂದು ವಕೀಲ ಅಶೋಕ್ ಪಾಂಡೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಅರ್ಜಿಯ ಪ್ರಮುಖಾಂಶಗಳು

  • ವಿಎಚ್‌ಪಿ ಕಾನೂನು ಕೋಶದ ಸಭೆಯಲ್ಲಿ ನ್ಯಾ. ಯಾದವ್‌ ಹೇಳಿದ್ದೆಲ್ಲವೂ ಸಂಘಟನೆಯ ಸಭೆಯಲ್ಲಿ ಭಾಗವಹಿಸಲು ತೆರಳಿದ ಹಿಂದೂ ಒಬ್ಬರ ವೈಯಕ್ತಿಕ ಹೇಳಿಕೆಯಾಗಿದೆ.

  • ಆ ಸಭೆಯಲ್ಲಿ ಅವರು ಏನೇ ಹೇಳಿದ್ದರೂ ಸನಾತನ ಹಿಂದೂ ಧರ್ಮದ ಅನುಯಾಯಿಯಾಗಿ ಅವರು ಹೇಳಿದ್ದಾರೆಯೇ ವಿನಾ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಅಲ್ಲ.

  • ಅವರು ಬಳಸಿದ ಕಠ್‌ಮುಲ್ಲಾ ಪದ ದ್ವೇಷ ಭಾಷಣವಾಗದು.

  • ಮುಸ್ಲಿಂ ಹುಡುಗಿಯರನ್ನು ಶಾಲಾ ಕಾಲೇಜುಗಳಿಗೆ ತೆರಳದಂತೆ ಹೇಗೆ ಕಠ್‌ಮುಲ್ಲಾಗಳು ತಡೆಯತ್ತಿದ್ದಾರೆ ಅಥವಾ ಮುಸ್ಲಿಂ ಮಹಿಳೆಯರು ಹಿಜಾಬ್‌ ಇಲ್ಲವೇ ಬುರ್ಖಾ ಧರಿಸುವಂತೆ ಹೇಗೆ ಒತ್ತಾಯಿಸುತ್ತಿದ್ದಾರೆ ಎಂಬುದು ವಕೀಲರು ಮತ್ತು ನ್ಯಾಯಮೂರ್ತಿಯಾಗಿ ಯಾದವ್‌ ಅವರಿಗೆ ತಿಳಿದಿರಬಹುದು.

  • ಬಾಬರ್‌ ಜೊತೆ ಕೈಗೂಡಿಸಿ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣಕ್ಕೆ ಅಡ್ಡಿಪಡಿಸಿದ, ಕಾಶಿ ವಿಶ್ವನಾಥ ದೇಗುಲ ಮತ್ತು ಕೃಷ್ಣ ಜನ್ಮಭೂಮಿಯ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಔರಂಗಾಜೇಬನೊಂದಿಗೆ ನಿಂತ ಮುಸ್ಲಿಮ್‌ ಸಮುದಾಯದಲ್ಲಿರುವ ಕೆಲ ಕಠ್‌ಮುಲ್ಲಾಗಳ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿರಬಹುದು.

ಹಿಂದೂ ಬಲಪಂಥೀಯ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಾನೂನು ಘಟಕ ಡಿಸೆಂಬರ್ 8 ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾ. ಯಾದವ್‌ ಅವರು ಮಾಡಿದ್ದ ಭಾಷಣ ವಿವಾದ ಸೃಷ್ಟಿಸಿತ್ತು.

ಏಕರೂಪ ನಾಗರಿಕ ಸಂಹಿತೆ ಕುರಿತಂತೆ ನೀಡಿದ್ದ ಉಪನ್ಯಾಸದ ವೇಳೆ ಅವರು ಬಹುಸಂಖ್ಯಾತರ ಆಶಯದಂತೆ ಭಾರತ ಕೆಲಸ ಮಾಡಲಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲ್ಲದೆ ಮುಸ್ಲಿಮರ ವಿರುದ್ಧ ಅವಹೇಳನಕಾರಿಯಾದ ಕಠ್‌ಮುಲ್ಲಾ ಎಂಬ ಪದ ಕೂಡ ಬಳಸಿದ್ದರು.