EVM VVPAT and SC 
ಸುದ್ದಿಗಳು

ಅಭ್ಯರ್ಥಿಗಳ ಅವಿರೋಧ ಆಯ್ಕೆ ಪ್ರಶ್ನಿಸಿ ಅರ್ಜಿ: ಕೇಂದ್ರ, ಇಸಿಐ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ಏಕಾಂಗಿಯಾಗಿ ಸ್ಪರ್ಧಿಸುವ ಅಭ್ಯರ್ಥಿಯನ್ನು ನೋಟಾ ಆಯ್ಕೆ ಬಳಸಿಕೊಂಡು ಮತದಾರರು ತಿರಸ್ಕರಿಸಬಹುದಾಗಿದ್ದು ಈ ಅವಕಾಶವನ್ನು ಅವಿರೋಧ ಆಯ್ಕೆಯ ನಿಯಮಗಳು ತಡೆಯುತ್ತವೆ ಎಂದು ಅರ್ಜಿ ಹೇಳಿದೆ.

Bar & Bench

ಚುನಾವಣೆಯಲ್ಲಿ ಓರ್ವ ಅಭ್ಯರ್ಥಿ ಮಾತ್ರವೇ ಸ್ಪರ್ಧಿಸುತ್ತಿರುವಾಗ ಅವಿರೋಧವಾಗಿ ಆಯ್ಕೆ ಮಾಡುವುದನ್ನು ಪ್ರಶ್ನಿಸಿರುವ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರ ಮತ್ತು ಭಾರತೀಯ ಚುನಾವಣಾ ಆಯೋಗದ (ಇಸಿಐ) ಪ್ರತಿಕ್ರಿಯೆ ಕೇಳಿದೆ [ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠ ಪ್ರಕರಣದಲ್ಲಿ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರ ನೆರವು ಕೇಳಿದೆ.

ಅರ್ಜಿ ಸಲ್ಲಿಸಿರುವ ನೀತಿ ನಿರೂಪಣೆಗೆ ಸಂಬಂಧಿಸಿದ ಚಿಂತಕರ ವೇದಿಕೆಯಾದ ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ಪರವಾಗಿ ಹಿರಿಯ ವಕೀಲ ಅರವಿಂದ ದಾತಾರ್ ಮತ್ತು ವಕೀಲ ಹರ್ಷ ಪರಾಶರ್ ವಾದ ಮಂಡಿಸಿದರು.

ವಿಧಿ ತನ್ನ ಮನವಿಯಲ್ಲಿ , 1951ರ ಪ್ರಜಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 53 (2) ಅನ್ನು 1961ರ ಚುನಾವಣಾ ನಿಯಮಗಳ ನಡಾವಳಿಯ ನಿಯಮ 11 ಹಾಗೂ ಫಾರ್ಮ್ 21 ಮತ್ತು 21 ಬಿ ಯ ಸಹವಾಚನವನ್ನು ರದ್ದುಪಡಿಸಬೇಕು.

ಈ ರೀತಿ ಒಬ್ಬರೇ ಸ್ಪರ್ಧಿಸುವ ಅಭ್ಯರ್ಥಿಯನ್ನು ಅವಿರೋಧ ಆಯ್ಕೆ ಎಂದು ಘೋಷಿಸುವ ನಿಯಮಾವಳಿಯು ಮತದದಾರರು ನೋಟಾ ಬಳಸಿ (ನನ್‌ ಆಫ್‌ ದ ಅಬೌ - ಮೇಲಿನ ಯಾರೂ ಅಲ್ಲ - ನೋಟಾ) ಅಭ್ಯರ್ಥಿಯನ್ನು ತಿರಸ್ಕರಿಸುವುದನ್ನು ತಡೆಯುತ್ತದೆ ಎಂದು ಹೇಳಿದೆ.

ಇದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದ್ದು, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ  ಸುಪ್ರೀಂ ಕೋರ್ಟ್‌ ನೀಡಿದ್ದ ನೇರ ಚುನಾವಣೆಗಳಲ್ಲಿ ಇವಿಎಂ ಮುಖೇನ ನೋಟಾ ಮೂಲಕ ನಕಾರಾತ್ಮಕ ಮತ ಚಲಾಯಿಸುವ ಹಕ್ಕನ್ನು ಸಂವಿಧಾನದ 19(1)(ಎ) ವಿಧಿಯಡಿ ರಕ್ಷಿಸಲಾಗಿದೆ ಎಂದು ಅರ್ಜಿ ತಿಳಿಸಿದೆ.

 ಆಕ್ಷೇಪಾರ್ಹ ನಿಯಮಗಳು ಒಬ್ಬರೇ ಅಭ್ಯರ್ಥಿ ಇರುವ ಹಾಗೂ ಬಹು ಅಭ್ಯರ್ಥಿಗಳಿರುವ ಚುನಾವಣೆಯ ಮತದಾರರ ನಡುವೆ ಅತಾರ್ಕಿಕ ತಾರತಮ್ಯ ಉಂಟು ಮಾಡುತ್ತವೆ ಎಂದು ಅದು ಹೇಳಿದೆ.

ಮೂಲ ಅಧಿನಿಯಮದ ಏಕೈಕ ಉದ್ದೇಶವೆಂದರೆ ಚುನಾವಣೆ ನಡೆಸುವ ಹಣಕಾಸಿನ ವೆಚ್ಚ ಕಡಿಮೆ ಮಾಡುವುದಾಗಿತ್ತು. ಇದೀಗ ದೇಶ ಅಭಿವೃದ್ಧಿಯ ಬಹುದೊಡ್ಡ ಹೆಜ್ಜೆಗಳನ್ನಿಟ್ಟಿದ್ದು, ಮೂಲ ಅಧಿನಿಯಮ ಅನಗತ್ಯವಾಗಿದೆ... 1989ರಿಂದ, ಸಂಸದೀಯ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗುವ ಸ್ಥಾನಗಳ ಸಂಖ್ಯೆ ಇಳಿಮುಖವಾಗುತ್ತಿದ್ದರೂ, ರಾಜ್ಯ ವಿಧಾನಸಭೆಗಳ ವಿಷಯದಲ್ಲಿ ಅಂತಹ ಇಳಿಕೆ ನಿಧಾನವಾಗಿದೆ” ಎಂದು ಅರ್ಜಿ ವಿವರಿಸಿದೆ. 

ಅವಿರೋಧವಾಗಿ ಆಯ್ಕೆಯಾಗುವ ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣವೇ ದಾಖಲಾಗದಿರುವುದರಿಂದ ನಿಯಮಗಳು ಪಾರದರ್ಶಕತೆಯಿಂದ ಕೂಡಿಲ್ಲ ಎಂದು ಆಕ್ಷೇಪಿಸಲಾಗಿದೆ.