Jagan Mohan Reddy Facebook
ಸುದ್ದಿಗಳು

ನ್ಯಾಯಾಂಗ ಅಸಮರ್ಪಕತೆ ಆರೋಪ ವಿಚಾರದಲ್ಲಿ ಎಲ್ಲೆ ಮೀರಿದ ಆಂಧ್ರ ಮುಖ್ಯಮಂತ್ರಿ ಜಗನ್ ರೆಡ್ಡಿ: 'ಸುಪ್ರೀಂ'ಗೆ ದೂರು

ಸುಪ್ರೀಂಕೋರ್ಟ್ ಹಾಲಿ ನ್ಯಾಯಮೂರ್ತಿಯೊಬ್ಬರ ವಿರುದ್ಧ ಪಕ್ಷಪಾತ ಮತ್ತು ನ್ಯಾಯಾಂಗ ಅಸಮರ್ಪಕತೆ ಆರೋಪ ಮಾಡಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರಿಗೆ ಬರೆಯಲಾದ ಪತ್ರದ ಬೆನ್ನಲ್ಲೇ ಈ ಅರ್ಜಿ ಸಲ್ಲಿಕೆಯಾಗಿದೆ.

Bar & Bench

ಸುಪ್ರೀಂಕೋರ್ಟ್ ಮತ್ತದರ ನ್ಯಾಯಾಧೀಶರನ್ನು ಕೆಣಕುವ ರೀತಿಯ ಸಾರ್ವಜನಿಕ ಹೇಳಿಕೆ ನೀಡುವುದನ್ನು ಅಥವಾ ಪತ್ರಿಕಾಗೋಷ್ಠಿ ನಡೆಸುವುದನ್ನು ನಿಲ್ಲಿಸುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್‌ಮೋಹನ ರೆಡ್ಡಿ ಅವರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಸುಪ್ರೀಂಕೋರ್ಟ್ ಹಾಲಿ ನ್ಯಾಯಮೂರ್ತಿಯೊಬ್ಬರ ವಿರುದ್ಧ ಪಕ್ಷಪಾತ ಮತ್ತು ನ್ಯಾಯಾಂಗ ಅಸಮರ್ಪಕತೆ ಆರೋಪ ಮಾಡಿ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರಿಗೆ ಬರೆದ ಪತ್ರವನ್ನು ಅ. 10ರಂದು ರೆಡ್ಡಿ ಅವರ ಮುಖ್ಯ ಸಲಹೆಗಾರರು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಸ್ತುತ ಅರ್ಜಿ ಸಲ್ಲಿಕೆಯಾಗಿದೆ.ಅಡ್ವೊಕೇಟ್ ಆನ್ ರೆಕಾರ್ಡ್ ಮುಕ್ತಿ ಸಿಂಗ್ ಅವರ ಮೂಲಕ ಅರ್ಜಿದಾರರಾಗಿರುವ ವಕೀಲ ಸುನೀಲ್ ಕುಮಾರ್ ಸಿಂಗ್ ಅವರಿಂದ ಸಲ್ಲಿಕೆಯಾಗಿರುವ ಅರ್ಜಿಯಲ್ಲಿ, ನ್ಯಾಯಾಲಯಗಳ ಬಗ್ಗೆ ಸಾರ್ವಜನಿಕರು ಇರಿಸಿದ ನಂಬಿಕೆ ಅಪಾಯದಲ್ಲಿದೆ ಎಂದು ಹೇಳಲಾಗಿದೆ.

ಸಂವಿಧಾನದ 121 ಮತ್ತು 211ನೇ ವಿಧಿಗಳ ಪ್ರಕಾರ ನ್ಯಾಯಾಧೀಶರ ವಿರುದ್ಧ ಭ್ರಷ್ಟಾಚಾರ ಮತ್ತು ಪಕ್ಷಪಾತದ ಆರೋಪ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳ ಕಾರ್ಯವೈಖರಿ ಕುರಿತಂತೆ ಸಂಸತ್ತಿನಲ್ಲಾಗಲೀ ರಾಜ್ಯ ವಿಧಾನಸಭೆಯಲ್ಲಾಗಲೀ ಚರ್ಚಿಸುವುದನ್ನು ಸಂವಿಧಾನ ನಿರ್ಬಂಧಿಸಿದೆ ಎಂದು ಕೂಡ ಉಲ್ಲೇಖಿಸಲಾಗಿದೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಅವರು ಸಂವಿಧಾನ ನಿಗದಿಪಡಿಸಿದ ಎಲ್ಲೆ ಮೀರಿದ್ದಾರೆ ಎಂದು ಅರ್ಜಿದಾರರಾಗಿರುವ ವಕೀಲ ಸುನೀಲ್ ಕುಮಾರ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ನಿರ್ಭಯವಾಗಿ ಕಾರ್ಯ ನಿರ್ವಹಿಸಲೆಂದು ನ್ಯಾಯಾಂಗಕ್ಕೆ ಸಾಂವಿಧಾನಿಕ ವಿನಾಯಿತಿ ನೀಡಲಾಗಿದೆ” ಎಂದು ಅವರು ಹೇಳಿದ್ದಾರೆ.

"ಇಂದಿನ ಸಮಾಜದಲ್ಲಿ, ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ನಡೆಸುವ ಚರ್ಚೆ ಕೆಲವೇ ದಿನ ಅಥವಾ ಕೆಲವೇ ಗಂಟೆಗಳಲ್ಲಿ ಹಬ್ಬಿ, ನ್ಯಾಯಾಂಗದ ವರ್ಚಸ್ಸಿನ ಮೇಲೆ ಮತ್ತು ನ್ಯಾಯಾಂಗದ ಮೇಲೆ ಸಾರ್ವಜನಿಕರು ಇರಿಸಿದ ವಿಶ್ವಾಸದ ಮೇಲೆ ಪ್ರಭಾವ ಬೀರಬಹುದು”
ಸುಪ್ರೀಂಕೋರ್ಟಿಗೆ ಸಲ್ಲಿಸಲಾಗಿರುವ ಅರ್ಜಿ

ಘಟನೆಯನ್ನು 'ಕಂಡುಕೇಳರಿಯದ್ದು’ ಎಂದು ಬಣ್ಣಿಸಿರುವ ಅರ್ಜಿದಾರರು, ನ್ಯಾಯಾಂಗ ಸ್ವಾತಂತ್ರ್ಯದ ಪರಿಕಲ್ಪನೆಯ ಕೇಂದ್ರಭಾಗದಲ್ಲಿ ಅಧಿಕಾರಗಳನ್ನು ಬೇರ್ಪಡಿಸುವ ಸಿದ್ಧಾಂತ ಇದೆ ಎಂದು ಹೇಳಿದ್ದಾರೆ. "ಸರ್ಕಾರದ ಪ್ರತಿಯೊಂದು ಅಂಗವೂ ಮತ್ತೊಂದು ಅಂಗದ ಸೂಕ್ತ ಪಾತ್ರವನ್ನು ಗುರುತಿಸಿ ಮನ್ನಣೆ ನೀಡುವಂತೆ ಮೂರು ಅಂಗಗಳ ನಡುವಿನ ಸಂಬಂಧ ಗೌರವಯುತವಾಗಿರಬೇಕು" ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಮುಖ್ಯಮಂತ್ರಿ ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದೆಂದು ಕೋರಿ ಶೋಕಾಸ್ ನೋಟೀಸ್ ನೀಡುವಂತೆಯೂ ಮನವಿ ಮಾಡಲಾಗಿದೆ.

ಪ್ರಕರಣದ ಹಿನ್ನೆಲೆ

ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಬೊಬ್ಡೆ ಅವರನ್ನು ಉದ್ದೇಶಿಸಿ ಪತ್ರ ಬರೆದಿದ್ದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ರೆಡ್ಡಿ, ‘ಆಂಧ್ರಪ್ರದೇಶದ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹೈಕೋರ್ಟನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದ್ದರು.

2014ರಿಂದ 2019ರವರೆಗೆ ಅಧಿಕಾರದಲ್ಲಿದ್ದ ವೇಳೆ ನಾಯ್ಡು ಅವರು ನಡೆಸಿದ್ದಾರೆನ್ನಲಾದ ಅಕ್ರಮಗಳ ಬಗ್ಗೆ ನೂತನ ಸರ್ಕಾರ ತನಿಖೆ ನಡೆಸಿದಾಗಿನಿಂದ ಸುಪ್ರೀಂಕೋರ್ಟ್ ಹಾಲಿ ನ್ಯಾಯಮೂರ್ತಿಯೊಬ್ಬರು ರಾಜ್ಯ ಹೈಕೋರ್ಟ್ ನ ‘ಮುಖ್ಯ ನ್ಯಾಯಮೂರ್ತಿಗಳ ಮೂಲಕ ಪ್ರಭಾವ ಬೀರಲು ಯತ್ನಿಸಿದ್ದರು ಎಂದು ಜಗನ್ ಪತ್ರದಲ್ಲಿ ಆರೋಪಿಸಲಾಗಿತ್ತು.

ಪತ್ರ ದೇಶದೆಲ್ಲೆಡೆ ತೀವ್ರ ಸಂಚಲನ ಸೃಷ್ಟಿಸಿದೆ. ಅಲ್ಲದೆ ರಾಜಕೀಯ ವಲಯದಲ್ಲಿಯೂ ಕೋಲಾಹಲ ಮೂಡಿಸಿದೆ. ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ನಾಯಕರ ಆರೋಪದ ಕುರಿತಂತೆ ಆಂಧ್ರಪ್ರದೇಶ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿದೆ. ಅಲ್ಲದೆ ವೈಎಸ್ ಆರ್ ಕಾಂಗ್ರೆಸ್ಸಿನ 49 ನಾಯಕರು ಮತ್ತು ಕಾರ್ಯಕರ್ತರಿಗೆ ನೋಟಿಸ್ ಜಾರಿ ಮಾಡಿದೆ. ನ್ಯಾಯಾಂಗ ನಿಂದನೆ ಮಾಡಿದ ಎಲ್ಲರ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರ್ಟ್ ಸೂಚಿಸಿದೆ.